

ಪಾ.ಶ್ರೀ.ಅನಂತರಾಮ್ ಕೋಲಾರ
ಜಿಲ್ಲೆಯಲ್ಲಿ ಕಾಡು ಪ್ರಾಣಿಗಳ ಸಂರಕ್ಷಣೆ ಹಾಗೂ ಅವುಗಳಿಂದ ಆಗುತ್ತಿರುವ ಹಾನಿ ತಡೆಗಟ್ಟುವುದು ಅರಣ್ಯ ಇಲಾಖೆಗೆ ಸವಾಲಾಗಿದೆ.
ನೆರೆಯ ಆಂಧ್ರ ಮತ್ತು ತಮಿಳುನಾಡಿನಿಂದ ಪ್ರತಿವರ್ಷ ಕಾಡಾನೆಗಳು ನೀರು, ಆಹಾರ ಮತ್ತು ಸಂತಾನೋತ್ಪತ್ತಿಗೆ ವಲಸೆ ಬರುತ್ತವೆ, ಕಾರಿಡಾರ್ ಇಲ್ಲದಿರುವುದರಿಂದ ಗಡಿಭಾಗದ ಗ್ರಾಮಗಳಿಗೆ ನುಗ್ಗಿ ಬೆಳೆ ನಾಶದ ಜತೆಗೆ ಮನುಷ್ಯರನ್ನು ಬಲಿ ಪಡೆಯುತ್ತಿವೆ.
ಅರಣ್ಯ ಪ್ರದೇಶದಲ್ಲಿ ವಾಹನಗಳು ಸಂಚರಿಸಲು ಯೋಗ್ಯ ರಸ್ತೆ ಇಲ್ಲದಿರುವುದರಿಂದ ಆನೆಗಳ ವಾಸಸ್ಥಾನ ಪತ್ತೆ ಹಚ್ಚಲು ಕಷ್ಟವಾಗಿದೆ. ಕಾಡಾನೆಗಳು ಗ್ರಾಮಗಳಿಗೆ ಪ್ರವೇಶಿಸದಂತೆ ತಡೆಯಲು ಕಾರಿಡಾರ್ ನಿರ್ಮಾಣದ ಅವಶ್ಯಕತೆ ಕುರಿತು ಅರಣ್ಯ ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ವರ್ಷಗಳೇ ಕಳೆದರೂ ಅನುದಾನವಿಲ್ಲದೆ ಯೋಜನೆ ನನೆಗುದಿಗೆ ಬಿದ್ದಿದೆ.
ತಮಿಳುನಾಡಿನ ಹೊಸೂರು ಪ್ರಾದೇಶಿಕ ಅರಣ್ಯ ವಿಭಾಗದವರು ಆನೆ ಹಾವಳಿ ತಡೆಯಲು ವಿದ್ಯುತ್ ತಂತಿ ಬೇಲಿ ಅಳವಡಿಸಿರುವಂತೆ ಮಾಲೂರು, ಬಂಗಾರಪೇಟೆ ತಾಲೂಕಿನ ಗಡಿಭಾಗದಲ್ಲಿಯೂ ಅಳವಡಿಸಲು ಈ ಹಿಂದೆ ಡಿಎಫ್‌ಒ ಆಗಿದ್ದ ಚಕ್ರಪಾಣಿ ಸರ್ಕಾರಕ್ಕೆ ಕಳುಹಿಸಿರುವ ಪ್ರಸ್ತಾವನೆಗೆ ಅನುಮೋದನೆ ಸಿಕ್ಕಿಲ್ಲ.
ಕಾಡಾನೆ ತಡೆಯಲು ರೈಲ್ವೆ ಕಂಬಿ ಬಳಸಿ ಬ್ಯಾರಿಕೇಡ್ ನಿರ್ಮಿಸಲು ಚಿಂತಿಸಲಾಗಿತ್ತು. ಆದರೆ ಒಂದು ಕಿಮೀ ಬ್ಯಾರಿಕೇಡ್‌ಗೆ 1 ಕೋಟಿ ರೂ. ವೆಚ್ಚವಾಗುವುದರಿಂದ ಅನುದಾನವಿಲ್ಲದೆ ಅಧಿಕಾರಿಗಳು ಸುಮ್ಮನಾಗಿದ್ದಾರೆ.
ಬೆಳೆ ನಷ್ಟವಾದರೆ ಸರ್ಕಾರ ಪರಿಹಾರ ನೀಡುತ್ತದೆ, ಪ್ರಾಣ ಹೋದರೂ 7.50 ಲಕ್ಷ ರೂ. ಸಿಗುತ್ತದೆ, ಆದರೆ ಸತ್ತ ವ್ಯಕ್ತಿಯನ್ನು ತಂದುಕೊಡಲಾಗದು ಎಂಬುದು ಇಲಾಖೆ ವಾದ. ಒಂದು ವೇಳೆ ಯಾರಾದರೂ ಆನೆಗಳನ್ನು ಕೊಂದರೆ ಅವುಗಳ ಸಂತತಿ ತಗ್ಗಿಸಿದಂತಾಗುತ್ತದೆ, ತಪ್ಪಿತಸ್ಥರು ಜೈಲು ಪಾಲಾಗುತ್ತಾರೆಂಬ ಕಾರಣದಿಂದ ಆನೆಗಳನ್ನು ಗಡಿ ದಾಟಿಸಲು, ಬೆಳೆ ನಾಶ ತಪ್ಪಿಸಲು ಹಾಗೂ ಗ್ರಾಮಸ್ಥರ ಪ್ರಾಣ ಉಳಿಸಲು ಸಿಬ್ಬಂದಿ ಪರದಾಡುವಂತಾಗಿದೆ.
