ಕೋಲಾರದಲ್ಲಿ ಹಬ್ಬದ ಕಳೆ, ಸರ್ಕಾರದ ಷರತ್ತು ಕಠಿಣ ಸಾರ್ವಜನಿಕ ಸಂಭ್ರಮಕ್ಕೆ ಬ್ರೇಕ್

20-klr-4
Published on

ಕೋಲಾರ: ಸರ್ಕಾರ ಗಣೇಶೋತ್ಸವಕ್ಕೆ ಷರತ್ತು ಬದ್ಧ ಅನುಮತಿ ನೀಡಿರುವುದರಿಂದ ಮಾರಾಟಗಾರರು ಗೌರಿ-ಗಣೇಶ ಮೂರ್ತಿಯ ಮಾರಾಟಕ್ಕೆ ಇಳಿದಿರುವುದರಿಂದ ಹಬ್ಬದ ಕಳೆ ಬಂದಿದೆ.

ಕರೊನಾ ಹಿನ್ನೆಲೆಯಲ್ಲಿ ಈ ವರ್ಷ ಗಣೇಶೋತ್ಸವ ನಡೆಯುವ ಕುರಿತು ಸ್ಪಷ್ಟತೆ ಇಲ್ಲದೆ ಬಹುತೇಕ ಮೂರ್ತಿ ತಯಾರಕರು ಸಾರ್ವಜನಿಕವಾಗಿ ಪ್ರತಿಷ್ಠಾಪಿಸುವ ಗಣೇಶನ ಮೂರ್ತಿಗಳನ್ನು ತಯಾರಿಸುವ ಧೈರ್ಯ ತೋರಲಿಲ್ಲ. ಬದಲಾಗಿ ಮನೆಯಲ್ಲಿ ಪೂಜಿಸುವ ಚಿಕ್ಕ ಮೂರ್ತಿಗಳನ್ನು ತಯಾರಿಸಿದ್ದರು. ಇನ್ನು ಕೆಲವರು ಮೂರ್ತಿ ತಯಾರಿಕೆಗೇ ಹೋಗಲಿಲ್ಲ.

ಈ ಮಧ್ಯೆ ಗಣೇಶೋತ್ಸವಕ್ಕೆ ಅನುಮತಿ ನೀಡುವಂತೆ ಹಿಂದುಪರ ಸಂಘಟನೆಗಳ ಒತ್ತಾಯಕ್ಕೆ ಮಣಿದ ಸರ್ಕಾರ ಐದು ದಿನಗಳ ಹಿಂದೆ ಪರಿಷ್ಕೃತ ಮಾರ್ಗಸೂಚಿ ಹೊರಡಿಸಿತ್ತು. ಈ ಆದೇಶದಿಂದ ಮೂರ್ತಿ ತಯಾರಕರಿಗೆ ಎದುರಾಗಿದ್ದ ದೊಡ್ಡ ವಿಘ್ನವೊಂದು ನಿವಾರಣೆಯಾಗಿದೆ. ಆದರೆ ವಿಧಿಸಿರುವ ಕಠಿಣ ಷರತ್ತುಗಳು ಸಾರ್ವಜನಿಕವಾಗಿ ಗಣೇಶೋತ್ಸವ ಆಚರಣೆಯ ಸಂಭ್ರಮಕ್ಕೆ ಬ್ರೇಕ್ ಹಾಕಿವೆ.

ತಲೆ ಎತ್ತಿದ ಅಂಗಡಿ: ನಗರದ ನಚಿಕೇತನಿಲಯದ ಮುಂಭಾಗದ ರಸ್ತೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರಸ್ತೆ, ಟೇಕಲ್ ರಸ್ತೆ, ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಬಳಿ ಗೌರಿಗಣೇಶ ಮೂರ್ತಿ ಮಾರಾಟಕ್ಕಿಟ್ಟಿದ್ದಾರೆ. ಮಣ್ಣಿನ 5 ಇಂಚಿನಿಂದ 4 ಅಡಿಯವರೆಗಿನ ಗಣಪ ಮತ್ತು 1 ಅಡಿವರೆಗಿನ ಗೌರಿ ಮೂರ್ತಿಗಳು ಜಲವರ್ಣ, ವರ್ಣರಹಿತ ಮೂರ್ತಿಗಳಿಗೆ 80 ರೂ. ನಿಂದ 6000 ರೂ.ವರೆಗೆ ಬೆಲೆಯಿದೆ. ಶೇ.99 ಮೂರ್ತಿಗಳು ಮನೆಯಲ್ಲೇ ಪೂಜಿಸುವಂತಹದ್ದು. ಕರೊನಾ ಆರ್ಥಿಕ ಸಂಕಷ್ಟದಿಂದ ಖರೀದಿದಾರರು ಚೌಕಾಸಿ ಮಾಡಿ ಖರೀದಿಸುತ್ತಿದ್ದ ದೃಶ್ಯ ಕಂಡುಬಂತು.

