ಕಾಡಾನೆ ದಾಳಿಗೆ ಗಾರೆ ಕೆಲಸಗಾರ ಬಲಿ

5 budikote 2a
Published on

ಬೂದಿಕೋಟೆ: ಗಡಿ ಗ್ರಾಮಗಳಲ್ಲಿ ಕಾಡಾನೆಗಳ ದಾಳಿ ಮುಂದುವರಿದಿದ್ದು, ಶನಿವಾರ ಮುಂಜಾನೆ ಬಂಗಾರಪೇಟೆ ತಾಲೂಕು ಬೂದಿಕೋಟೆ ಗಡಿಭಾಗದ ದಿನ್ನೂರು ಗ್ರಾಮದಲ್ಲಿ ಕೂಲಿ ಕಾರ್ಮಿಕರೊಬ್ಬರು ಬಲಿಯಾಗಿದ್ದಾರೆ.

ಗಾರೆ ಕೆಲಸಕ್ಕೆಂದು ಗುಲ್ಲಹಳ್ಳಿ ಪಂಚಾಯಿತಿಯ ದಿನ್ನೂರಿಗೆ ತೆರಳಿ ರಾತ್ರಿ ಅಲ್ಲೇ ವಾಸ್ತವ್ಯ ಹೂಡಿದ್ದ ಬೋಯಿಲೂರು ಗ್ರಾಮದ ವೆಂಕಟೇಶಪ್ಪ (50) ಬಹಿರ್ದೆಸೆಗೆ ತೋಟದ ಕಡೆಗೆ ತೆರಳಿದ್ದಾಗ ಆನೆಗಳು ದಾಳಿ ಮಾಡಿವೆ. ತಕ್ಷಣವೇ ವೆಂಕಟೇಶಪ್ಪ ಅವರನ್ನು ಗ್ರಾಮಸ್ಥರು ನೋಡಿ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಸಿಬ್ಬಂದಿ ಬಂಗಾರಪೇಟೆ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರೂ ತೀವ್ರವಾಗಿ ಗಾಯಗೊಂಡಿದ್ದ ವೆಂಕಟೇಶಪ್ಪ ಮೃತಪಟ್ಟಿದ್ದಾರೆ.

ಇತ್ತೀಚೆಗಷ್ಟೇ ದೊಡ್ಡಪೊನ್ನಾಂಡಹಳ್ಳಿ ರೈತ ಧರ್ಮೋಜಿರಾವ್ ಆನೆ ದಾಳಿಗೆ ಮೃತಪಟ್ಟಿದ್ದು, ಆ ಘಟನೆ ಮಾಸುವ ಮುನ್ನವೇ ಮತ್ತೊಬ್ಬರು ಬಲಿಯಾಗಿರುವುದು ಸುತ್ತಮುತ್ತಲ ಗ್ರಾಮಸ್ಥರಲ್ಲಿ ಭಯ ಮೂಡಿಸಿದೆ.

ಅಪಾರ ಬೆಳೆ ನಾಶ: ಹೋಬಳಿಯ ಗಡಿಭಾಗದಲ್ಲಿ 10ಕ್ಕೂ ಹೆಚ್ಚು ಕಾಡಾನೆಗಳು ಬೀಡುಬಿಟ್ಟಿದ್ದು, ತಿಂಗಳಿಂದ ಬೆಳೆ ನಾಶ ಮಾಡುತ್ತಿವೆ. ಶನಿವಾರ ರಾತ್ರಿ ಗುಲ್ಲಹಳ್ಳಿ ಪಂಚಾಯಿತಿ ವಾಪ್ತಿಯ ದಿನ್ನೂರು ಗ್ರಾಮದ ರೈತ ಸೋಮಪ್ಪ ಅವರ ರಾಗಿ ಬೆಳೆ, ಪಲಮಡಗು ಗ್ರಾಮದ ಲೋಕೇಶ್ ಹಾಗೂ ಚಂದ್ರಪ್ಪ ಅವರ ರಾಗಿ ಮತ್ತು ಶೇಂಗಾ ಬೆಳೆ, ಗೋವಿಂದಪ್ಪ ಎಂಬುವವರ ರಾಗಿ ಬೆಳೆ, ಭೀಮಗಾನಹಳ್ಳಿ ನಾರಾಯಣಪ್ಪ ಹಾಗೂ ವೆಂಕಟೇಶಪ್ಪ ಅವರ ಟೊಮ್ಯಾಟೊ, ನಾಗಯ್ಯ ಅವರ ರಾಗಿ ಬೆಳೆ ಸೇರಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಅಪಾರ ಪ್ರಮಾಣದ ಬೆಳೆ ನಾಶಪಡಿಸಿವೆ. ಈ ವರ್ಷ ಜಿಲ್ಲೆಯಲ್ಲಿ ಇಲ್ಲಿಯವರೆಗೂ 6 ಮಂದಿ ಕಾಡಾನೆಗಳ ದಾಳಿಗೆ ಮೃತಪಟ್ಟಿದ್ದಾರೆ.

ಕಾಡಾನೆ ದಾಳಿಗೆ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ 7.5 ಲಕ್ಷ ರೂ. ಪರಿಹಾರ ಹಾಗೂ ಪ್ರತಿ ತಿಂಗಳು 2000 ರೂ. ಮಾಸಾಶನ ನೀಡಲಾಗುವುದು. ಸುಮಾರು 11 ಆನೆಗಳ ಹಿಂಡು ಎರಡು ಗುಂಪುಗಳಾಗಿ ವಿಂಗಡಣೆಯಾಗಿದ್ದು, ಒಂದು ಗುಂಪಿನಲ್ಲಿ ಮರಿಯಾನೆ ಇರುವ ಕಾರಣ ಕಾರ್ಯಾಚರಣೆ ತಡವಾಗುತ್ತಿದೆ. ಆದಷ್ಟು ಬೇಗ ಆನೆಗಳನ್ನು ಅರಣ್ಯ ಪ್ರದೇಶಕ್ಕೆ ಓಡಿಸಲಾಗುವುದು. ಶಿವಶಂಕರ್, ಡಿಸಿಎಫ್, ಅರಣ್ಯ ಇಲಾಖೆ ಕೋಲಾರ ಗಡಿಭಾಗದ ಗ್ರಾಮಗಳಲ್ಲಿ ಆನೆಗಳ ಉಪಟಳದಿಂದ ಬೆಳೆ ನಾಶವಾಗುತ್ತಿದ್ದು, ರೈತರು ಸಾಲದ ಕೂಪದಿಂದ ಮೇಲೇಳಲು ಆಗುತ್ತಿಲ್ಲ. ಅರಣ್ಯ ಇಲಾಖೆ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಆನೆಗಳ ಕಾರ್ಯಾಚರಣೆಗೆ ಮುಂದಾಗುತ್ತಿಲ್ಲ ಹಾಗೂ ಬೆಳೆ ಕಳೆದುಕೊಂಡ ರೈತರಿಗೆ ಪರಿಹಾರ ಸಹ ನೀಡುತ್ತಿಲ್ಲ. ನಾರಾಯಣಪ್ಪ ರೈತ, ಭೀಮನಹಳ್ಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net