ಜಿಲ್ಲೆಯಲ್ಲಿ ಕಳೆದ 10 ವರ್ಷಗಳಲ್ಲಿ ಸುಮಾರು 20 ಜನ ಆನೆ ದಾಳಿಯಿಂದ ಸತ್ತಿದ್ದಾರೆ, ಸರ್ಕಾರ ಈವರೆಗೆ 19 ಜನರಿಗೆ ಪರಿಹಾರ ನೀಡಿದ್ದು, ಇತ್ತೀಚೆಗೆ ಮೃತಪಟ್ಟ ರೈತರ ಕುಟುಂಬದಲ್ಲಿ ಪರಿಹಾರ ಪಡೆಯುವ ಹಕ್ಕು ಯಾರಿಗಿದೆ ಎಂಬ ವಿಚಾರದಲ್ಲಿ ತಕರಾರು ಇರುವುದರಿಂದ ಚೆಕ್ ವಿತರಣೆ ವಿಳಂಬವಾಗಿದೆ.
ಚಿರತೆಗಳಿಗೂ ಕಾರಿಡಾರ್: ಜಿಲ್ಲೆಯಲ್ಲಿ ಬೆಟ್ಟ-ಗುಡ್ಡ ಹೆಚ್ಚಿರುವುದರಿಂದ ಈವರೆಗೆ ಚಿರತೆಗಳ ಸಂಖ್ಯೆ ಎಷ್ಟಿದೆ ಎಂದು ಗಣತಿ ನಡೆಸಲು ಸಾಧ್ಯವಾಗಿಲ್ಲ. ಕೋಲಾರ, ಮಾಲೂರು ತಾಲೂಕಿನಲ್ಲಿ ಅತಿ ಇವೆ ಎಂದು ಅಂದಾಜಿಸಲಾಗಿದ್ದು, ಕೆಲ ದಿನಗಳ ಹಿಂದೆ ಮುಳಬಾಗಿಲಿನ ದೇವರಾಯಸಮುದ್ರದಲ್ಲೂ ಎರಡು ಚಿರತೆ ಕಾಣಿಸಿಕೊಂಡಿದ್ದು, ಕಾರಿಡಾರ್ ಅವಶ್ಯಕತೆ ಕುರಿತು ಚಿಂತನೆ ನಡೆಯುತ್ತಿದೆ.
ಜಿಲ್ಲೆ ಶತಶೃಂಗ ಪರ್ವತ ಶ್ರೇಣಿಯಿಂದ ಆವೃತಗೊಂಡಿರುವುದರಿಂದ ವನ್ಯಪ್ರಾಣಿಗಳಿಗೆ ಕೊರತೆ ಇಲ್ಲ, ಸರ್ಕಾರ ಕಾಡು ಪ್ರಾಣಿಗಳ ಸಂರಕ್ಷಣೆ ಹಾಗೂ ಅವುಗಳಿಂದ ಅಪಾಯ ಆಗದಂತೆ ಯೋಜನೆ ರೂಪಿಸಿದಲ್ಲಿ ಬೆಟ್ಟ-ಗುಡ್ಡ ಹಾಗೂ ಅರಣ್ಯ ಪ್ರದೇಶಗಳ ಒತ್ತುವರಿ ತಪ್ಪಿಸಬಹುದು.
ಕೋಲಾರ ಜಿಲ್ಲೆಯಲ್ಲಿ ವನ್ಯಜೀವಿಗಳ ಸಂರಕ್ಷಣೆಗೆ ಸರ್ಕಾರ ಗಮನಹರಿಸಬೇಕು, ಆನೆಗಳಿಂದ ಆಗುತ್ತಿರುವ ಹಾನಿ ತಪ್ಪಿಸಬೇಕು. ಪ್ರಾಣಿ, ಪಕ್ಷಿಗಳು ವಾಹನಕ್ಕೆ ಸಿಲುಕಿ ಸಾಯುವುದನ್ನು ತಪ್ಪಿಸುವ ಜತೆಗೆ ಗಾಯಗೊಂಡ ಪ್ರಾಣಿಗಳನ್ನು ಚಿಕಿತ್ಸೆ ದಾಖಲಿಸಲು ಅರಣ್ಯ ಇಲಾಖೆಗೆ ವಿಶೇಷ ಅಂಬುಲೆನ್ಸ್ ವ್ಯವಸ್ಥೆ ಮಾಡಬೇಕು, ಪಶು ಆಸ್ಪತ್ರೆ ಮಾದರಿಯಲ್ಲಿ ಚಿಕಿತ್ಸಾ ಘಟಕ ತೆರೆಯಬೇಕು. ಕೆ.ಎನ್.ತ್ಯಾಗರಾಜು, ಪರಿಸರ ಪ್ರೇಮಿ, ಕೋಲಾರ