ಗ್ರಾಮ ಪಂಚಾಯಿತಿ ಚುನಾವಣೆ ಗೆಲ್ಲಲು ತರಹೇವಾವರಿ ಸಿದ್ಧತೆ

1
Published on

ಪಾ.ಶ್ರೀ.ಅನಂತರಾಮ್ ಕೋಲಾರ

ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮೇಲುಗೈ ಸಾಧಿಸಲು ಆಡಳಿತಾರೂಢ ಬಿಜೆಪಿ, ಪ್ರತಿಪಕ್ಷಗಳಾದ ಜೆಡಿಎಸ್, ಕಾಂಗ್ರೆಸ್ ಮತ್ತು ಇನ್ನಿತರ ಪಕ್ಷಗಳು ಕಾರ್ಯತಂತ್ರ ಹೆಣೆಯಲು ಪೈಪೋಟಿ ನಡೆಸಿವೆ.

ಬಿಜೆಪಿ ಮತ್ತು ಕಾಂಗ್ರೆಸ್ ಯಾವುದೇ ಪಕ್ಷದೊಂದಿಗೂ ಮೈತ್ರಿ ಇಲ್ಲದೆ ಜಿಲ್ಲೆಯ ಎಲ್ಲ 156 ಪಂಚಾಯಿತಿಗಳಿಗೂ ಸ್ಪರ್ಧಿಸಲು ತಯಾರಿ ನಡೆಸಿವೆ. ಕ್ಷೇತ್ರದ ಮತದಾರರು, ಸ್ಥಳೀಯ ಮುಖಂಡರ ಅಭಿಪ್ರಾಯಕ್ಕೆ ತಕ್ಕಂತೆ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ಜೆಡಿಎಸ್ ನಿರ್ಧರಿಸಿದೆ.

ಬಿಜೆಪಿ ಗೆಲುವಿಗೆ ಕೋರ್ ಕಮಿಟಿ ಈಗಾಗಲೆ ಪ್ರತಿ ಬೂತ್‌ಮಟ್ಟದಲ್ಲಿ ಸಂಘಟನೆಗೆ ಚಾಲನೆ ನೀಡಿದೆಯಲ್ಲದೆ, ಸಾಮೂಹಿಕ ನಾಯಕತ್ವದಲ್ಲಿ ಜಿಲ್ಲಾದ್ಯಂತ ಪ್ರವಾಸ ಕೈಗೊಂಡು ಗ್ರಾಪಂಗಳನ್ನು ವಶಕ್ಕೆ ಪಡೆಯಲು ಲೆಕ್ಕಾಚಾರ ಹಾಕುತ್ತಿದೆ. ಕರೊನಾ ಹಿನ್ನೆಲೆಯಲ್ಲಿ ಸಾರ್ವಜನಿಕ ಸಭೆ ನಡೆಸಲು ಸಾಧ್ಯವಾಗದಿರುವುದರಿಂದ ಪ್ರತಿ ಮಂಡಲ ವ್ಯಾಪ್ತಿಯಲ್ಲಿ ವಿಡಿಯೋ ಕಾನ್ಫರೆನ್ಸ್ ಹಾಗೂ ವರ್ಚುಯಲ್ ಸಂವಾದದ ಮೂಲಕ ಗುರಿ ಸಾಧಿಸಲು ಹೆಜ್ಜೆ ಇಟ್ಟಿದೆ.

ಪ್ರಾಮಾಣಿಕ ಕಾರ್ಯಕರ್ತರಿಗೆ ಟಿಕೆಟ್ ನೀಡಲು ನಿರ್ಧರಿಸಿದೆ. ಕಾಂಗ್ರೆಸ್ಸಿಗೆ ಗ್ರಾಪಂ ಚುನಾವಣೆ ಪ್ರತಿಷ್ಠೆಯಾಗಿದೆ. ಗ್ರಾಪಂಗಳಲ್ಲಿ ಅಧಿಕಾರ ಹಿಡಿದು ಮುಂದಿನ ಎಲ್ಲ ಚುನಾವಣೆಗಳಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂಬ ನಿರ್ಧಾರಕ್ಕೆ ಬಂದು ಜೆಡಿಎಸ್ ಜತೆ ಮೈತ್ರಿ ಮಾಡಿಕೊಳ್ಳದಿರಲು ಮುಖಂಡರು ತೀರ್ಮಾನಿಸಿದ್ದಾರೆ.

ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟವಾದ ನಂತರ ಜೆಡಿಎಸ್ ಪಟ್ಟಿ ಬಿಡುಗಡೆ ಮಾಡಲು ನಿರ್ಧರಿಸಿದೆ. ಆಯಾ ಕ್ಷೇತ್ರದ ಮತದಾರರ ಅಭಿಪ್ರಾಯಕ್ಕೆ ತಕ್ಕಂತೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಬಿಜೆಪಿ ಮತ್ತು ಕಾಂಗ್ರೆಸ್ ಲೆಕ್ಕಾಚಾರ ಉಲ್ಟಾ ಮಾಡುವುದು ಜೆಡಿಎಸ್ ಉದ್ದೇಶವಾಗಿದೆ.

