

ಕೋಲಾರ: ಸಾರ್ವಜನಿಕ ಉದ್ದೇಶಕ್ಕೆ ಮೀಸಲಿಟ್ಟಿರುವ ತಾಲೂಕಿನ ಗ್ರಾಮಾಂತರ ಸ.ನಂ. 128ರ ವ್ಯಾಪ್ತಿಯ ಸ್ವತ್ತನ್ನು ದಾಖಲೆಗಳಿಲ್ಲದೆ ಖಾತೆ ಮಾಡಿಸಿಕೊಂಡಿರುವುದನ್ನು ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ನವೀನ್ ರಾಜ್ ಸಿಂಗ್ ರದ್ದುಪಡಿಸಿ ಆದೇಶ ಹೊರಡಿಸಿದ್ದಾರೆ.
ಇದರಿಂದ ಕೋಲಾರ ನಗರಸಭೆಗೆ ಸೇರಿದ ಕೋಟ್ಯಂತರ ರೂ. ಬೆಲೆಯ ಆಸ್ತಿ ರಕ್ಷಣೆಗೆ ನಾಗರಿಕರು ನಡೆಸಿದ್ದ ಹೋರಾಟಕ್ಕೆ ಜಯ ಸಿಕ್ಕದಂತಾಗಿದೆ.
ಕಸಬಾ ಹೋಬಳಿಗೆ ಸೇರಿದ ಗ್ರಾಮಾಂತರ ಸ.ನಂ 128ರಲ್ಲಿ 4.26 ಎಕರೆಯನ್ನು 2017 ಏ.24ರಂದು ಜಿಲ್ಲಾಡಳಿತ ಉದ್ಯಾನ, ಮಕ್ಕಳ ಗ್ರಂಥಾಲಯ, ಬಾಲ ಭವನಕ್ಕೆಂದು ಮೀಸಲಿಟ್ಟಿತ್ತು. ಕಳೆದ ವರ್ಷ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡುವ ವೇಳೆ ಶಾಂತಿನಗರ, ಹಾರೋಹಳ್ಳಿ, ವೀರಾಂಜನೇಯನಗರ, ಕುರುಬರಪೇಟೆ ಹಾಗೂ ಹಳೇ ಬಡಾವಣೆಯ 12 ಮಂದಿ ಈ ಜಾಗದಲ್ಲಿ ನಮ್ಮ ನಿವೇಶನಗಳಿದ್ದು ನಗರಸಭೆಯಿಂದ ಖಾತೆ ಆಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು.
ಅರ್ಜಿದಾರರೊಬ್ಬರು ಸಿವಿಲ್ ನ್ಯಾಯಾಲಯಕ್ಕೆ ಮೊರೆ ಹೋದರೆ ಉಳಿದವರು ತಮ್ಮ ವಕೀಲರ ಮೂಲಕ ಆಸ್ತಿ ಮೇಲೆ ಹಕ್ಕು ಚಲಾಯಿಸಲು ಮುಂದಾಗಿದ್ದರು. ಈ ನಡುವೆ ಸಾರ್ವಜನಿಕರ ಆಸ್ತಿ ಖಾಸಗಿಯವರ ಪಾಲಾಗಲು ಬಿಡಬೇಡಿ ಎಂದು ನಗರಸಭೆ ಸದಸ್ಯ ಎಸ್.ಆರ್. ಮುರಳಿಗೌಡ ಹಾಗೂ ಸಾರ್ವಜನಿಕರು ಹೋರಾಟಕ್ಕೆ ಇಳಿದಿದ್ದರಿಂದ ನಗರಸಭೆ ಆಯುಕ್ತ ಶ್ರೀಕಾಂತ್ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರಿಗೆ ತಮ್ಮಲ್ಲಿದ್ದ ದಾಖಲೆಗಳ ಆಧಾರದ ಮೇಲೆ ಅರ್ಜಿ ಸಲ್ಲಿಸಿ ಪ್ರಕರಣ ಇತ್ಯರ್ಥಕ್ಕೆ ಮೊರೆ ಹೋಗಿದ್ದರು.
