

ಕೋಲಾರ: ನಗರದಲ್ಲಿ ಜನಸಂದಣಿಯನ್ನು ಸುಗಮವಾಗಿಸಲು ಹೊರ ವರ್ತುಲ ರಸ್ತೆ ನಿರ್ಮಾಣ ಹಾಗೂ ಸ್ವಚ್ಛತೆ ಕಾಪಾಡಲು ಕಸ ವಿಲೇವಾರಿ ಘಟಕಕ್ಕೆ ವಿಶೇಷ ಒತ್ತು ನೀಡಲು ನಾಗರಿಕರು ಕೋಲಾರ ನಗರಾಭಿವೃದ್ದಿ ಪ್ರಾಧಿಕಾರಕ್ಕೆ ಸಲಹೆ ನೀಡಿದರು.
ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ಬುಧವಾರ ಪ್ರಾಧಿಕಾರಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಪ್ರಾಧಿಕಾರದ ಅಧ್ಯಕ್ಷ ಓಂಶಕ್ತಿ ಚಲಪತಿ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಚಿಂತನ-ಮಂಥನ ಸಭೆಯಲ್ಲಿ ಪಾಲ್ಗೊಂಡಿದ್ದ ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಖಾಸಗಿ ಲೇಔಟ್ ನಿವಾಸಿಗಳು, ಪತ್ರಕರ್ತರು ಸೇರಿ ಅನೇಕರು ಮಾತನಾಡಿ, ಪ್ರಾಧಿಕಾರ ರಚನೆಯಾಗಿ 32 ವರ್ಷಗಳಾದರೂ ಅಭಿವೃದ್ಧಿ ಸಾಧಿಸಲಾಗಿಲ್ಲ. ನಗರಸಭೆ, ಜಿಲ್ಲಾಡಳಿತ ಹಾಗೂ ಪ್ರಾಧಿಕಾರ ಸಮನ್ವಯತೆಯಿಂದ ಕೆಲಸ ಮಾಡಿದಾಗ ಅಭಿವೃದ್ಧಿ ಸಾಧ್ಯ ಎಂದು ಪ್ರತಿಪಾದಿಸಿದರು.
ಸಚಿವರ ಬಳಿ ಸಣ್ಣ-ಪುಟ್ಟ ಬೇಡಿಕೆ ಮಂಡಿಸುವ ಬದಲು ವರ್ತುಲ ರಸ್ತೆ ನಿರ್ಮಾಣಕ್ಕೆ ಹಣ ಕೇಳಿ, ಒಂದೇ ಬಾರಿ ಕೋಟ್ಯಂತರ ರೂ. ನೀಡಲು ಸಾಧ್ಯವಾಗದಿದ್ದರೆ ಕನಿಷ್ಠ ಭೂ ಸ್ವಾಧೀನ ಮತ್ತು ಪ್ರಾರಂಭಿಕ ಕಾಮಗಾರಿಗೆ ಅಗತ್ಯವಿರುವ ಮೊತ್ತ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಎಂದರು.
ಪ್ರಾಧಿಕಾರದ ಮಾಜಿ ಅಧ್ಯಕ್ಷ ಅಬ್ದುಲ್ ಖಯ್ಯೂಂ ಮಾತನಾಡಿ, ಕೂಡಾ ವ್ಯಾಪ್ತಿ ವಿಸ್ತರಣೆಯಾಗಬೇಕು. ನರಸಾಪುರ ಮತ್ತು ವೇಮಗಲ್ ಕೈಗಾರಿಕಾ ಪ್ರದೇಶವನ್ನು ಪ್ರಾಧಿಕಾರ ವ್ಯಾಪ್ತಿಗೆ ಸೇರಿಸಲು ಸಚಿವರನ್ನು ಆಗ್ರಹಿಸಬೇಕು, ಇದರಿಂದ ಆದಾಯ ಹೆಚ್ಚುತ್ತದೆ, ಕೋಲಾರಮ್ಮ ಕೆರೆಯನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಲು ಯೋಜನೆ ಕೈಗೆತ್ತಿಕೊಳ್ಳಬೇಕು ಎಂದು ಮನವಿ ಮಾಡಿದರು.
ಹಿರಿಯ ವಕೀಲ ಧನರಾಜು ಮಾತನಾಡಿ, ನಗರ ಸ್ವಚ್ಛತೆ ಇಲ್ಲದೆ ಅಪಹಾಸ್ಯಕ್ಕೆ ಗುರಿಯಾಗಿದೆ, ಪ್ರಾಧಿಕಾರವು ಘನತ್ಯಾಜ್ಯ ವಿಲೇವಾರಿಗೆ ಭೂಮಿ ಗುರುತಿಸಿಕೊಡಬೇಕು ಎಂದರು. ನೀರಿನ ಸಮಸ್ಯೆಯಿಂದ ನಗರದ ಅಭಿವೃದ್ಧಿಗೆ ಹಿನ್ನಡೆಯಾಗಿದ್ದು, ಲೇಔಟ್‌ಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಗೋರಕ್ಷಕ ಡಾ.ಶಿವಣ್ಣ ಹೇಳಿದರು.
ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ವಿ.ಮುನಿರಾಜು, ಸಚಿವರ ಮೇಲೆ ಒತ್ತಡ ತಂದು ಹೆಚ್ಚು ಅನುದಾನ ಮಂಜೂರು ಮಾಡಿಸಿದಲ್ಲಿ ಅಭಿವೃದ್ಧಿ ಕೆಲಸ ಚುರುಕುಗೊಳ್ಳುತ್ತದೆ ಎಂದರು. ಹಿರಿಯ ಪತ್ರಕರ್ತ ಬಿ.ವಿ.ಗೋಪಿನಾಥ್, ತೇರಹಳ್ಳಿಗೆ ಹೋಗುವ ಮಾರ್ಗದಲ್ಲಿರುವ ಸುಲ್ತಾನ್ ತಿಪ್ಪಸಂದ್ರ ಕೆರೆ ಅಭಿವೃದ್ಧಿಪಡಿಸಿದರೆ ಪ್ರವಾಸಿಗರನ್ನು ಸೆಳೆಯಲು ಅನುಕೂಲವಾಗುತ್ತದೆ ಎಂದು ಅಭಿಪ್ರಾಯಿಸಿದರು.
ನಗರಸಭೆ ಸದಸ್ಯ ಅಂಬರೀಷ್, ಕೋಲಾರ ನಗರ ಅಭಿವೃದ್ಧಿಯಾಗದಿರುವುದಕ್ಕೆ ನಗರಸಭೆ, ಪ್ರಾಧಿಕಾರ ಹಾಗೂ ಜಿಲ್ಲಾ ಆಡಳಿತದ ವೈಫಲ್ಯವೇ ಕಾರಣ ಎಂದರು.
ಸದಸ್ಯ ಮುರಳಿಗೌಡ, ನಗರಸಭೆ ಮಾಜಿ ಅಧ್ಯಕ್ಷ ಅಪ್ರೋಜ್ ಪಾಷಾ, ಲಾರಿ ಮಾಲೀಕರ ಸಂಘದ ಅಧ್ಯಕ್ಷ ಕುಮಾರ್, ಚಂದ್ರಣ್ಣ, ಗೋಲ್ಡನ್ ಸಿಟಿ ಶಿಕ್ಷಣ ಸಂಸ್ಥೆ ಮುಖ್ಯಸ್ಥ ಅಶೋಕ್, ಎನ್‌ಜಿಒ ಲೇಔಟ್ ಸುಬ್ರಮಣಿ, ಜಯ ಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ತ್ಯಾಗರಾಜ್, ಪ್ರಶಾಂತ್, ಉದ್ಯಮಿ ಸತೀಶ್, ದಲಿತ ಮುಖಂಡ ವಕ್ಕಲೇರಿ ರಾಜಪ್ಪ ಇತರರು ಉಪಸ್ಥಿತರಿದ್ದರು.
ಸಚಿವ ಬೈರತಿ ಬಸವರಾಜು ಅವರಿಗೆ ಸಲ್ಲಿಸುವ ಮನವಿಯಲ್ಲಿ ಪ್ರಮುಖವಾಗಿ ರಿಂಗ್ ರೋಡ್ ನಿರ್ಮಾಣಕ್ಕೆ ಬೇಕಾದ ಆರ್ಥಿಕ ನೆರವು ಪ್ರಸ್ತಾಪಿಸಲಾಗುವುದು, ಹೊಸ ಬಡಾವಣೆ ರಚನೆ ವಿಚಾರದಲ್ಲೂ ಸಹಕಾರ ಕೋರುತ್ತೇವೆ, ಈಗಾಗಲೆ ನಗರದ ಪ್ರಮುಖ ಸ್ಥಳಗಳಲ್ಲಿ ಮಹಾದ್ವಾರ, 9 ಕಡೆ ತಂಗುದಾಣ ನಿರ್ಮಾಣಕ್ಕೆ ಸಿದ್ಧತೆ ನಡೆಯುತ್ತಿದೆ. ಓಂಶಕ್ತಿ ಚಲಪತಿ, ಅಧ್ಯಕ್ಷ, ನಗರಾಭಿವೃದ್ಧಿ ಪ್ರಾಧಿಕಾರ, ಕೋಲಾರ