

ಕೋಲಾರ: ದಿಢೀರ್ ಶ್ರೀಮಂತಿಕೆಯ ಆಸೆ ಬೇಡ, ಇಚ್ಛಾಶಕ್ತಿ, ಶ್ರದ್ಧೆಯಿಂದ ಕುರಿ ಸಾಕಾಣಿಕೆಯಲ್ಲಿ ತೊಡಗಿಸಿಕೊಂಡರೆ ಜೀವನದಲ್ಲಿ ಯಶಸ್ಸು ಕಾಣಬಹುದು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹೇಳಿದರು.
ತಾಲೂಕಿನ ಹೊನ್ನೇನಹಳ್ಳಿಯ ಕೆನರಾಬ್ಯಾಂಕ್ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಕುರಿ ಸಾಕಾಣಿಕೆ ತರಬೇತಿ ಪೂರೈಸಿದ ಶಿಕ್ಷಣಾರ್ಥಿಗಳಿಗೆ ಶುಕ್ರವಾರ ಪ್ರಮಾಣ ಪತ್ರ ವಿತರಿಸಿ ಮಾತನಾಡಿ, ಕುರಿ ಸಾಕಾಣಿಕೆ ಆರಂಭಿಸಲು ಡಿಸಿಸಿ ಬ್ಯಾಂಕ್‌ನಿಂದ ಶೇ.3ರ ಬಡ್ಡಿದರದಲ್ಲಿ ಸಾಲ ನೀಡಲಾಗುವುದು. ಪಡೆದ ಸಾಲದ ಹಣ ಸದ್ಬಳಕೆ ಮಾಡಿಕೊಂಡು ದುಡಿಮೆ ಆರಂಭಿಸಿದರೆ ಸಾಧನೆ ಸಾಧ್ಯ ಎಂದು ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಚೆಂಜಿಮಲೆ ರಮೇಶ್ ಅವರನ್ನು ಸಾಧನೆ ವಿವರಿಸಿದರು.
ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ನಂಬಿಕೆಯೇ ಜೀವಾಳ. ಸಾಲ ಪಡೆದು ಸರಿಯಾಗಿ ಮರುಪಾವತಿ ಮಾಡದಿದ್ದರೆ ಬ್ಯಾಂಕುಗಳು ಸಂಕಷ್ಟಕ್ಕೆ ಸಿಲುಕುತ್ತವೆ. ಇದರಿಂದ ಬಡ್ಡಿದಂಧೆಕೋರರು ಮತ್ತೆ ಬೀದಿಗೆ ಬಂದು ಜನರ ಬದುಕು ನರಕ ಮಾಡುತ್ತಾರೆ. ಪಡೆದಿರುವ ತರಬೇತಿ ನಿಮ್ಮ ಜೀವನಕ್ಕೆ ಮೈಲಿಗಲ್ಲಾಗಲಿ, ಪ್ರಾಣಿಗಳ ಸಂರಕ್ಷಣೆಯ ಹೊಣೆ ಹೊತ್ತ ಪಶು ವೈದ್ಯರೊಂದಿಗೆ ಸಂಪರ್ಕದಲ್ಲಿರಿ, ಅವರದ್ದು ನಿಜವಾದ ಹೃದಯವಂತಿಕೆಯ ಸೇವೆ ಎಂದರು.
ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಚೆಂಜಿಮಲೆ ರಮೇಶ್ ಮಾತನಾಡಿ, 1995ರಲ್ಲಿ ಇದೇ ಸಂಸ್ಥೆಯಲ್ಲಿ ತರಬೇತಿಗೆ ಬಂದಿದ್ದೆ. ನಾನು ಅಂದು ಬ್ಯಾಂಕಿನಿಂದ 6000 ರೂ.ಸಾಲ ಪಡೆಯಲು ಕಷ್ಟವಾಗಿತ್ತು. ಇಂದು 3 ಕೋಟಿ ಸಾಲ ರೂ. ಪಡೆಯುವಷ್ಟು ನಂಬಿಕೆ ಉಳಿಸಿಕೊಂಡಿದ್ದೇನೆ. ಸಾಲ ಪಡೆಯುತ್ತಿರುವ ಉದ್ದೇಶ ಉತ್ತಮವಾಗಿರಲಿ. ಸಾಲ ಸದುದ್ದೇಶಕ್ಕೆ ಬಳಕೆಯಾಗಲಿ, ಅದರ ಮರುಪಾವತಿಯಲ್ಲೂ ಸಮರ್ಪಕತೆ ಇದ್ದರೆ ಖಂಡಿತಾ ಬ್ಯಾಂಕುಗಳು ಮತ್ತೆ ಕರೆದು ಕೇಳಿದಷ್ಟು ನೆರವು ನೀಡುತ್ತವೆ ಎಂದರು.
ತರಬೇತಿ ಪಡೆದ ಫಲಾನುಭವಿ ನಿವೃತ್ತ ಯೋಧ ಮಂಜುನಾಥ್ ಅನುಭವ ಹಂಚಿಕೊಂಡರು. ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ. ಜಗದೀಶ್, ಕುರಿ ಅಭಿವೃದ್ದಿ ಮಂಡಳಿ ಅಧಿಕಾರಿ ವಿಶ್ವನಾಥ್, ತರಬೇತಿ ಸಂಸ್ಥೆ ನಿರ್ದೇಶಕ ರಮಾಕಾಂತ್, ಸಂಸ್ಥೆ ತರಬೇತುದಾರ ಗಿರೀಶ್‌ರೆಡ್ಡಿ, ಮುಖಂಡರಾದ ಕೆಂಬೋಡಿ ನಾರಾಯಣಗೌಡ, ಚಲಪತಿ, ಗಿರೀಶ್ ಉಪಸ್ಥಿತರಿದ್ದರು.