ಗ್ರಾಮ ಸ್ವಚ್ಛತೆಗೆ ಇಂಗುಗುಂಡಿ ನಿರ್ಮಾಣ, ರಾಜ್ಯ ಸರ್ಕಾರದಿಂದ ಹೊಸ ಯೋಜನೆ ಅನುಷ್ಠಾನಕ್ಕೆ ಶೀಘ್ರ ಚಾಲನೆ

28-klr-1 Alternative
Published on

ಕೋಲಾರ: ಗ್ರಾಮೀಣ ಪ್ರದೇಶದ ಚರಂಡಿಗಳಲ್ಲಿ ಕೊಳಚೆ ನೀರು ಸರಾಗವಾಗಿ ಹರಿಯದೆ ಪರಿಸರಕ್ಕೆ ಹಾನಿ ಉಂಟಾಗುವುದನ್ನು ತಪ್ಪಿಸಲು ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಇಂಗುಗುಂಡಿ ನಿರ್ಮಿಸಲು ಸರ್ಕಾರ ಜಿಪಂಗಳಿಗೆ ವಿಶೇಷ ಕಾರ್ಯಕ್ರಮವೊಂದನ್ನು ನೀಡಿದೆ.

ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಹಿರಿಯ ಅಧಿಕಾರಿಗಳು ಜಿಪಂನ ನರೇಗಾ ಅನುಷ್ಠಾಧಿಕಾರಿಗಳೊಂದಿಗೆ ಗುರುವಾರ ವಿಡಿಯೋ ಕನ್ಫಾರೆನ್ಸ್ ಮೂಲಕ ಹೊಸ ಯೋಜನೆ ಕುರಿತು ಸಂವಾದ ನಡೆಸಿದ್ದು, ಶನಿವಾರ ಆದೇಶ ಹೊರ ಬೀಳುವ ಸಾಧ್ಯತೆಗಳಿವೆ.

ಚರಂಡಿ ನೀರು ಹರಿಯದೆ ಒಂದೇ ಕಡೆ ನಿಲ್ಲುವುದರಿಂದ ಪರಿಸರಕ್ಕೆ ಹಾನಿಯಾಗುವುದಲ್ಲದೆ ಸ್ವಚ್ಛತೆ ಇಲ್ಲದೆ ಸಾಂಕ್ರಾಮಿಕ ರೋಗ ಹರಡುವುದರಿಂದ ಗ್ರಾಮೀಣ ಜನರ ಆರೋಗ್ಯ ಕಾಪಾಡುವ ಜತೆಗೆ ಅಂತರ್ಜಲ ವೃದ್ಧಿಸುವ ಆಶಯದಿಂದ ಇಂಗುಗುಂಡಿ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ. ಜಿಲ್ಲೆಯ 156 ಗ್ರಾಪಂ ವ್ಯಾಪ್ತಿಯ 1599ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಇಂಗು ಗುಂಡಿ ನಿರ್ಮಾಣಕ್ಕೆ ಅವಕಾಶವಿದ್ದು, ಪ್ರತಿ ಘಟಕ ನಿರ್ಮಾಣಕ್ಕೆ 17800 ರೂ. ನಿಗದಿಪಡಿಸಲಾಗಿದೆ.

ಯೋಜನೆಗೆ ಗುರಿ ನಿಗದಿ ಪಡಿಸದಿರುವುದು ಹಾಗೂ ಅನುದಾನದ ಕೊರತೆ ಇಲ್ಲದಿರುವುದರಿಂದ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಇಂಗುಗುಂಡಿ ನಿರ್ಮಿಸಲು ಅಡೆತಡೆ ಇರುವುದಿಲ್ಲ.

ತ್ಯಾಜ್ಯ ಘಟಕಗಳಿಗೆ ಭೂಮಿ: ಗ್ರಾಮಗಳಲ್ಲಿ ಸ್ವಚ್ಛತೆ ಕಾಪಾಡುವ ಉದ್ದೇಶದಿಂದ ಜಿಲ್ಲೆಯಲ್ಲಿ 117 ಗ್ರಾಪಂ ವ್ಯಾಪ್ತಿಯಲ್ಲಿ ಘನತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪನೆಗೆ 1ರಿಂದ 5 ಎಕರೆವರೆಗೆ ಭೂಮಿ ಕಾದಿರಿಸಲಾಗಿದೆ. 84 ಗ್ರಾಪಂಗಳ ವ್ಯಾಪ್ತಿಯಲ್ಲಿ ಈಗಾಗಲೆ 5 ಎಕರೆ ಭೂಮಿಯನ್ನು ತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸಲು ಮಂಜೂರು ಮಾಡಲಾಗಿದೆ.

