ನೈಜ ಪ್ರತಿಭೆಗಳನ್ನು ಮುಖ್ಯವಾಹಿನಿಗೆ ತರುವ ಕಾರ್ಯ ಆಗಬೇಕು

6-klr-8
Published on

ಶ್ರೀನಿವಾಸಪುರ: ಸಾಹಿತ್ಯದಲ್ಲಿ ಮರೆಮಾಚಿರುವ ನಿಜವಾದ ನೈಜ ಪ್ರತಿಭೆಗಳನ್ನು ಮುಖ್ಯವಾಹಿನಿಗೆ ತರುವ ಕಾರ್ಯ ಆಗಬೇಕು ಎಂದು ಕಸಾಪ ನಿಕಟಪೂರ್ವ ಜಿಲ್ಲಾಧ್ಯಕ್ಷ ಜೆ.ಜಿ. ನಾಗರಾಜ್ ಹೇಳಿದರು.

ಪಟ್ಟಣದ ಎಸ್‌ಎಫ್‌ಎಸ್ ಶಾಲಾ ಮುಂಭಾಗದ ವಿ.ರಾಧಾಕೃಷ್ಣ ಅವರ ನಿವಾಸದಲ್ಲಿ ಭಾನುವಾರ ವಿಶ್ವಮಾನವ ಕುವೆಂಪು ಫೌಂಡೇಷನ್ ಆಯೋಜಿಸಿದ್ದ ತಾಲೂಕು ಮಟ್ಟದ ಕುವೆಂಪು ಅನಿಕೇತನ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿ, ಭೂಮಿಯ ಪ್ರತಿರೂಪದ ಛಾಯೆ, ಜನುಮ ನೀಡಿದ ತಾಯಿಗೆ ನಾವು ಸದಾ ನಮನ ಸಲ್ಲಿಸಬೇಕು. ಜಾತಿ, ಮತ, ಧರ್ಮವನ್ನು ಮೀರಿ ಸಮಷ್ಠಿ ಪ್ರಜ್ಞೆಯ ಹಾದಿಯಲ್ಲಿ ನಾವು ಸಾಗಬೇಕು ಎಂದರು.

ಕುವೆಂಪು ಅನಿಕೇತನ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಕವಿ, ಸಾಹಿತಿ ಪಣಸಮಾಕನಹಳ್ಳಿ ಆರ್.ಚೌಡರೆಡ್ಡಿ, ಕವಿತೆಗಳ ವೈವಿಧ್ಯತೆ ಎಂಬುದು ಸಾಹಿತ್ಯದ ಓದನ್ನು ಹೆಚ್ಚಿಸುವಂತೆ ಮಾಡುತ್ತದೆ. ಕವಿತೆಗಳು ಜನಸಾಮಾನ್ಯರಿಗೆ ಮುಟ್ಟುವಂತ ಬರಹ ಇದ್ದಾಗ ಮಾತ್ರ ಅದು ಪರಿಪಕ್ವತೆಯಿಂದ ಕೂಡಿರುತ್ತದೆ. ಯುವ ಪ್ರತಿಭೆಗಳನ್ನು ಪುರಸ್ಕರಿಸಿ ಸಾಹಿತ್ಯದ ಸೇವೆ ಗುರುತಿಸುವ ಕೆಲಸ ಹೆಚ್ಚು ನಡೆಯಲಿ ಎಂದು ಆಶಿಸಿದರು.

