

ಕೋಲಾರ: ಚಳಿ, ಮಳೆ, ಗಾಳಿ ಲೆಕ್ಕಿಸದೆ ಪ್ರತಿದಿನ ಬೆಳಗ್ಗೆ 4 ಗಂಟೆಗೆ ಎದ್ದು ನಗರ ಸ್ವಚ್ಛತಾ ಕಾರ್ಯದಲ್ಲಿ ನಿರತರಾಗುತ್ತಿದ್ದ ಪೌರ ಕಾರ್ಮಿಕರು ನಗರಸಭೆಯಿಂದ ಹಮ್ಮಿಕೊಂಡಿದ್ದ ಎರಡು ದಿನಗಳ ಕ್ರೀಡಾಕೂಟದಲ್ಲಿ ಸಾಮೂಹಿಕವಾಗಿ ಪಾಲ್ಗೊಂಡು ಸಂಭ್ರಮಿಸಿದರು.
ಪ್ರತಿವರ್ಷ ಪೌರ ಕಾರ್ಮಿಕರ ದಿನಾಚರಣೆ ಪ್ರಯುಕ್ತ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆ ನಡೆಸಬೇಕು. ಆದರೆ ಈ ಹಿಂದಿನ ಪೌರಾಯುಕ್ತರು ಸಾಂಕೇತಿಕವಾಗಿ ಕಾರ್ಯಕ್ರಮ ನಡೆಸಿ ಕೈ ತೊಳೆದುಕೊಳ್ಳುತ್ತಿದ್ದರು. ಈ ಬಾರಿ ಅನುದಾನ ವ್ಯರ್ಥವಾಗದಿರಲೆಂದು ಪೌರಾಯುಕ್ತ ಶ್ರೀಕಾಂತ್ ಆಡಳಿತಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಅವರ ಅನುಮತಿ ಪಡೆದು ಕ್ರೀಡಾಕೂಟ ಆಯೋಜಿಸುವ ಮೂಲಕ ಪೌರಕಾರ್ಮಿಕರಲ್ಲಿ ಹುರುಪು-ಹುಮ್ಮಸ್ಸು, ಸಂತೋಷ ಉಂಟು ಮಾಡಿದ್ದಾರೆ.
ಪೌರಕಾರ್ಮಿಕರು ಕಬಡ್ಡಿ, ಕ್ರಿಕೆಟ್‌ನಲ್ಲಿ ಭಾಗವಹಿಸಿ ಸಂಭ್ರಮಿಸಿದರು. ತಂಡಕ್ಕೆ ಹೆಚ್ಚು ಅಂಕ ಸಿಕ್ಕೊಡನೆ ಕುಣಿದು ಕುಪ್ಪಳಿಸಿದರು. ಮಹಿಳೆಯರೂ ಕ್ರೀಡಾಕೂಟದಲ್ಲಿ ಭಾಗವಹಿಸಿ ಪ್ರತಿಭೆ ಅನಾವರಣಗೊಳಿಸಿದರು.
ಬುಧವಾರ ಬೆಳಗ್ಗೆ 11ಕ್ಕೆ ನಗರಸಭೆಯಲ್ಲಿ ಬಹುಮಾನ ವಿತರಣಾ ಕಾರ್ಯಕ್ರಮ ಆಯೋಜಿಸಲಾಗಿದೆ. ಡಿಸಿ ಸೂಚನೆಯಂತೆ ಪೌರ ಕಾರ್ಮಿಕರು ಶಿಸ್ತು ಕಾಪಾಡಿದ್ದಾರೆ, ಕಾರ್ಮಿಕರಲ್ಲಿದ್ದ ಆಸಕ್ತಿ ಮತ್ತು ಪ್ರತಿಭೆ ಕಂಡು ಮೂಖವಿಸ್ಮಿತನಾಗಿರುವೆ ಎಂದು ಪೌರಾಯುಕ್ತ ಶ್ರೀಕಾಂತ್ ತಿಳಿಸಿದ್ದಾರೆ.