

ಕೋಲಾರ: ಕರೊನಾದಿಂದ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದ್ದ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು, ಮಹಿಳೆಯರು ಹಾಗೂ ಬಡವರಿಗೆ 284 ಕೋಟಿ ರೂ. ಸಾಲ ನೀಡಲಾಗಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಹೇಳಿದರು.
ಡಿಸಿಸಿ ಬ್ಯಾಂಕ್ ಆವರಣದಲ್ಲಿ ಗುರುವಾರ ನಗರದ ವಿವಿಧ ಮಹಿಳಾ ಸ್ವಸಹಾಯ ಸಂಘಗಳಿಗೆ 1.64 ಕೋಟಿ ರೂ. ಸಾಲ ವಿತರಿಸಿ ಮಾತನಾಡಿ, ಕರೊನಾ ವೇಳೆ ರೈತರಿಗೆ, ಮಹಿಳೆಯರಿಗೆ ನೆರವು ಒದಗಿಸಲು ವಾಣಿಜ್ಯ ಬ್ಯಾಂಕುಗಳು ಧೈರ್ಯ ತೋರಲಿಲ್ಲ. ಆದರೆ ಡಿಸಿಸಿ ಬ್ಯಾಂಕ್ ಕಷ್ಟ ಕಾಲದಲ್ಲಿ ಜನರ ಕೈ ಹಿಡಿದಿದೆ ಎಂದರು.
ಕಳೆದ 4 ತಿಂಗಳ ಅವಧಿಯಲ್ಲಿ ರೈತರಿಗೆ 92 ಕೋಟಿ, ಹೈನುಗಾರಿಕೆಗೆ 12 ಕೋಟಿ ಹಾಗೂ ಮಹಿಳೆಯರಿಗೆ 180 ಕೋಟಿ ರೂ. ಸಾಲ ನೀಡಲಾಗಿದೆ, ಸಾಲ ಪಡೆದವರಿಗೆ ಡಿಸಿಸಿ ಬ್ಯಾಂಕಿನ ಮೇಲೆ ಅಕ್ಕರೆ, ವಿಶ್ವಾಸ ಇರಬೇಕು, ಸಾಲಕ್ಕಾಗಿ ನಮ್ಮ ಬ್ಯಾಂಕ್ ಬೇಕು, ಠೇವಣಿ ಇಡಲು ವಾಣಿಜ್ಯ ಬ್ಯಾಂಕ್ ಆಯ್ಕೆ ಮಾಡಿಕೊಳ್ಳುವುದು ಸರಿಯೇ ಎಂದು ಪ್ರಶ್ನಿಸಿದರು.
ಬ್ಯಾಂಕ್ ಎಷ್ಟೇ ಪ್ರಾಮಾಣಿಕವಾಗಿ ರೈತರು, ತಾಯಂದಿರ ಸಂಕಷ್ಟಕ್ಕೆ ಸ್ಪಂದಿಸುತ್ತಿದ್ದರೂ, ಕೆಲವರು ಟೀಕೆ ಮಾಡುತ್ತಿರುವುದು ಬೇಸರ‌್ವನ್ನುಂಟು ಮಾಡಿದೆ, ಬ್ಯಾಂಕ್ ಮತ್ತು ನನ್ನ ವಿರುದ್ಧ ಆರೋಪ ಮಾಡುವವರಿಗೆ ದೇವರು ಒಳ್ಳೆಯದು ಮಾಡಲಿ, ನಾನು ಯಾರನ್ನೂ ಟೀಕಿಸುವುದಿಲ್ಲ, ಒಳ್ಳೆಯ ಕೆಲಸದ ಮೂಲಕ ಉತ್ತರ ನೀಡುವೆ ಎಂದರು.
ಬ್ಯಾಂಕ್ ನಿರ್ದೇಶಕ ನಾಗನಾಳ ಸೋಮಣ್ಣ ಮಾತನಾಡಿ, ಬ್ಯಾಂಕ್ ನೀಡುವ ಸಾಲ ಸದ್ಬಳಕೆ ಮಾಡಿಕೊಳ್ಳಿ, ಆರ್ಥಿಕ ಚಟುವಟಿಕೆಗಳಿಗೆ ಬಳಸಿಕೊಳ್ಳಿ. ಸಾಲ ಪಡೆಯುವ ಜತೆಗೆ ಡಿಸಿಸಿ ಬ್ಯಾಂಕಿನಲ್ಲೇ ನಿಮ್ಮ ಉಳಿತಾಯದ ಹಣ ಇಟ್ಟು ಬ್ಯಾಂಕ್ ಬೆಳೆಸಿ, ಮತ್ತಷ್ಟು ಮಂದಿಗೆ ಸಾಲ ಸೌಲಭ್ಯ ಸಿಗುವಂತಾಗಲು ಸಹಕರಿಸಿ ಎಂದರು.
ಬ್ಯಾಂಕ್ ನಿರ್ದೇಶಕ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ, ಡಿಸಿಸಿ ಬ್ಯಾಂಕ್ ವಿರುದ್ಧ ಟೀಕೆ ಮಾಡುವವರು ಬ್ಯಾಂಕಿನ ಹಿಂದಿನ ಪರಿಸ್ಥಿತಿ ಅರಿಯುವುದು ಒಳ್ಳೆಯದು, ಬ್ಯಾಂಕ್ ವಿರುದ್ಧ ಟೀಕಿಸುವವರು ಬಡವರಿಗೆ ಯಾವ ರೀತಿಯಲ್ಲಿ ಸಹಾಯವಾಗಬೇಕೆಂದು ಸಲಹೆ ನೀಡಿದಲ್ಲಿ ಎರಡೂ ಜಿಲ್ಲೆ ಅಭಿವೃದ್ಧಿಗೆ ಅನುಕೂಲವಾಗುತ್ತದೆ ಎಂದರು.
ನಿರ್ದೇಶಕರಾದ ಕೆ.ವಿ.ದಯಾನಂದ್, ಯಲವಾರ ಸೊಣ್ಣೇಗೌಡ, ಮುಖಂಡರಾದ ಬೆಳಗಾನಹಳ್ಳಿ ಮುನಿವೆಂಕಟಪ್ಪ, ಕೆಂಬೋಡಿ ನಾರಾಯಣಗೌಡ, ಬ್ಯಾಂಕ್ ವ್ಯವಸ್ಥಾಪಕ ಅಂಬರೀಷ್ ಉಪಸ್ಥಿತರಿದ್ದರು.