ನರೇಗಾ ಹಾಗೂ ಇನ್ನಿತರ ಸ್ಥಳೀಯ ಸಮಸ್ಯೆ ಮುಂದಿಟ್ಟುಕೊಂಡು ಸಿಪಿಎಂ ಜಿಲ್ಲೆಯ ಬಹುತೇಕ ಕಡೆ ಸ್ಪರ್ಧಿಸಲು ತಯಾರಿ ನಡೆಸುತ್ತಿದೆ. ಮಹಿಳಾ ಕ್ಷೇತ್ರಗಳನ್ನು ಹೆಚ್ಚು ಗೆಲ್ಲುವುದು ಪಕ್ಷದ ಗುರಿ. ಬಿಜೆಪಿ ಸೋಲಿಸಲು ಅಗತ್ಯವಿದ್ದರೆ ಕಾಂಗ್ರೆಸ್, ಜೆಡಿಎಸ್ ಮತ್ತಿತರ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಸಾಧ್ಯತೆ ಇದೆ.

ರೈತ ಸಂಘದ ಕಾರ್ಯಕರ್ತರು ಸಹ ಅನುಕೂಲವಾಗುವ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಚಿಂತನೆ ನಡೆಸಿದ್ದಾರೆ, ಎಸ್‌ಡಿಪಿಐ ಈಗಾಗಲೆ ನಗರಸಭೆ ಚುನಾವಣೆಯಲ್ಲಿ ಶಕ್ತಿ ಸಾಬೀತು ಮಾಡಿದ್ದು ಗ್ರಾಪಂ ಚುನಾವಣೆ ಮೂಲಕ ಸಂಘಟನೆ ವಿಸ್ತರಿಸಲು ಸಭೆ ನಡೆಸುತ್ತಿದೆ.

ಜಿಲ್ಲೆಯಲ್ಲಿ ಜೆಡಿಎಸ್ ಸಂಘಟನೆಯ ಜವಾಬ್ದಾರಿಯನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಹಿಸಿದ್ದಾರೆ. ಪಕ್ಷ ಕೆಲ ಚುನಾವಣೆಯಲ್ಲಿ ಸೋತಿದ್ದರೂ ಕಾರ್ಯಕರ್ತರಲ್ಲಿ ಉತ್ಸಾಹ ಕುಗ್ಗಿಲ್ಲ, ಗ್ರಾಪಂ ಚುನಾವಣೆಯಲ್ಲಿ ಬೇರೆ ಪಕ್ಷಗಳಿಗಿಂತ ನಾವು ಉತ್ತಮ ಸಾಧನೆ ಮಾಡುತ್ತೇವೆ. ಇಂಚರ ಗೋವಿಂದರಾಜು, ಎಂಎಲ್‌ಸಿ, ಕೋಲಾರ ಸರ್ಕಾರದ ಸಾಧನೆ ಮುಂದಿಟ್ಟುಕೊಂಡು ಗ್ರಾಪಂ ಚುನಾವಣೆ ಎದುರಿಸಲು ಸಜ್ಜಾಗುತ್ತಿದ್ದೇವೆ, ಎಲ್ಲ 156 ಪಂಚಾಯಿತಿಗಳಿಗೂ ಸ್ಪರ್ಧಿಸಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವ ನಾಗೇಶ್, ಸಂಸದ ಮುನಿಸ್ವಾಮಿ ಸೇರಿ ಎಲ್ಲ ಮುಖಂಡರ ಸಾಮೂಹಿಕ ನಾಯಕತ್ವದಲ್ಲಿ ಕೆಲಸ ಮಾಡಿ ಪಕ್ಷಕ್ಕೆ ಜಯ ತಂದುಕೊಡುತ್ತೇವೆ. ಡಾ.ಕೆ.ಎನ್. ವೇಣುಗೋಪಾಲ್, ಬಿಜೆಪಿ ಜಿಲ್ಲಾಧ್ಯಕ್ಷ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವೈಫಲ್ಯಗಳನ್ನು ಚುನಾವಣೆಗೆ ಅಸ್ತ್ರವಾಗಿ ಬಳಸುತ್ತೇವೆ. ಪಕ್ಷದಿಂದ ಚಾಲನೆ ನೀಡಿರುವ ಆರೋಗ್ಯ ಹಸ್ತ ಅಭಿಯಾನವನ್ನು ಹಳ್ಳಿಗಳಿಗೆ ವಿಸ್ತರಿಸಿ ಚುನಾವಣೆಯಲ್ಲಿ ಗೆಲುವು ಸಾಧಿಸಲಾಗುವುದು. ಕೆ.ಚಂದ್ರಾರೆಡ್ಡಿ, ಜಿಲ್ಲಾಧ್ಯಕ್ಷ, ಕಾಂಗ್ರೆಸ್ ಸಮಿತಿ, ಕೋಲಾರ ನರೇಗಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡ ಗ್ರಾಮೀಣ ಕೃಷಿ ಕೂಲಿ ಕಾರ್ಮಿಕರು ಗ್ರಾಪಂಗಳಲ್ಲಿ ಸೇವೆ ಸಲ್ಲಿಸಲು ಇಚ್ಛಿಸಿದ್ದಾರೆ. ಗ್ರಾಪಂ ಚುನಾವಣೆ ದೇಶದ ಅಭಿವೃದ್ಧಿಗೆ ದಿಕ್ಸೂಚಿಯಾಗಿರುವುದರಿಂದ ಮತದಾರರಲ್ಲಿ ಜಾಗೃತಿ ಮೂಡಿಸುತ್ತೇವೆ, ಕಳೆದ ಬಾರಿಗಿಂತ ಹೆಚ್ಚು ಸ್ಥಾನ ಗೆಲ್ಲಲು ಶ್ರಮಿಸುತ್ತೇವೆ. ವಿ.ಗೀತಾ, ರಾಜ್ಯ ಉಪಾಧ್ಯಕ್ಷೆ, ಜನವಾದಿ ಮಹಿಳಾ ಸಂಘಟನೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net