ಸ್ವಚ್ಛತೆ ಅಣಕಿಸಿದ ಪೌರಾಡಳಿತ ಸಚಿವ ನಾರಾಯಣಗೌಡ

14-klr-13
Published on

ಕೋಲಾರ: ಕೋಲಾರದಲ್ಲಿ ಒಂದೇ ಒಂದು ರಸ್ತೆ ಅಭಿವೃದ್ಧಿಯಾಗಿಲ್ಲ. ಒಂದಾದರೂ ಸ್ವಚ್ಛವಾಗಿದೆ ಎಂಬುದಕ್ಕೆ  ಉದಾಹರಣೆ ಕೊಟ್ಟರೆ ನಾನು ರಾಜಕಾರಣ ಬಿಡುವೆ ಎಂದು ಪೌರಾಡಳಿತ ಸಚಿವ ನಾರಾಯಣಗೌಡ ಸ್ಥಳೀಯ ಸಂಸ್ಥೆ ಅಧಿಕಾರಿಗಳಿಗೆ ಸವಾಲು ಹಾಕಿದರು.

ಜಿಲ್ಲಾಡಳಿತ ಭವನದಲ್ಲಿ ಸೋಮವಾರ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿ, ಕೋಲಾರದಲ್ಲಿ ರಸ್ತೆ ಹದಗೆಟ್ಟಿವೆ. ಇದು ನನ್ನ ಅನುಭವಕ್ಕೇ ಬಂತು. ಕಸದ ಸಮಸ್ಯೆಯಿದೆ, ಆದಾಯ ಸಂಗ್ರಹಣೆ ಶೂನ್ಯ. ನಿಮ್ಮ ಪಾಕೆಟ್ ಮನಿಗಷ್ಟೇ ಸೀಮಿತವಾಗಿ ಬಿಟ್ಟಿದ್ದೀರಿ. ನೀವು ನೀಡಿದ ವರದಿಯಾದರೂ ಸರಿಯಾಗಿದೆಯೇ ಎಂದು ಯೋಜನಾ ನಿರ್ದೇಶಕರು, ಆಯುಕ್ತರನ್ನು ಪ್ರಶ್ನಿಸಿದರು.

ಹೇಳಿದ್ದನ್ನು ಕೇಳಲು ನಾನು ಕಳ್ಳೆಪುರಿ ತಿನ್ನಲು ಬಂದಿಲ್ಲ, ಪ್ರಗತಿ ಪರಿಶೀಲನೆಗೆ ಬಂದಿದ್ದೇನೆ, ಯೋಜನಾ ನಿರ್ದೇಶಕರು ಪ್ರವಾಸಿ ಮಂದಿರಕ್ಕೆ ಸೀಮಿತವಾಗಿದ್ದಾರೆ, ಇಡೀ ನಗರದಲ್ಲಿ ಜಾಹೀರಾತು ಫಲಕ, ಫ್ಲೆಕ್ಸ್ ತುಂಬಿವೆ, ಇನ್ನು ಮುಂದೆ ್ಲೆಕ್ಸ್ ಹಾಕಲು ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಕಾರ್ಯವೈಖರಿ ಬದಲಾಗದಿದ್ದರೆ ತಕ್ಕಪಾಠ ಕಲಿಸಬೇಕಾದೀತು ಎಂದು ಎಚ್ಚರಿಕೆ ನೀಡಿ, ಇಷ್ಟೆಲ್ಲಾ ಆಗುತ್ತಿದ್ದರೂ ನೀವೇನು ಮಾಡುತ್ತಿದ್ದೀರಿ ಎಂದು ಡಿಸಿಯನ್ನು ಕೇಳಿದರು.

ನೀವು ಆಗಿಂದಾಗ್ಗೆ ಪ್ರಗತಿ ಪರಿಶೀಲನೆ ನಡೆಸಿ, ವ್ಯವಸ್ಥೆ ಸರಿಪಡಿಸಬೇಕು ಎಂದ ಸಚಿವರು ಸಭೆಗೆ ಗೈರಾಗಿದ್ದ ಕೆಜಿಎಫ್ ನಗರಸಭೆ ಎಇಇ ಶ್ರೀಧರ್ ಅಮಾನತಿಗೆ ಸೂಚಿಸಿದರು.

