ಕೊಳಚೆ ನೀರಿನಿಂದ ಬೇಸತ್ತ ದಂಪತಿ: ಹೈಡ್ರಾಲಿಕ್ ತಂತ್ರಜ್ಞಾನದಿಂದ ಕನಸಿನ ಮನೆ ಉಳಿಸಿಕೊಳ್ಳಲು ಪ್ರಯತ್ನ

2-cpt-2p
Published on

ಚನ್ನಪಟ್ಟಣ: ತಗ್ಗು ಪ್ರದೇಶದಲ್ಲಿ ನಿರ್ಮಾಣಗೊಂಡಿದ್ದ ಕನಸಿನ ಮನೆಯಲ್ಲಿ ವಾಸಿಸಲು ಎದುರಾಗಿದ್ದ ಸಮಸ್ಯೆ ನಿವಾರಿಸಿಕೊಳ್ಳಲು ಇದೀಗ ಮನೆಯನ್ನೇ ಎತ್ತರದಲ್ಲಿಡುವ ವಿಶಿಷ್ಟ ಪ್ರಯತ್ನಕ್ಕೆ ವಿವೇಕಾನಂದ ನಗರದ ಸುಜಾತಾ ಮತ್ತು ವೆಂಕಟೇಶ್ ದಂಪತಿ ಮುಂದಾಗಿದ್ದಾರೆ.

ರಾಂಪುರ ಗ್ರಾಮದ ದಂಪತಿ ವಿವೇಕಾನಂದ 2003ರಲ್ಲಿ ನಗರದ 2ನೇ ಅಡ್ಡರಸ್ತೆಯಲ್ಲಿ ಒಂದು ಅಂತಸ್ತಿನ ಮನೆ ಕಟ್ಟಿಕೊಂಡು ವಾಸಿಸುತ್ತಿದ್ದರು. ಆದರೆ, 2007ರಲ್ಲಿ ಕಾರ್ಯನಿಮಿತ್ತ ಮಂಡ್ಯಕ್ಕೆ ಹೋಗಬೇಕಾದ ಕಾರಣ ಈ ಮನೆಯನ್ನು ಬಾಡಿಗೆಗೆ ಕೊಟ್ಟಿದ್ದರು. ಇವರು ಮನೆ ನಿರ್ಮಿಸಿದಾಗ ಈ ಬಡಾವಣೆ ಅಭಿವೃದ್ಧಿ ಹೊಂದಿರಲಿಲ್ಲ. ಬಡಾವಣೆ ನಿರ್ಮಿಸಿದವರು ಚರಂಡಿ ಹಾಗೂ ರಸ್ತೆಗೆ ಸೂಕ್ತ ಜಾಗ ಬಿಟ್ಟಿರಲಿಲ್ಲ. ಪೈಪ್ ಮೂಲಕ ಮನೆಯವರೇ ತ್ಯಾಜ್ಯ ನೀರು ಹೊರ ಹಾಕುತ್ತಿದ್ದರು. ಕ್ರಮೇಣ ಬಡಾವಣೆ ಅಭಿವೃದ್ಧಿಯಾಗಿ ರಸ್ತೆಗೆ ಡಾಂಬರು ಹಾಕಲಾಯಿತು. ಮನೆ ತಗ್ಗು ಪ್ರದೇಶದಲ್ಲಿದ್ದುದರಿಂದ ಚರಂಡಿಗೆ ಅಳವಡಿಸಿದ್ದ ಕೊಳವೆಯಲ್ಲಿ ಕೊಳಚೆ ನೀರು ನುಗ್ಗಲಾರಂಭಿಸಿತು.

