ಲಾಬಿಗೆ ಒಳಪಡದಿರಲಿ ರಸ್ತೆ ವಿಸ್ತೀರ್ಣ

30-klr-5
Published on

ಪಾ.ಶ್ರೀ.ಅನಂತರಾಮ್ ಕೋಲಾರ

ನಗರದ ಮೆಕ್ಕೆ ವೃತ್ತದಿಂದ ಬಂಗಾರಪೇಟೆ ವೃತ್ತ ಮತ್ತೆ ಅಲ್ಲಿಂದ ಕ್ಲಾಕ್ ಟವರ್ ವೃತ್ತದವರೆಗೆ ರಸ್ತೆ ವಿಸ್ತೀರ್ಣಕ್ಕೆ ಚಾಲನೆ ಸಿಕ್ಕಿರುವುದು ನಾಗರಿಕರಲ್ಲಿ ಸಂತಸವನ್ನುಂಟು ಮಾಡಿದೆಯಾದರೂ ಮತ್ತೊಮ್ಮೆ ಫುಟ್‌ಪಾತ್ ಒತ್ತುವರಿಯಾಗದಂತೆ ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ದಿಟ್ಟ ಕ್ರಮ ಕೈಗೊಳ್ಳುವರೇ ಎಂಬ ಜಿಜ್ಞಾಸೆ ಮೂಡಿಸಿದೆ.

ಸಂಚಾರ ದಟ್ಟಣೆ ನಿಯಂತ್ರಣದ ಜತೆಗೆ ಜಿಲ್ಲಾ ಕೇಂದ್ರವನ್ನು ಸುಂದರವಾಗಿಸುವುದು ರಸ್ತೆ ವಿರ್ಸೀಣದ ಆಶಯವಾಗಿದ್ದು, ಈ ಎರಡೂ ಯೋಜನೆಗಳಿಗೆ ತಲಾ 5 ಕೋಟಿ ರೂ. ವ್ಯಯಿಸಲಾಗುತ್ತಿದೆ.

ಮೆಕ್ಕೆ ವೃತ್ತದಿಂದ ಬಂಗಾರಪೇಟೆ ವೃತ್ತದವರೆಗೆ ರಸ್ತೆ ಕಾಮಗಾರಿಗಾಗಿ ಕೆಲ ದೇವಾಲಯ, ಅಶ್ವಥ್ಥ ಕಟ್ಟೆ, ಸರ್ಕಾರಿ ಮತ್ತು ಖಾಸಗಿ ಕಟ್ಟಡ ಕೆಡವಲಾಗಿದೆ, ಚರಂಡಿ ಕಾಮಗಾರಿ ಭರದಿಂದ ಸಾಗಿದೆ. ಬಂಗಾರಪೇಟೆ ವೃತ್ತದಿಂದ ಕ್ಲ್ಲಾಕ್ ಟವರ್ ವೃತ್ತದವರೆಗೆ ಕಾಮಗಾರಿಗೆ ಜನಪ್ರತಿನಿಧಿಗಳು ಗುದ್ದಲಿಪೂಜೆ ನೆರವೇರಿಸಿದ್ದಾರೆ.

ಕಾಮಗಾರಿ ಗುಣಮಟ್ಟ ಕಾಯ್ದುಕೊಳ್ಳುವುದು ಕೇವಲ ಪಿಡಬ್ಲುೃಡಿ ಇಲಾಖೆ ಇಂಜನಿಯರ್‌ಗಳ ಜವಾಬ್ದಾರಿ ಮಾತ್ರವಲ್ಲ, ನಗರಸಭೆ ಸದಸ್ಯರು ಕಳಪೆ ಕೆಲಸಕ್ಕೆ ಅವಕಾಶ ನೀಡದೆ ನಿಗಾ ವಹಿಸಬೇಕು, ಗುತ್ತಿಗೆದಾರರು ಜನರ ತೆರಿಗೆ ಹಣ ವ್ಯರ್ಥವಾಗದಂತೆ ಎಚ್ಚರವಹಿಸಿ ಕೆಲಸ ಮಾಡಿದಾಗ ರಸ್ತೆ ಕೆಲವು ವರ್ಷ ಬಾಳಿಕೆ ಬರುತ್ತದೆ.

ಮುಖ್ಯವಾಗಿ ರಸ್ತೆ ಕಾಮಗಾರಿ ಮುಗಿದ ಬಳಿಕ ಫುಟ್‌ಪಾತ್ ಒತ್ತುವರಿಯಾಗದಂತೆ ಎಚ್ಚರವಹಿಸಬೇಕು, ಬೀದಿ ಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆಗೆ ನಗರಸಭೆ ಜಾಗ ಗುರುತಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿದಲ್ಲಿ ಮಾತ್ರ ರಸ್ತೆ ವಿಸ್ತೀರ್ಣದ ಉದ್ದೇಶ ಸಾರ್ಥಕವಾಗುತ್ತದೆ.

