

ಪಿ.ಎಸ್.ಹರೀಶ್ ಕೋಲಾರ
ಪ್ರಸಕ್ತ ಸಾಲಿನ ಮುಂಗಾರು ಬೆಳೆ ಸಮೀಕ್ಷೆಗೆ ಗುರುತಿಸಿರುವ ಒಟ್ಟು 7.86 ಲಕ್ಷ ತಾಕುಗಳ ಪೈಕಿ ಈವರೆಗೆ 4 ಲಕ್ಷ ತಾಕುಗಳ (ಶೇ 50.94 ) ಸಮೀಕ್ಷೆಯನ್ನು ರೈತರೇ ಮಾಡಿಕೊಂಡಿದ್ದು, ರಾಜ್ಯದಲ್ಲಿ ಜಿಲ್ಲೆ 4ನೇ ಸ್ಥಾನದಲ್ಲಿದೆ.
ಜಿಲ್ಲೆಯ ಆರು ತಾಲೂಕುಗಳಲ್ಲಿ ಒಟ್ಟು 7,86,644 ತಾಕುಗಳಿವೆ. ಆ.14ರಂದು ಸಮೀಕ್ಷೆಗೆ ಚಾಲನೆ ನೀಡಲಾಗಿತ್ತು. ಕಳೆದ ಮೂರು ವಾರದಲ್ಲಿ ರೈತರು 4,00,720 ತಾಕುಗಳಲ್ಲಿ (ಶೇ. 50.94) ಬೆಳೆ ವಿವರ ಅಪ್‌ಲೋಡ್ ಮಾಡಿದ್ದು, ಬಂಗಾರಪೇಟೆ ಶೇ.60 ಸಾಧನೆಯೊಂದಿಗೆ ಮುಂಚೂಣಿಯಲ್ಲಿದೆ.
ಅವಧಿ ವಿಸ್ತರಣೆ: ಬೆಳೆಗಳನ್ನು ಛಾಯಾಚಿತ್ರ ಸಹಿತ ಅಪ್‌ಲೋಡ್ ಮಾಡುವ ಕಾಲಾವಕಾಶವನ್ನು ಸೆ.23ರವರೆಗೆ ಸರ್ಕಾರ ವಿಸ್ತರಿಸಿದೆ. ಈ ಅವಧಿಯೊಳಗೆ ರೈತರು ಸಮೀಕ್ಷೆ ಮಾಡಿಕೊಳ್ಳದಿದ್ದಲ್ಲಿ ಖಾಸಗಿ ನಿವಾಸಿಗಳಿಂದ ಬೆಳೆ ಸಮೀಕ್ಷೆ ಕೈಗೆತ್ತಿಕೊಂಡು ಶೇ.100 ಗುರಿ ಸಾಧಿಸಲು ಸರ್ಕಾರ ನಿರ್ಧರಿಸಿದೆ.
1064 ಖಾಸಗಿ ನಿವಾಸಿಗಳು: ಶ್ರೀನಿವಾಸಪುರ ತಾಲೂಕಿನಲ್ಲಿ ಸಮೀಕ್ಷೆಗಾಗಿ 185 ಮಂದಿ, ಕೋಲಾರದಲ್ಲಿ 235, ಬಂಗಾರಪೇಟೆಯಲ್ಲಿ 136, ಮುಳಬಾಗಿಲಿನಲ್ಲಿ 230, ಕೆಜಿಎಫ್‌ನಲ್ಲಿ 96 ಹಾಗೂ ಮಾಲೂರಿನಲ್ಲಿ 182 ಸೇರಿ ಒಟ್ಟು 1064 ಖಾಸಗಿ ನಿವಾಸಿಗಳನ್ನು ನೇಮಕ ಮಾಡಲಾಗಿದೆ. ಬೆಳೆ ಸಮೀಕ್ಷೆ ಕುರಿತು ತರಬೇತಿ ನೀಡುವ ಪ್ರಕ್ರಿಯೆ ಮುಕ್ತಾಯ ಹಂತದಲ್ಲಿದ್ದು, ನಂತರ ಸಮೀಕ್ಷೆಯಲ್ಲಿ ತೊಡಗಲಿದ್ದಾರೆ.
