

ತುಮಕೂರು : ಡಾ.ಗುಬ್ಬಿ ವೀರಣ್ಣ ರಂಗಮಂದಿರ ಸಮೀಪದಲ್ಲಿರುವ ಮಾರಿಯಮ್ಮ ನಗರ ಕೊಳೆಗೇರಿಯಲ್ಲಿ ಸರ್ಕಾರ ನಿರ್ಮಿಸಿರುವ ವಸತಿ ಸಂಕೀರ್ಣವು ಉದ್ಘಾಟನೆಯಾಗಿದ್ದು, ಜನರು ಶುಕ್ರವಾರ ಗೃಹಪ್ರವೇಶ ಮಾಡಿದರು.. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಐಎಎಸ್ ಅಧಿಕಾರಿ ಕೆ.ಪಿ.ಮೋಹನ್‌ರಾಜ್ ಮಾತನಾಡಿ, ಜನರ ನಿರಂತರ ಹೋರಾಟ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಹಕಾರದಿಂದ ನಾನು ಜಿಲ್ಲಾಧಿಕಾರಿಯಾಗಿದ್ದ ಅವಧಿಯಲ್ಲಿ ವಸತಿ ಸಂಕಿರ್ಣ ನಿರ್ಮಾಣಕ್ಕೆ ಅವಕಾಶವಾಯಿತು ಎಂದರು.
ಏಷ್ಯಾದಲ್ಲೇ ದೊಡ್ಡ ಫುಡ್‌ಪಾರ್ಕ್, ಗುಬ್ಬಿಯ ಹತ್ತಿರ ಹೆಚ್‌ಎಎಲ್ ಘಟಕ ನಿರ್ಮಾಣ ಪಾವಗಡದಲ್ಲಿ ಸೋಲಾರ್ ಪಾರ್ಕ್ ತುಮಕೂರು-ದಾವಣಗೆರೆ ರೈಲ್ವೆ ಮಾರ್ಗಕ್ಕೆ ಭೂ ಸ್ವಾಧೀನ ಮಾಡುವುದರೊಂದಿಗೆ ಜಿಲ್ಲೆಯ ಅಭಿವೃದ್ಧಿಗೆ ಪೂರಕ ಕೆಲಸಗಳನ್ನು ಮಾಡಲಾಯಿತು ಎಂದು ಸ್ಮರಿಸಿದರು.
ಅಲೆಮಾರಿ, ಅರೆಅಲೆಮಾರಿ, ತಳಸಮುದಾಯದ 250ಕ್ಕೂ ಹೆಚ್ಚು ಎಕರೆ ಭೂಮಿ ನೀಡಲಾಯಿತು. ಎಲ್ಲರಿಗೂ ಆಧಾರ್, ರೇಷನ್ ಕಾರ್ಡ್‌ಗಳನ್ನು ದೊರಕಿಸಿಕೊಡಲಾಯಿತು. ಇನ್ನು ಕೊಳಚೆ ಪ್ರದೇಶಗಳ ವಿಚಾರದಲ್ಲಿ ದಿಬ್ಬೂರಿನ 1200 ಮನೆಗಳ ಹಂಚಿಕೆಗೆ ಚಾಲನೆ ನೀಡಲಾಯಿತು ಎಂದರು.
ಮಾರಿಯಮ್ಮ ನಗರ ಪುನರ್ ವಸತಿ ಕಾನೂನಿನ ಸಹಕಾರದೊಂದಿಗೆ ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಪುನರ್‌ವಸತಿ ಕಲ್ಪಿಸಲು ಸಾಧ್ಯವಾಯಿತು. ಹಾಗಾಗಿ, ಇಲ್ಲಿನ ಜನರ ನಿರಂತರ ಚಳವಳಿಯಿಂದ ಮಾರಿಯಮ್ಮ ನಗರ ಮುಖ್ಯವಾಹಿನಿಗೆ ಬರಲು ಸಾಧ್ಯವಾಗಿದೆ ಎಂದರು. ತುಮಕೂರು ಕೊಳೆಗೇರಿ ಸಮಿತಿ ನಿರಂತರ ಹೋರಾಟದಿಂದ ಸ್ಲಂಜನರ ಹಲವಾರು ಸಮಸ್ಯೆಗಳನ್ನು ಖುದ್ದು ಕೊಳಚೆ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿ ಪರಿಹಾರ ದೊರಕಿಸಲಾಯಿತು ಎಂದರು.
