ಜೀವನ ಶೈಲಿ ಬದಲಿಸಿಕೊಂಡರೆ ಉತ್ತಮ ಆರೋಗ್ಯ

11-klr-4
Published on

ಕೋಲಾರ: ಇಂದಿನ ಒತ್ತಡದ ದಿನಗಳಲ್ಲಿ ನಮ್ಮ ಜೀವನ ಶೈಲಿ, ಆಹಾರ ಪದ್ಧತಿ ಬದಲಿಸಿಕೊಂಡರೆ ಆರೋಗ್ಯವಂತರಾಗಿ ಜೀವನ ನಡೆಸಲು ಸಾಧ್ಯವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್. ನಾಗೇಶ್ ಅಭಿಪ್ರಾಯಪಟ್ಟರು.

ನಗರದ ಪತ್ರಕರ್ತರ ಭವನದಲ್ಲಿ ಪತ್ರಕರ್ತರ ಸಂಘ ಮತ್ತು ಮಣಿಪಾಲ್ ಆಸ್ಪತ್ರೆ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಪ್ರಸ್ತುತ ವಿದ್ಯಮಾನ ಹೃದಯಾಘಾತದಿಂದ ಪಾರಾಗುವುದರ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಪತ್ರಕರ್ತರಿಗೆ ಹೆಲ್ತ್ ಕಾರ್ಡ್ ವಿತರಿಸಿ ಮಾತನಾಡಿ, ಮಾನ್ಯತೆ ಪಡೆದ ಪತ್ರಕರ್ತರಿಗೆ ಮಾತ್ರವಲ್ಲದೆ ಎಲ್ಲ ಪತ್ರಕರ್ತರಿಗೂ ಹೆಲ್ತ್ ಕಾರ್ಡ್ ವಿತರಿಸುವಂತೆ ಸೆ.15ರಂದು ನಡೆಯುವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿಗಳನ್ನು ಕೋರಲಾಗುವುದು ಎಂದರು.

ಉಪವಿಭಾಗಾಧಿಕಾರಿ ಸೋಮಶೇಖರ್ ಮಾತನಾಡಿ, ಕರೊನಾ ಸಂದರ್ಭದಲ್ಲಿ ಮಣಿಪಾಲ್ ಆಸ್ಪತ್ರೆ ಪತ್ರಕರ್ತರಿಗೆ ಶೇ.20ರ ರಿಯಾಯಿತಿ ದರದ ಆರೋಗ್ಯ ಕಾರ್ಡ್ ವಿತರಿಸುತ್ತಿರುವುದು ಸ್ವಾಗತಾರ್ಹ. ಸರ್ಕಾರದಿಂದ ಆಯುಷ್ಮಾನ್ ಆರೋಗ್ಯ ಕಾರ್ಡ್ ಶೀಘ್ರ ವಿತರಿಸಲು ವಾರ್ತಾ ಮತ್ತು ಪ್ರಚಾರ ಇಲಾಖೆಗೆ ಸೂಚಿಸಲಾಗುವುದು ಎಂದರು.

ಸಂಘದ ಜಿಲ್ಲಾಧ್ಯಕ್ಷ ವಿ.ಮುನಿರಾಜು ಮಾತನಾಡಿ, ಮಣಿಪಾಲ್ ಆಸ್ಪತ್ರೆ ಆಡಳಿತ ಮಂಡಳಿ ಸಾಮಾಜಿಕ ಸೇವೆ ಬಗ್ಗೆ ಕಾಳಜಿ ಹೊಂದಿದೆ. ಈ ಹಿಂದೆ ಕರೊನಾ ಕುರಿತು ವೆಬಿನಾರ್ ಮೂಲಕ ಪತ್ರಕರ್ತರಿಗೆ ಕಾರ್ಯಾಗಾರ ಆಯೋಜಿಸಿತ್ತು. ಈಗ ಹೃದಯಾಘಾತದ ಬಗ್ಗೆ ವೆಬಿನಾರ್‌ನಲ್ಲಿ ಉಪನ್ಯಾಸ ಆಯೋಜಿಸುವ ಜತೆಗೆ ಜಿಲ್ಲೆಯ 251 ಪತ್ರಕರ್ತರಿಗೂ ಹೆಲ್ತ್ ಕಾರ್ಡ್ ವಿತರಿಸುತ್ತಿರುವುದು ಖುಷಿಯ ವಿಷಯ ಎಂದರು.

ವೆಬಿನಾರ್ ಮೂಲಕ ಉಪನ್ಯಾಸ ನೀಡಿದ ಇಂಟರ್ವೆನ್ಷನಲ್ ಕಾರ್ಡಿಯೋಲಜಿಯ ಸಲಹೆಗಾರ ಡಾ. ಜಿ. ಶ್ರೀಧರ, ಹೃದಯ ಸಂಬಂಧಿ ಕಾಯಿಲೆ ಹೊಂದಿರುವ ರೋಗಿಗಳು ಕರೊನಾ ಸೋಂಕಿನಿಂದ ಹೆಚ್ಚಿನ ಅಪಾಯ ಹೊಂದಿದ್ದಾರೆ. ನಮ್ಮ ಹೃದಯದ ಆರೋಗ್ಯಕ್ಕೆ ವಿಶೇಷ ಗಮನ ನೀಡುವುದು ಮುಖ್ಯ. ಇಂದು 30ರಿಂದ 40 ವಯೋಮಾನದವರೂ ಹೃದಯಾಘಾತಕ್ಕೆ ಒಳಗಾಗುತ್ತಿರುವುದು ಕಳವಳಕಾರಿ ಎಂದರು.

ಹೃದಯಾಘಾತ ಮಾರಣಾಂತಿಕವಾಗಿದ್ದು, ಆಸ್ಪತ್ರೆಗೆ ಬೇಗ ದಾಖಲಾದರೆ ಶೇ.85 ಹೃದಯಾಘಾತವನ್ನು ತಡೆಯಬಹುದಾಗಿದೆ. ಧೂಮಪಾನ ಇನ್ನಿತರ ದುಶ್ಚಟಗಳಿಂದ ದೂರ ಇರುವುದು, ಮಧುಮೇಹ ನಿಯಂತ್ರಣ, ಬೊಚ್ಚು ಮತ್ತು ಒತ್ತಡ ನಿರ್ವಹಣೆ, ಒಳ್ಳೆಯ ತೂಕ ಕಾಪಾಡಿಕೊಳ್ಳುವುದು. ಆರೋಗ್ಯಕರ ಸಮತೋಲನ ಆಹಾರ ಪದ್ಧತಿ, ನಿಯಮಿತ ವ್ಯಾಯಾಮ ಈ ರೀತಿಯ ಜೀವನ ಚಕ್ರ ಸುಧಾರಿಸಿಕೊಂಡರೆ ಹೃದಯಾಘಾತ ತಡೆಗಟ್ಟಬಹುದು ಎಂದರು.

ತಹಸೀಲ್ದಾರ್ ಆರ್. ಶೋಭಿತಾ, ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಬಿ.ವಿ.ಗೋಪಿನಾಥ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಖಜಾಂಜಿ ಸುರೇಶ್, ಮಣಿಪಾಲ್ ಆಸ್ಪತ್ರೆ ಪ್ರತಿನಿಧಿ ಅರುಣ್ ಚಕ್ರವರ್ತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net