ಜಿಲ್ಲೆಗಳ ಸಾಧನೆ: ಬಿಜಾಪುರ ಶೇ.59.38ರ ಸಾಧನೆಯೊಂದಿಗೆ ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದ್ದರೆ, ಬಾಗಲಕೋಟೆ-ಶೇ.56.93 (ದ್ವಿ), ದಾವಣಗೆರೆ-ಶೇ.55.68 (ತೃ) ಕೋಲಾರ ಶೇ 50.94 (ನಾಲ್ಕನೇ) ಕಲಬುರ್ಗಿ-ಶೇ. 49.44, ಗದಗ-49.33, ಹಾವೇರಿ-ಶೇ.46.64, ಕೊಪ್ಪಳ-ಶೇ.44.63, ಚಿತ್ರದುರ್ಗ-ಶೇ.41.52, ತುಮಕೂರು-ಶೇ41.13, ಬೆಳಗಾವಿ -ಶೇ.40.12 ಸಾಧನೆ ಮಾಡಿವೆ.
ಮಲೆನಾಡಲ್ಲಿ ನೀರಸ: ಉತ್ತರ ಕರ್ನಾಟಕ ಭಾಗದಲ್ಲಿ ಬೆಳೆ ಸಮೀಕ್ಷೆಗೆ ಉತ್ತಮ ಸ್ಪಂದನೆ ವ್ಯಕ್ತವಾದರೆ ಕರಾವಳಿ, ಮಲೆನಾಡು ಭಾಗದಲ್ಲಿ ನೀರಸವಾಗಿದೆ. ಬೆಂಗಳೂರು ನಗರ (ಶೇ.15.54) ಹಾಗೂ ಗ್ರಾಮಾಂತರ ಜಿಲ್ಲೆ (ಶೇ.18.57), ಚಿಕ್ಕಬಳ್ಳಾಪುರ-ಶೇ.35.15 ಸಾಧನೆ ಮಾಡಿದರೆ, ಕೊಡಗು ಶೇ.13.04 ಸಾಧನೆಯೊಂದಿಗೆ ಕೊನೇ ಸ್ಥಾನದಲ್ಲಿದೆ. ಉಡುಪಿ-ಶೇ. 15.28, ದಕ್ಷಿಣ ಕನ್ನಡ-ಶೇ. 23, ಶಿವಮೊಗ್ಗ -ಶೇ.20.97, ಚಿಕ್ಕಮಗಳೂರು-ಶೇ.23.79 ಸಾಧನೆ ಮಾಡಿವೆ.
ಪ್ರಕೃತಿ ವಿಕೋಪ ಸಂದರ್ಭದಲ್ಲಿ ಬೆಳೆ ಹಾನಿಯಾದರೆ ವಿಸ್ತೀರ್ಣದ ಮಾಹಿತಿ ಪಡೆದು ಅರ್ಹ ಫಲಾನುಭವಿಗಳ ಪಟ್ಟಿ ಸಿದ್ಧಪಡಿಸಿ ಪರಿಹಾರ ನೀಡುವುದೂ ಸೇರಿ ಹಲವು ಉಪಯೋಗಗಳಿವೆ. ರೈತರು ಕಡ್ಡಾಯವಾಗಿ ಬೆಳೆ ಸಮೀಕ್ಷೆ ಮಾಡಿಕೊಳ್ಳಬೇಕು. ಕೋಲಾರದಲ್ಲಿ ಈಗಾಗಲೇ ಶೇ.50 ಬೆಳೆ ಸಮೀಕ್ಷೆ ಪೂರ್ಣಗೊಂಡಿದೆ.
ನಾಗರಾಜ್, ಸಹಾಯಕ ನಿರ್ದೇಶಕ, ಕೃಷಿ ಇಲಾಖೆ, ಕೋಲಾರ