ಪ್ರಶಸ್ತಿ ಪುರಸ್ಕೃತ ಸಾಹಿತಿ, ಶಿಕ್ಷಕ ವಿ.ರಾಧಾಕೃಷ್ಣ ಮಾತನಾಡಿ, ಮೂಲೆಗುಂಪಾಗಿರುವ ಸಾಹಿತಿಗಳನ್ನು, ಬರಹಗಾರರನ್ನು ಗುರುತಿಸಿ ಕುವೆಂಪು ಅವರ ಹೆಸರಿನಲ್ಲಿ ಪ್ರಶಸ್ತಿ ನೀಡಿ ಗೌರವಿಸಿರುವ ವಿಕೆಎಫ್‌ನ ಕಾರ್ಯ ಶ್ಲಾಘನೀಯ. ಸಮಾಜಮುಖಿಯಾಗಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಕೆಲಸ, ಕಾರ್ಯಾಗಾರಗಳ ಆಯೋಜನೆ, ಸಾಹಿತ್ಯವನ್ನು ಜನತೆಗೆ ಮುಟ್ಟಿಸುವ ಕೆಲಸ ಆಗಲಿ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕಸಾಪ ನಿಕಟಪೂರ್ವ ಕೋಶಾಧ್ಯಕ್ಷೆ ಪಿ.ಎಸ್.ಮಂಜುಳಾ, ಕುವೆಂಪು ಅವರು ಹೆಣ್ಣಿನ ಬಗೆಗಿನ ಸಾಹಿತ್ಯದ ಪಾತ್ರಗಳಿಗೆ ಜೀವ ತುಂಬಿದ ಕವಿ. ವಿದ್ಯಾರ್ಥಿಗಳಿಗೆ ಚೈತನ್ಯ ತುಂಬುವ ಹಾಗೂ ಸಾಹಿತ್ಯದ ಮೂಲಕ ಪರಿಚಿತವಾಗಿರುವ ರಾಧಾಕೃಷ್ಣ ಅವರಿಗೆ ಪ್ರಶಸ್ತಿ ನೀಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ಹರ್ಷ ವ್ಯಕ್ತಪಡಿಸಿದರು.

ಜನಪದ ಪರಿಷತ್‌ನ ಜಿಲ್ಲಾಧ್ಯಕ್ಷ ಮುನಿವೆಂಕಟೇಗೌಡ, ಪತ್ರಕರ್ತರ ಸಂಘದ ಅಧ್ಯಕ್ಷ ಚಂದ್ರಶೇಖರ್, ಕನ್ನಡ ಸಿರಿ ಸಾಹಿತ್ಯ ಪರಿಷತ್‌ನ ಸಂಸ್ಥಾಪಕ ಕೆ.ನರಸಿಂಹಮೂರ್ತಿ, ಕಸಾಪ ಮಾಜಿ ಅಧ್ಯಕ್ಷ ರವಿಕುಮಾರ್, ವಿಕೆಎಫ್‌ನ ತಾಲೂಕು ಅಧ್ಯಕ್ಷ ಉಪ್ಪರಪ್ಪಲ್ಲಿ ಹರೀಶ್, ಕನ್ನಡ ಸಿರಿ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಟಿ.ಸುಬ್ಬರಾಮಯ್ಯ, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಪಿ.ನಾರಾಯಣಪ್ಪ, ಮುಖಂಡರಾದ ರಾಮೇಗೌಡ, ರಮೇಶ್ ಕುಮಾರ್, ನಾಗೇಂದ್ರ, ಕಲಾಶಂಕರ್, ವಿಶ್ವನಾಥ್ ಇತರರು ಇದ್ದರು.

ನಾಡಿನಲ್ಲಿರುವ ಪ್ರಬುದ್ಧತೆಯ ಸಾಹಿತ್ಯದ ಶಕ್ತಿಗಳನ್ನು ಹೊರತರುವ, ನಾಡಿಗೆ ಪರಿಚಯಿಸುವ ಕಾರ್ಯವನ್ನು ನಾಡಿನ ವಿವಿಧ ಸಂಘಟನೆಗಳ ಸಹಕಾರದಿಂದ ನಡೆಸಿಕೊಂಡು ಬರಲಾಗುತ್ತಿದೆ. ಕನ್ನಡ ಸಾಹಿತ್ಯವನ್ನು ಶ್ರೀಮಂತಗೋಳಿಸುವ ಹಾದಿಯಲ್ಲಿ ಕನ್ನಡ ಮನಸ್ಸುಗಳನ್ನು ಒಂದು ಮಾಡುವ ಕಡೆ ನಮ್ಮ ಪಯಣ ನಡೆಯಲಿದೆ. ಲಕ್ಕೂರು ಎಂ.ನಾಗರಾಜ್, ವಿಶ್ವಮಾನವ ಕುವೆಂಪು ಫೌಂಡೇಷನ್ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net