

ಕೋಲಾರ: ಕೋಲಾರ ನಗರದಾದ್ಯಂತ ಹದಗೆಟ್ಟಿರುವ ರಸ್ತೆ ದುರಸ್ತಿ ಪಡಿಸದಿರುವ ಕ್ರಮ ಖಂಡಿಸಿ ನಗರದ ಶ್ರೀ ವೇಣುಗೋಪಾಲ ಸ್ವಾಮಿ ಪುಷ್ಕರಣಿ ಸಮೀಪದ ಪೆಟ್ರೋಲ್ ಬಂಕ್ ಮುಂಭಾಗ ರಸ್ತೆಯಲ್ಲಿನ ಹಳ್ಳದಲ್ಲಿ ತುಂಬಿದ್ದ ನೀರಿಗೆ ರೈತ ಸಂಘದ ಮುಖಂಡರು ಸೋಮವಾರ ಬಾಗಿನ ಅರ್ಪಿಸಿ ಜನಪ್ರತಿನಿಧಿಗಳ ಕಾರ್ಯವೈಖರಿಯನ್ನು ಅಣಕಿಸಿದರು.
ಜಿಲ್ಲಾ ಕೇಂದ್ರ ಕೋಲಾರದಲ್ಲಿ ಹದಗೆಟ್ಟ ರಸ್ತೆ ದುರಸ್ತಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್, ಸಂಸದ ಮುನಿಸ್ವಾಮಿ ಮತ್ತು ಶಾಸಕ ಶ್ರೀನಿವಾಸಗೌಡ ಇಚ್ಛಾಶಕ್ತಿ ಪ್ರದರ್ಶಿಸಿಲ್ಲವೆಂದು ಜನಪ್ರತಿನಿಧಿಗಳ ಮುಖವಾಡ ಧರಿಸಿ ಪ್ರತಿಭಟಿಸಿದರು.
ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ಜಿಲ್ಲಾ ಕೇಂದ್ರ ಕೋಲಾರದ ರಸ್ತೆಗಳಲ್ಲಿ ನೆಮ್ಮದಿಯಿಂದ ಓಡಾಡಲು ಸಾಧ್ಯವಿಲ್ಲ. ನಗರಸಭೆ ಚುನಾವಣೆ ನಡೆದು ವರ್ಷವೇ ಕಳೆದಿದ್ದರೂ ಆಡಳಿತ ಮಂಡಳಿಯಿಲ್ಲ. ಅಮೃತ್‌ಸಿಟಿ, ಒಳಚರಂಡಿ ಯೋಜನೆಯ ಕಾಮಗಾರಿಗಳು ಕಳಪೆಯಾಗಿದೆ. ಜನತೆ ಸಮಸ್ಯೆ ಎದುರಿಸುತ್ತಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರು ತಮಗೆ ಸಂಬಂಧವೇ ಇಲ್ಲವೆನ್ನುವಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಆಪಾದಿಸಿದರು.
ತಾಲೂಕಿನ ಎಸ್.ಅಗ್ರಹಾರ ಕೆರೆ ಬಾಗೀನ ಕಾರ್ಯಕ್ರಮಕ್ಕೆ ತಮ್ಮನ್ನು ಆಹ್ವಾನಿಸಿಲ್ಲವೆಂದು ಮುನಿಸಿಕೊಂಡು ಅಧಿಕಾರಿಗಳ ಮೇಲೆ ಅಧಿಕಾರ ಚಲಾಯಿಸುತ್ತಿರುವುದು, ಡಿವೈಎಸ್ಪಿ ವರ್ಗಾವಣೆ ಖಂಡನೀಯ. ಸಂಸದ ಎಸ್.ಮುನಿಸ್ವಾಮಿ ಅಭಿವೃದ್ಧಿ ಕಡೆಗೆ ಒತ್ತು ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತಸಂಘದ ಜಿಲ್ಲಾ ಮಾಹಿಳಾ ಘಟಕದ ಅಧ್ಯಕ್ಷೆ ಎ.ನಳಿನಿಗೌಡ ಮಾತನಾಡಿ, ಜಿಪಂ ಸಿಇಒ ಹುದ್ದೆ ಖಾಲಿಯಾಗಿ 2 ತಿಂಗಳಾದರೂ ಸಿಇಒ ನೇಮಕದ ಬಗ್ಗೆ ಮಾತನಾಡದ ಜಿಪಂ ಅಧ್ಯಕ್ಷರು ಕೆಸಿ ವ್ಯಾಲಿ ಯೋಜನೆಯಡಿ ಕೋಟಿ ಕೋಟಿ ಲೂಟಿಯಾಗಿದೆ. ಅಧಿಕಾರಿಗಳು ಶಿಷ್ಟಾಚಾರ ಪಾಲಿಸದೆ ತಮ್ಮನ್ನು ಕಡೆಗಣಿಸಿದ್ದಾರೆ ಎಂದು ಸಭೆಗಳಲ್ಲಿ ಸುದೀರ್ಘ ಚರ್ಚೆ ನಡೆಸುತ್ತಿದ್ದಾರೆ. ಕೋಲಾರ ನಗರ ಸೇರಿ ಜಿಲ್ಲೆಯಲ್ಲಿ ಆಗಬೇಕಿರುವ ಅಭಿವೃದ್ಧಿ ಕಾರ್ಯಗಳ ಕುರಿತು ಗಮನ ಹರಿಸದಿದ್ದರೆ ಜನರೇ ಬೀದಿಗಿಳಿದು ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿ ನಗರಸಭೆ ಅಧಿಕಾರಿ ಮಂಜುನಾಥ್ ಮನವಿ ಸಲ್ಲಿಸಿದರು.
ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ಈಕಂಬಳ್ಳಿ ಮಂಜುನಾಥ್, ಐತಾಂಡಹಳ್ಳಿ ಮಂಜುನಾಥ್, ಬಂಗವಾದಿ ನಾಗರಾಜ್‌ಗೌಡ, ಮಂಗಸಂದ್ರ ನಾಗೇಶ್, ತಿಮ್ಮಣ್ಣ, ಮಾಸ್ತಿ ವೆಂಕಟೇಶ್, ವಕ್ಕಲೇರಿ ಹನುಮಯ್ಯ, ಸುಬ್ರಮಣಿ, ರಾಮಸ್ವಾಮಿ ಸುಪ್ರೀಂಚಲ, ಜಗದೀಶ್, ಸುಧಾಕರ್ ಇತರರು ಇದ್ದರು.