ನಗರಸಭೆ ಅರ್ಜಿ ಮೇರೆಗೆ ಪ್ರಾದೇಶಿಕ ಆಯುಕ್ತ ನವೀನ್‌ರಾಜ್ ಸಿಂಗ್ ನಗರಸಭೆ ಆಯುಕ್ತ ಹಾಗೂ 12 ಮಂದಿ ದೂರುದಾರರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆ ಕೈಗೊಂಡಿದ್ದರು. ಎದುರುದಾರರು ಅರಹಳ್ಳಿ ಗ್ರಾಪಂನಿಂದ ಪಡೆದಿರುವ ದಾಖಲೆಗೆ ನಗರಸಭೆಯಿಂದ ಖಾತೆ ಮಾಡಿಕೊಳ್ಳಲು ಕಾನೂನಿನಲ್ಲಿ ಅವಕಾಶವಿಲ್ಲ, ಜತೆಗೆ ಸಕ್ಷಮ ಪ್ರಾಧಿಕಾರದ ನಿಯಮಕ್ಕೆ ವಿರುದ್ಧ ಹಾಗೂ ಪುರಸಭೆ ಕಾಯ್ದೆಗೆ ವ್ಯತಿರಿಕ್ತವಾಗಿ ಖಾತೆ ಆಗಿರುವುದರಿಂದ ಖಾತೆ ರದ್ದುಪಡಿಸಿರುವುದಾಗಿ ಸೆ.1ರಂದು ಆದೇಶ ನೀಡಿರುವುದಲ್ಲದೆ, ಎದುರುದಾರರ ಹೆಸರು ತೆಗೆದು ಕೋಲಾರ ನಗರಸಭೆ ಹೆಸರಲ್ಲಿ ಖಾತೆ ಮಾಡಿಕೊಳ್ಳುವಂತೆ ಅಭಿಪ್ರಾಯಿಸಿದ್ದಾರೆ.
ವಿಚಾರಣೆಗೆ ಸೂಚನೆ: ಪೂರಕ ದಾಖಲೆ ಇಲ್ಲದೆ ನಗರಸಭೆಗೆ ಸೇರಿದ ಆಸ್ತಿಗೆ ಖಾತೆ ಮಾಡಿಕೊಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪ್ರಾದೇಶಿಕ ಆಯುಕ್ತರು ಕೋಲಾರ ನಗರಾಭಿವೃದ್ಧಿ ಕೋಶದ ನಿರ್ದೇಶಕರಿಗೆ ಸೂಚಿಸಿದ್ದಾರೆ.
ನಗರಸಭೆಯಿಂದ ಅಕ್ರಮವಾಗಿ ಖಾತೆ ಮಾಡಿಸಿಕೊಂಡಿದ್ದವರ ಬಣ್ಣ ಬಯಲಾಗಿದೆ. ಪ್ರಾದೇಶಿಕ ಆಯುಕ್ತರು ಸಾರ್ವಜನಿಕ ಆಸ್ತಿ ಉಳಿಸಿಕೊಟ್ಟಿದ್ದಾರೆ, ನ್ಯಾಯಕ್ಕೆ ಜಯ ಸಿಕ್ಕಿದೆ, ಅಕ್ರಮ ಖಾತೆಗೆ ಸಹಕರಿಸಿರುವವರನ್ನು ಶಿಕ್ಷಿಸಬೇಕು, ಜನರು ಸಹಕರಿಸಿದಲ್ಲಿ ಇನ್ನಷ್ಟು ಅಕ್ರಮ ಬಯಲಿಗೆಳೆಯಲಾಗುವುದು. ಎಸ್.ಆರ್.ಮುರಳೀಗೌಡ, ಸದಸ್ಯ, ನಗರಸಭೆ, ಕೋಲಾರ ಪ್ರಾದೇಶಿಕ ಆಯುಕ್ತರ ಆದೇಶ ಸ್ವಾಗತಾರ್ಹ, ನಗರಸಭೆಯ ವಾದಕ್ಕೆ ಫಲ ಸಿಕ್ಕಿದೆ, ಅಕ್ರಮ ಖಾತೆ ರದ್ದು ಆದೇಶದ ಹಿನ್ನೆಲೆಯಲ್ಲಿ ಸ.ನಂ 128ರ ಆಸ್ತಿ ವಶಕ್ಕೆ ಪಡೆಯಲಾಗುವುದು. ಇನ್ನು ಮುಂದೆ ಯಾವುದೇ ಅಡೆತಡೆ ಇಲ್ಲದೆ ಅಭಿವೃದ್ಧಿ ಕೆಲಸ ನಡೆಯುತ್ತದೆ. ಶ್ರೀಕಾಂತ್, ಆಯುಕ್ತ, ನಗರಸಭೆ, ಕೋಲಾರ