ಹೆಚ್ಚುವರಿ ಹಣ ಸಂಗ್ರಹಿಸಿದರೆ ಕ್ರಮ, ಖಾಸಗಿ ಆಸ್ಪತ್ರೆಗಳಿಗೆ ಡಿಸಿ ಸತ್ಯಭಾಮ ಖಡಕ್ ಎಚ್ಚರಿಕೆ

8-klr-2
Published on

ಕೋಲಾರ: ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಗುರುತಿಸಿರುವ ಖಾಸಗಿ ಆಸ್ಪತ್ರೆಗಳು ಸರ್ಕಾರಿ ಯೋಜನೆಗಳನ್ನು ಲಘುವಾಗಿ ಪರಿಗಣಿಸಬಾರದು. ಅರ್ಹರಿಗೆ ಸೇವೆ ಕಲ್ಪಿಸಲು ಹೆಚ್ಚುವರಿ ಹಣ ಸಂಗ್ರಹಿಸಿದರೆ ಕ್ರಮ ವಹಿಸಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಎಚ್ಚರಿಸಿದರು.

ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯ ಜಿಲ್ಲಾಮಟ್ಟದ ಕುಂದುಕೊರತೆ ಪರಿಹಾರ ಸಮಿತಿ ಸಭೆಯಲ್ಲಿ ಸರ್ಕಾರಿ ಯೋಜನೆಯಡಿ ಚಿಕಿತ್ಸೆಗಾಗಿ ಹಣ ಅನುಮೋದನೆಯಾದರೂ ಹೆಚ್ಚುವರಿ ಹಣ ಪಾವತಿಸಿಕೊಂಡಿರುವ ಕುರಿತ ದೂರು ವಿಚಾರಣೆ ವೇಳೆ ಆರ್.ಎಲ್. ಜಾಲಪ್ಪ ಆಸ್ಪತ್ರೆ ವೈದ್ಯರನ್ನು ತರಾಟೆಗೆ ತೆಗೆದುಕೊಂಡರು.

ಸರ್ಕಾರ ಪುಕ್ಕಟೆ ಚಿಕಿತ್ಸೆ ನೀಡಿ ಎನ್ನುತ್ತಿಲ್ಲ, ಚಿಕಿತ್ಸೆಗೆ ಹಣ ಮಂಜೂರಾದರೂ ಹಣ ಯಾಕೆ ಕಟ್ಟಿಸಿಕೊಳ್ಳುತ್ತೀರೆಂದು ವೈದ್ಯ ಡಾ. ಅಭಿನಂದನ್ ಅವರನ್ನು ಪ್ರಶ್ನಿಸಿ ಮೊದಲ ಸಭೆಯಾದ್ದರಿಂದ ವಿನಾಯಿತಿ ನೀಡುತ್ತೇನೆ, ಮುಂದೆ ಪ್ರತಿ ತಿಂಗಳು ಸಭೆ ನಡೆಸುವಾಗ ದೂರು ಬಂದರೆ ಕ್ರಮ ವಹಿಸಲಾಗುವುದು ಎಂದು ಎಚ್ಚರಿಸಿದರು.

ಅಧಿಕಾರಿಗಳಿಗೂ ತರಾಟೆ: ಜಿಲ್ಲೆಯ 15 ಲಕ್ಷಕ್ಕೂ ಅಧಿಕ ಜನಸಂಖ್ಯೆಯಲ್ಲಿ 13 ಲಕ್ಷ ಬಿಪಿಎಲ್ ಕುಟುಂಬಗಳಿವೆ. 3.56 ಲಕ್ಷ ಕಾರ್ಡ್ ವಿತರಿಸಲಾಗಿದೆಯೆಂದರೆ ಏನು ಮಾಡುತ್ತಿದ್ದೀರಿ ಎಂದು ಡಿಎಚ್‌ಒ ಮತ್ತು ನೋಡಲ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

156 ಗ್ರಾಪಂಗಳ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಕಾರ್ಡ್ ವಿತರಿಸಲು ಸೂಚಿಸಲಾಗಿದೆ. ಸಿಬ್ಬಂದಿ, ಆಶಾ ಕಾರ್ಯಕರ್ತೆಯರಿಂದ ಕೆಲಸ ಮಾಡಿಸಿ 13 ಲಕ್ಷ ಗುರಿ ಸಾಧಿಸಿ ಎಂದು ಸೂಚಿಸಿದರು.

ಜಿಲ್ಲಾ ಎಸ್ಸೆನ್ನಾರ್ ಆಸ್ಪತ್ರೆಯಲ್ಲಿ 40 ವೆಂಟಿಲೇಟರ್ ಇದೆ. ಸರ್ಕಾರ ಸೌಲಭ್ಯ ಕಲ್ಪಿಸಿದ್ದರೂ ಬಳಸಿಕೊಳ್ಳದೆ ಖಾಸಗಿ ಆಸ್ಪತ್ರೆಗೆ ರೆಫರ್ ಮಾಡುವುದಾದರೆ ಏನು ಪ್ರಯೋಜನ? ಖಾಸಗಿ ಆಸ್ಪತ್ರೆಗಳ ಉದ್ಧಾರಕ್ಕೆ ಸರ್ಕಾರದ ಯೋಜನೆಗಳು ಇರೋದೇ? ಎಂದರು.