ಕೆಲ ವರ್ಷಗಳ ಹಿಂದೆ ಎಂಬಿ ರಸ್ತೆ ಅಗಲೀಕರಣ ಕಾರ್ಯ ನಡೆದಿದ್ದು ಫುಟ್‌ಪಾತ್ ಅತಿಕ್ರಮಣ ತಪ್ಪಿಸಲು ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ, ಜನರ ದೂರಿಗೆ ಮೇರೆಗೆ ಕಾರ್ಯಾಚರಣೆಗೆ ತೆರಳಿದ್ದ ಸಂಚಾರಿ ಪೊಲೀಸರಿಗೆ ಧಮ್ಕಿ ಹಾಕಿದವರ ಮೇಲೆ ಜಿಲ್ಲಾಡಳಿತ, ನಗರಸಭೆ, ಪಿಡಬ್ಲುೃಡಿ ಅಧಿಕಾರಿಗಳು ಕ್ರಮ ಕೈಗೊಳ್ಳಲಾಗಿಲ್ಲ, ಆಗಿನ ಕೆಲ ನಗರಸಭೆ ಸದಸ್ಯರು ಒತ್ತುವರಿದಾರರ ಪರ ನಿಂತಿದ್ದರಿಂದ ರಸ್ತೆ ವಿಸ್ತೀರ್ಣ ಅಪಹಾಸ್ಯಕ್ಕೆ ಗುರಿಯಾಗಿದೆ.

ಈಗ ಕೈಗೊಂಡಿರುವ ಕೆಲಸ ವೋಟ್ ಬ್ಯಾಂಕ್ ರಾಜಕಾರಣಕ್ಕೆ ಇಲ್ಲವೆ ಲಾಬಿಗೆ ಒಳಪಡದೆ ಸುಸೂತ್ರವಾಗಿ ನಡೆದಾಗ ಮಾತ್ರ ನಗರಾಭಿವೃದ್ಧಿಗೆ ಸಹಕಾರಿಯಾಗುತ್ತದೆ. ಬಂಗಾರಪೇಟೆ ಶಾಸಕರ ದಿಟ್ಟತನ, ಬದ್ಧತೆ ಕೋಲಾರ ನಗರದ ಜನಪ್ರತಿನಿಧಿಗಳಿಗೆ ಮಾದರಿಯಾಗಬೇಕಿದೆ.

ಅಂತರಗಂಗೆ ರಸ್ತೆಯ ಕುವೆಂಪು ಪಾರ್ಕಿಗೆ ಹೊಂದಿಕೊಂಡಿರುವ ಕಾಲುವೆ ಮೇಲೆ ಹಾಸುತ್ತಿರುವ ಸಿಮೆಂಟ್ ಚಪ್ಪಡಿ ಮೇಲೆ ಅಂಗಡಿ ತಲೆ ಎತ್ತುವ ಲಕ್ಷಣ ಕಂಡುಬರುತ್ತಿದ್ದು ನಗರಸಭೆ ಎಚ್ಚರವಹಿಸಬೇಕು. ನಗರದ ಸರ್ಕಾರಿ ಬಸ್ ನಿಲ್ದಾಣ ವೃತ್ತ, ಮೆಕ್ಕೆ ವೃತ್ತ, ಬಂಗಾರಪೇಟೆ ವೃತ್ತದಲ್ಲಿ ಸ್ಕೈವಾಕ್ ನಿರ್ಮಿಸಿದಲ್ಲಿ ಅನುಕೂಲವಾಗುವುದಲ್ಲದೆ ಸಂಚಾರ ದಟ್ಟಣೆ ತಪ್ಪಿಸಬಹುದು.

ರಸ್ತೆ ವಿಸ್ತೀರ್ಣ ಕಾಮಗಾರಿ ಮುಗಿಸಿಕೊಡುವುದು ಪಿಡಬ್ಲುೃಡಿ ಇಲಾಖೆ ಜವಬ್ದಾರಿ, ನಗರಸಭೆಯವರು ಫುಟ್‌ಪಾತ್ ಒತ್ತುವರಿಯಾಗದಂತೆ ಎಚ್ಚರವಹಿಸಬೇಕು. ಮೆಕ್ಕೆ ವೃತ್ತದಿಂದ ಬಂಗಾರಪೇಟೆ ವೃತ್ತದವರೆಗಿನ ಕಾಮಗಾರಿ ಮೇನಿಂದ ಪ್ರಾರಂಭಿಸಲಾಗಿದ್ದು, 2021ರ ಮಾರ್ಚ್ ವೇಳೆಗೆ ಮುಗಿಯಲಿದೆ. ಬಂಗಾರಪೇಟೆ ವೃತ್ತದಿಂದ ಕ್ಲಾಕ್ ಟವರ್‌ವರೆಗಿನ ಕಾಮಗಾರಿಯನ್ನು 11 ತಿಂಗಳೊಳಗೆ ಪೂರ್ಣಗೊಳಿಸಲಾಗುವುದು. ಆರ್.ಚಂದ್ರಶೇಖರ್, ಕಾರ್ಯಪಾಲಕ ಅಭಿಯಂತ, ಲೋಕೋಪಯೋಗಿ ಇಲಾಖೆ, ಕೋಲಾರ ಫುಟ್‌ಪಾತ್ ಒತ್ತುವರಿಯಾಗದಂತೆ ಎಚ್ಚರವಹಿಸುತ್ತೇವೆ, ವ್ಯಾಪಾರಿಗಳು ಪಾದಚಾರಿಗಳಿಗೆ ತೊಂದರೆಯಾಗದಂತೆ ಸೂಕ್ತ ಜಾಗದಲ್ಲಿ ವ್ಯಾಪಾರ ನಡೆಸಬೇಕು, ಕೋಲಾರವನ್ನು ಸುಂದರವಾಗಿಡಲು ಜನ ಸಹಕಾರ ನೀಡಬೇಕು. ರಸ್ತೆ ಅಗಲೀಕರಣದಿಂದ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ. ನಗರಸಭೆಯಿಂದ ಸಹಕಾರ ನೀಡುತ್ತೇವೆ. ಶ್ರೀಕಾಂತ್, ಆಯುಕ್ತ, ನಗರಸಭೆ, ಕೋಲಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net