ಕ್ಷಮೆ ಕೋರಿದ ಪೌರಾಯುಕ್ತ: ಎಲ್ಲ ನಗರಸಭೆ, ಪುರಸಭೆ ವ್ಯಾಪ್ತಿಯ ಆಡಳಿತ ಹದಗೆಟ್ಟಿದೆ. ಕೋಲಾರ ನಗರಸಭೆ ಆಯುಕ್ತರು ಕೆಲಸ ಮಾಡುತ್ತಿಲ್ಲ ಎಂದು ಎಮ್ಮೆಲ್ಸಿ ವೈ.ಎ.ನಾರಾಯಣಸ್ವಾಮಿ ಆರೋಪಿಸಿದಾಗ, ‘ಏನ್ ಸಾರ್ ನನ್ನನ್ನೇ ಟಾರ್ಗೆಟ್ ಮಾಡುತ್ತೀರಾ? ನಗರಸಭೆಯ ಆದಾಯ ಹೆಚ್ಚಿಸಲು ಹೊಸ ರೂಲ್ಸ್ ತರುತ್ತಿದ್ದೇವೆ’ ಎಂದು ಶ್ರೀಕಾಂತ್ ನುಡಿದರು.

ಸಿಡಿಮಿಡಿಗೊಂಡ ಸಚಿವರು, ಶಾಸಕರು ಎನ್ನುವುದನ್ನು ನೋಡದೆ ಅವಾಜ್ ಹಾಕುತ್ತೀರಿ, ಕೆಲಸ ನೆಟ್ಟಗೆ ಮಾಡದಿದ್ದುದಕ್ಕೆ ಹೇಳ್ತಿದ್ದಾರೆ. ಅವಾಜ್ ಹಾಕಿದರೆ ಅಮಾನತು ಮಾಡಿ ಹೊರಗೆ ಕಳುಹಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಕ್ಷಮೆ ಕೇಳುವಂತೆ ವೈಎಎನ್ ಪಟ್ಟುಹಿಡಿದಾಗ ಆಯುಕ್ತರು ಕ್ಷಮೆ ಕೋರಿದರು.

ಪೌರಾಡಳಿತ ಇಲಾಖೆ ವ್ಯಾಪ್ತಿಯ ಪೌರಕಾರ್ಮಿಕರನ್ನು ಏಜೆನ್ಸಿ ಹಾಗೂ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳುತ್ತಿದ್ದು, ಮುಂದಿನ ದಿನಗಳಲ್ಲಿ ಇಲಾಖೆಯಿಂದ ಪೌರಕಾರ್ಮಿಕರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದರು.

ಉಸ್ತುವಾರಿ ಸಚಿವ ಎಚ್.ನಾಗೇಶ್ ಮಾತನಾಡಿ, ವಾಣಿಜ್ಯ ಮಳಿಗೆಗಳನ್ನು ಉಪ ಗುತ್ತಿಗೆ ನೀಡಿರುವವರ ವಿರುದ್ಧ ಏನು ಕ್ರಮ ಕೈಗೊಂಡಿದ್ದೀರಿ ಎನ್ನುವ ಬಗ್ಗೆ ಸಭೆಗೆ ಸಮರ್ಪಕ ಮಾಹಿತಿ ನೀಡುತ್ತಿಲ್ಲ. ಕೋಲಾರದಲ್ಲಿ ಕರೊನಾ ಸಂದರ್ಭದಲ್ಲಿ ಮಳಿಗೆ ಹರಾಜು ಹಾಕಲಾಗಿದೆ, ಕೆಜಿಎಫ್‌ನಲ್ಲಿ ಯಾಕೆ ಮಾಡಿಲ್ಲ? ಇದರಲ್ಲಿ ಕಾನೂನು ಸಲಹೆಗಾರರು ಮತ್ತು ಅಧಿಕಾರಿಗಳು ಶಾಮೀಲಾಗಿದ್ದು, ಕೂಡಲೇ ಬದಲಾವಣೆ ಮಾಡಿ ಎಂದು ಡಿಸಿಗೆ ಸೂಚಿಸಿದರು.

ಶಾಸಕರಾದ ಕೆ.ಶ್ರೀನಿವಾಸಗೌಡ, ರೂಪಾ ಶಶಿಧರ್, ಎಂಎಲ್‌ಸಿ ಗೋವಿಂದರಾಜು, ಡಿಸಿ ಸಿ.ಸತ್ಯಭಾಮ, ಉಪವಿಭಾಗಾಧಿಕಾರಿ ಸೋಮಶೇಖರ್ ಹಾಗೂ ಇತರ ಅಧಿಕಾರಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net