ಕರೊನಾ ಚಿಕಿತ್ಸೆಗೆಂದು ಸಹೋದರನನ್ನು ಆಸ್ಪತ್ರೆಗೆ ದಾಖಲಿಸಿದ ಸಂದರ್ಭದಲ್ಲಿ ಹಣ ಕಟ್ಟಿಸಿಕೊಂಡಿದ್ದರು, ಕುಂದುಕೊರತೆ ಪರಿಹಾರ ಸಮಿತಿ ಸಭೆಯ ನೋಟಿಸ್ ತಲುಪಿದ ಮೇಲೆ ಹಣ ವಾಪಸ್ ಮಾಡಿದ್ದಾರೆಂದು ದೊಡ್ಡಬೊಮ್ಮನಹಳ್ಳಿಯ ಭಾಸ್ಕರರೆಡ್ಡಿ ತಿಳಿಸಿದರು.

ಡಿಎಚ್‌ಒ ಡಾ.ಎಸ್.ಎನ್. ವಿಜಯಕುಮಾರ್, ಯೋಜನೆಯ ನೋಡಲ್ ಅಧಿಕಾರಿ ಡಾ. ಎನ್.ಸಿ.ನಾರಾಯಣಸ್ವಾಮಿ, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ರಾಜ್ಯ ಸಂಯೋಜಕ ಡಾ.ರಾಜಣ್ಣ, ಜಿಲ್ಲಾ ಸಂಯೋಜಕ ಡಾ. ಕೆ.ಎಸ್. ಗಿರೀಶ್, ಎಸ್ಸೆನ್ನಾರ್ ಆಸ್ಪತ್ರೆ ವೈದ್ಯ ಮಂಜುನಾಥ್ ಸಭೆಗೆ ಮಾಹಿತಿ ಒದಗಿಸಿದರು.

ಕರೊನಾ ವೇಳೆ ಖಾಸಗಿ ಆಸ್ಪತ್ರೆಗಳಿಂದ ಸ್ಪಂದನೆ ಸಿಗದಿದ್ದಾಗ ಜಿಲ್ಲಾಸ್ಪತ್ರೆಯನ್ನೇ ಬಲವರ್ಧನೆ ಮಾಡಲು ಕ್ರಮ ಕೈಗೊಳ್ಳಲಾಯಿತು. ಸಣ್ಣಪುಟ್ಟ ಸಮಸ್ಯೆ ಬಿಟ್ಟರೆ ಉತ್ತಮ ಚಿಕಿತ್ಸೆ ಸಿಗುತ್ತಿದೆ. ಬಂಗಾರಪೇಟೆ ತಾಲೂಕು ಆಸ್ಪತ್ರೆ ನಂ.1 ಆಗಿದೆ. ನನಗೇನಾದರು ಆರೋಗ್ಯ ಸಮಸ್ಯೆಯಾದರೆ ಸರ್ಕಾರಿ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುವೆ. ಸಿ. ಸತ್ಯಭಾಮ, ಜಿಲ್ಲಾಧಿಕಾರಿ

ಚಳಿ ಬಿಡಿಸಿದರೆ ವ್ಯವಸ್ಥೆ ಸರಿಯಾಗುತ್ತೆ: ಅನಾರೋಗ್ಯದ ನಿಮಿತ್ತ ಜಿಲ್ಲಾಸ್ಪತ್ರೆಗೆ ನನ್ನ ತಾಯಿಯನ್ನು ಸೋಮವಾರ ರಾತ್ರಿ ದಾಖಲಿಸಿದ ಸಂದರ್ಭದಲ್ಲಿ ಗ್ಲೂಕೋಸ್ ನೀಡಲಾಗಿತ್ತು. ಬೆಳಗ್ಗೆ 5ರ ವೇಳೆಗೆ ಬಾಟಲಿ ಖಾಲಿಯಾಗಿ ನೀಡಲ್ಸ್‌ನಿಂದ ರಕ್ತ ವಾಪಸ್ ಬರುತ್ತಿತು. ನನ್ನ ಪತ್ನಿ ನರ್ಸ್, ವೈದ್ಯರನ್ನು ಕೂಗಿದರೂ ತಕ್ಷಣಕ್ಕೆ ಯಾರೂ ಸ್ಪಂದಿಸದಿದ್ದಾಗ ಮನೆಯವರೇ ತೆಗೆಯಬೇಕಾಯಿತು, ಡಿಚ್ಚಾರ್ಚ್ ಮಾಡಿಕೊಂಡು ಹೋಗಿದ್ದಾಯಿತು ಎಂದು ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಚಿನ್ನಸ್ವಾಮಿಗೌಡ ದೂರಿದರು. ಸಿಡಿಮಿಡಿಗೊಂಡ ಡಿಸಿ, ಜಿಲ್ಲಾ ಸರ್ಜನ್ ಡಾ.ಎಸ್.ಜಿ.ನಾರಾಯಣಸ್ವಾಮಿಗೆ ಕರೆಮಾಡಿ ರಾತ್ರಿ ಕರ್ತವ್ಯದಲ್ಲಿದ್ದ ವೈದ್ಯ, ಶುಶ್ರೂಷಕಿಯರ ವಿವರ ನೀಡುವಂತೆ ತಾಕೀತು ಮಾಡಿದರು. ಜಿಲ್ಲಾಸ್ಪತ್ರೆಯ ವ್ಯವಸ್ಥೆ ಸರಿಹೋಗಲು ಚಳಿ ಬಿಡಿಸಬೇಕು, ಸಸ್ಪೆಂಡ್ ಮಾಡ್ತೀನಿ, ಘಟನೆ ಬಗ್ಗೆ ದೂರು ಕೊಡಿ ಎಂದು ಚಿನ್ನಸ್ವಾಮಿಗೌಡ ಅವರಿಂದ ದೂರು ಬರೆಸಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net