ಪ್ರತಿ ಘಟಕಕ್ಕೆ ತಲಾ 20 ಲಕ್ಷ ರೂ. ಮೀಸಲಿಡಲಾಗಿದೆ. ಮುಳಬಾಗಿಲು ತಾಲೂಕಿನ ಉತ್ತನೂರು, ಬಂಗಾರಪೇಟೆ ತಾಲೂಕಿನ ಸುಲಿಕುಂಟೆ ಹಾಗೂ ಚಿಕ್ಕಅಕ್ಕಂಡಹಳ್ಳಿಯಲ್ಲಿ ಘಟಕ ನಿರ್ಮಿಸಲಾಗಿದೆ.

ತ್ಯಾಜ್ಯ ನಿರ್ವಹಣೆಗೆ ಸಿಬ್ಬಂದಿ ಕೊರತೆ ಇರುವುದರಿಂದ ನೇಮಕಾತಿಗೆ ಸರ್ಕಾರದ ಅನುಮತಿ ಕೋರಲಾಗಿದ್ದು, ನೇಮಕಾತಿ ಅಗುವವರೆಗೆ ಗ್ರಾಪಂಗಳಲ್ಲಿ ಲಭ್ಯವಿರುವ ಸಿಬ್ಬಂದಿಯನ್ನೇ ಬಳಿಸಿಕೊಂಡು ಎರಡು ದಿನಕ್ಕೆ ಒಮ್ಮೆ ಒಣ ಕಸವನ್ನು ಮನೆಗಳಿಂದ ಸಂಗ್ರಹಣೆ ಮಾಡಿ ಪರಿಸರ ಕಾಪಾಡಲು ಉದ್ದೇಶಿಸಲಾಗಿದೆ.

47 ಗ್ರಾಮಗಳಲ್ಲಿ ನೀರಿಗೆ ಬರ: ಶ್ರೀನಿವಾಸಪುರ, ಕೆಜಿಎಫ್ ಸೇರಿ 6 ತಾಲೂಕುಗಳ 47 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದೆ. ಸರ್ಕಾರ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 35 ಲಕ್ಷ, ಬರ ಪರಿಹಾರ ನಿಧಿಯಡಿ 15 ಲಕ್ಷ ರೂ. ನೀಡಿದ್ದು ಜಿಪಂನಲ್ಲಿ ಪ್ರಸ್ತುತ 3 ಕೋಟಿ ರೂ. ಹಣವಿದ್ದು ಇದನ್ನು ನೀರು ಸರಬರಾಜಿಗೆ ಬಳಕೆ ಮಾಡಲು ಕ್ರಿಯಾ ಯೋಜನೆ ರೂಪಿಸಲಾಗಿದೆ ಎನ್ನುತ್ತಾರೆ ಅಧಿಕಾರಿಗಳು.

ನರೇಗಾದಡಿ ಜಿಲ್ಲೆಯ ಎಲ್ಲ ಗ್ರಾಮಗಳಲ್ಲಿ ಇಂಗುಗುಂಡಿ ನಿರ್ಮಿಸಲು ಯೋಜನೆ ಸಿದ್ಧಪಡಿಸಿ ಕೆಲವೆಡೆ ಜಾರಿಗೆ ತರಲಾಗಿದೆ. ಹೊಲ ಮತ್ತು ಸರ್ಕಾರಿ ಜಾಗದಲ್ಲಿ ಪಶು-ಪಕ್ಷಿಗಳಿಗೆ ಅನುಕೂಲವಾಗುವ ಗಿಡ ನೆಡಲಾಗುತ್ತಿದೆ, ಇಂಗು ಗುಂಡಿ ನಿರ್ಮಾಣ, ಗೋಕುಂಟೆ, ಕಲ್ಯಾಣಿಗಳ ಜೀರ್ಣೋದ್ಧಾರ, ಶಾಲಾ ಕಂಪೌಂಡ್, ಕೊಟ್ಟಿಗೆ ಸೇರಿ ವಿವಿಧ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ. ಕೆ.ಪಿ.ಸಂಜೀವಪ್ಪ, ಉಪ ಕಾರ್ಯದರ್ಶಿ, ಜಿಪಂ, ಕೋಲಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net