ಸಾರ್ವಜನಿಕ ಗಣೇಶೋತ್ಸವಕ್ಕೆ ಅನುಮತಿ ನೀಡುವುದಿಲ್ಲ ಎಂದು ಹೇಳಿದ್ದ ಸರ್ಕಾರ ಕೊನೇ ಗಳಿಗೆಯಲ್ಲಿ ಅವಕಾಶ ನೀಡಿದೆ. ಇದೇ ಅನುಮತಿ 10ರಿಂದ 15 ದಿನ ಮುಂಚಿತವಾಗಿ ನೀಡಿದ್ದರೆ ಚೆನ್ನಾಗಿತ್ತು. ಸಾರ್ವಜನಿಕ ಗಣೇಶೋತ್ಸವಕ್ಕೆ ಮೂರ್ತಿಗಾಗಿ ಕೆಲವರು ಕರೆ ಮಾಡಿ ವಿಚಾರಿಸುತ್ತಿದ್ದಾರೆ. ಕರೊನಾದಿಂದ ಈ ಸಲ ಬೆಂಗಳೂರಿನಲ್ಲಿ ಸ್ಟಾಲ್ ಹಾಕಲಿಲ್ಲ, ಕೋಲಾರ ನಗರದಲ್ಲಷ್ಟೇ ಸ್ಟಾಲ್ ಹಾಕುತ್ತಿರುವುದಾಗಿ ಹೇಳುತ್ತಾರೆ ಸ್ಪಂದನ ರಂಗನಾಥ್.

ಉತ್ಸಾಹ ಕಡಿಮೆ: ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ಸರ್ಕಾರ ವಿಧಿಸಿರುವ ಷರತ್ತು ಯುವಕರಿಗೆ ನಿರಾಸೆ ತಂದಿದೆ. ವಾರ್ಡ್, ಗ್ರಾಮಕ್ಕೊಂದು ಗಣೇಶ ಪ್ರತಿಷ್ಠಾಪನೆಗೆ ಅವಕಾಶ, ಸ್ಥಳೀಯ ಸಂಸ್ಥೆಗಳಿಂದ ಅನುಮತಿ ಪಡೆಯುವುದು ಕಡ್ಡಾಯ. ಹೀಗಾಗಿ ಗಣೇಶ ಪ್ರತಿಷ್ಠಾಪನೆಗೆ ಪೈಪೋಟಿಯ ಉತ್ಸಾಹ ಕಂಡುಬರುತ್ತಿಲ್ಲ.

ಗಣೇಶೋತ್ಸವಕ್ಕೆ ಸರ್ಕಾರ ಅನುಮತಿ ಕೊಟ್ಟರೆ ಹೊರಗಡೆಯಿಂದ ತರಿಸಿದರಾಯಿತು. ಬಂಡವಾಳಕ್ಕೆ ಕಷ್ಟವಾದ್ದರಿಂದ ನೆರೆಯ ತಮಿಳುನಾಡಿನಿಂದ ಮೂರ್ತಿ ತರಿಸಿದ್ದೇನೆ, ಜನರಿಗೂ ಕಷ್ಟ ಇದೆ, ಕರೊನಾದಿಂದ ವ್ಯಾಪಾರ ನಿರೀಕ್ಷೆಯಂತಿಲ್ಲ. ಕಲ್ಲಂಡೂರು ಅಶ್ವತ್ಥಪ್ಪ, ಮಾರಾಟಗಾರ ಈ ಬಾರಿ ದೊಡ್ಡ ಗಣಪತಿ ತಯಾರಿಸಿಲ್ಲ, ದೇವಸ್ಥಾನಕ್ಕೆಂದು ಮೂರ್ನಾಲ್ಕು ಅಡಿಯ ಗಣಪತಿ ತಯಾರಿಸಿಟ್ಟಿದ್ದೇನೆ. ಮೂರ್ತಿ ಮಾರಾಟಕ್ಕೆ ಜಿಲ್ಲಾಡಳಿತ, ನಗರಸಭೆ ಅನುಮತಿ ನೀಡಿದೆ. ಶೇ. 75ರಷ್ಟಾದರೂ ವ್ಯಾಪಾರ ಆಗುತ್ತದೆ ಎಂಬ ನಂಬಿಕೆ ಇದೆ. ಕುಂಬಾರಪೇಟೆ ಲಕ್ಷ್ಮಯ್ಯ, ಮೂರ್ತಿ ತಯಾರಕ ಕರೊನಾದಿಂದ ಎಲ್ಲರಿಗೂ ಕಷ್ಟ ಇದೆ, ಮೂರ್ತಿಗಳ ಬೆಲೆ ಸ್ವಲ್ಪ ಜಾಸ್ತಿ ಅನಿಸಿದರೂ ಪ್ರತಿವರ್ಷ ಆಚರಿಸುವ ಗೌರಿಗಣೇಶ ಹಬ್ಬವನ್ನು ಮಾಡದೆ ಇರಲಾಗದು. ಸಿ.ಲಕ್ಷ್ಮೀ, ಕೋಲಾರ ನಿವಾಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net