ಪ್ರಾಮಾಣಿಕತೆಯಿಂದ ಸಂಘಟನೆ ನಮ್ಮ ಗಮನ ಸೆಳೆದಿದಕ್ಕೆ ಜನರಿಗೆ ಭೂಮಿ ವಸತಿ ಮತ್ತು ಸರ್ಕಾರಿ ಸೌಲಭ್ಯ ದೊರಕಿಸಿಕೊಡಲು ಸಾಧ್ಯವಾಯಿತು, ಈ ಪ್ರಯತ್ನದಲ್ಲಿ ಮಾರಿಯಮ್ಮ ನಗರ ಯುವಕರ ಸಂಘ ಹಾಗೂ ಹಿರಿಯರ ತ್ಯಾಗ ಮುಂದಿನ ಯುವ ಪೀಳಿಗೆಗೆ ಅನುಕೂಲ ಕಲ್ಪಿಸಿದೆ ನಗರದ ಮಧ್ಯೆದಲ್ಲಿರುವ ಈ ಪ್ರದೇಶವನ್ನು ಸ್ವಚ್ಛತೆಯಿಂದ ಕಾಪಾಡಿಕೊಳ್ಳುವ ಜತೆಗೆ ನಿರ್ವಹಣೆ ಮಾಡಬೇಕು ಎಂದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ಮಾರಿಯಮ್ಮ ನಗರ ಸ್ಮಾರ್ಟ್‌ಸಿಟಿಯಲ್ಲಿ ಅಭಿವೃದ್ಧಿ ಹೊಂದಲು ಕೆ.ಪಿ.ಮೋಹನ್‌ರಾಜ್ ಕಾರಣಕರ್ತರು. ಇದಕ್ಕೆ ಸಂಘಟನೆಯ ನಿರಂತರ ಒತ್ತಡವಿದೆ ಎಂದರು. ನಗರಪಾಲಿಕೆ ಮಾಜಿ ಸದಸ್ಯ ಎಂ.ಪಿ ಮಹೇಶ್, ಕಾರ್ಮಿಕ ಮುಖಂಡ ಸೈಯದ್ ಮುಜೀಬ್, ಪಾಲಿಕೆ ಆಯುಕ್ತೆ ರೇಣುಕಾ, ಸ್ಮಾರ್ಟ್‌ಸಿಟಿ ಎಂಡಿ ರಂಗಸ್ವಾಮಿ, ಪಾಲಿಕೆ ಸದಸ್ಯರಾದ ಲಕ್ಷ್ಮೀನರಸಿಂಹರಾಜು. ಮಂಜುನಾಥ್, ನಿವೃತ್ತ ಡಿಡಿಪಿಐ ಕೆ.ದೊರೈರಾಜ್ ಇದ್ದರು.
ಕುರಿಪಾಳ್ಯದಲ್ಲಿಯೂ ವಸತಿ ಸಂಕಿರ್ಣ ನಿರ್ಮಿಸಲು ಅಲ್ಲಿನ ಜನರ ಒಪ್ಪಿಗೆಗಾಗಿ ಕಾಯುತ್ತಿದ್ದೇವೆ, ಮಾರಿಯಮ್ಮ ನಗರದಲ್ಲಿ ಶುದ್ಧ ನೀರಿನ ಘಟಕ, ಮೂಲದೇವಾಲಯದ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಜಿ.ಬಿ.ಜ್ಯೋತಿಗಣೇಶ್ ಶಾಸಕ