2012ರಿಂದ ಇದೇ ಸಮಸ್ಯೆ ಎದುರಾಗಿ ಮನೆಗೆ ನುಗ್ಗುತ್ತಿದ್ದ ತ್ಯಾಜ್ಯ ನೀರನ್ನು ಹೊರಹಾಕುವುದು ಇವರಿಗೆ ಸವಾಲಿನ ಕೆಲಸವಾಯಿತು. ಇದರಿಂದ ಬಾಡಿಗೆದಾರರು ಮನೆ ಖಾಲಿ ಮಾಡಿದರು. ಆಗಾಗ ಮಂಡ್ಯದಿಂದ ಬಂದು ಮನೆ ಸ್ವಚ್ಛಗೊಳಿಸುವಂತಾಯಿತು. ಇದರಿಂದ ಬೇಸತ್ತ ದಂಪತಿ ಮನೆ ಮಾರಾಟಕ್ಕೆ ಮುಂದಾದರೂ ಯಾರೂ ಖರೀದಿಗೆ ಬರಲಿಲ್ಲ.

ಹತ್ತಾರು ಲಕ್ಷ ರೂ. ಖರ್ಚು ಮಾಡಿ ಕಟ್ಟಿದ ಮನೆಯಲ್ಲಿ ಅತ್ತ ವಾಸ ಮಾಡಲೂ ಆಗದೆ, ಇತ್ತ ಮಾರಾಟ ಮಾಡಲು ಆಗದೆ ಈ ಕುಟುಂಬ ಕಂಗಾಲಾಗಿತ್ತು. ಮನೆಯನ್ನು ಕೆಡವಿ ಹೊಸದಾಗಿ ಕಟ್ಟಲೂ ಶಕ್ತಿ ಇರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ಮಂಡ್ಯದಲ್ಲಿ ಇತ್ತೀಚೆಗೆ ಹೆದ್ದಾರಿಗೆ ತೆರವಾಗುತ್ತಿದ್ದ ಮನೆಯನ್ನು ತಂತ್ರಜ್ಞಾನದ ಮೂಲಕ ಸ್ಥಳಾಂತರಿಸಿದ ವಿಷಯವನ್ನು ಪತ್ರಿಕೆಗಳಲ್ಲಿ ಓದಿ ತಿಳಿದುಕೊಂಡ ವೆಂಕಟೇಶ್, ಈ ತಂತ್ರಜ್ಞಾನದಿಂದ ಮನೆ ಉಳಿಸಿಕೊಳ್ಳಲು ನಿರ್ಧರಿಸಿ ಹರಿಯಾಣ ಮೂಲದ ಖಾಸಗಿ ಸಂಸ್ಥೆಗೆ ಗುತ್ತಿಗೆ ನೀಡಿದರು. 3.50 ಲಕ್ಷ ರೂ.ಗಳಿಗೆ ಗುತ್ತಿಗೆ ಪಡೆದಿರುವ ಕಂಪನಿ, ಮನೆಯ ತಳಪಾಯ ಮತ್ತು ಗೋಡೆಗಳಿಗೆ ಯಾವುದೇ ಹಾನಿಯಾದರೂ ನಮ್ಮ ಜವಾಬ್ದಾರಿ ಎಂದು ಕರಾರು ಪತ್ರದಲ್ಲಿ ಸ್ಪಷ್ಟಪಡಿಸಿದೆ.

ಕಳೆದ ಫೆ.4ರಿಂದ ಮನೆ ಎತ್ತರಿಸುವ ಕಾರ್ಯ ಆರಂಭಗೊಂಡಿದ್ದು, ಈಗಾಗಲೇ 1 ಅಡಿ ಎತ್ತಲಾಗಿದೆ. ಇನ್ನೂ 2 ಅಡಿ ಎತ್ತರಿಸಲು 45 ದಿನ ಕಾಲಾವಕಾಶ ಕೇಳಿದೆ. ಮನೆ ಎತ್ತರಗೊಂಡ ಬಳಿಕ ತಳಪಾಯ ಹಾಗೂ ಒಳಾಂಗಣ ಕಾಮಗಾರಿಗಳಿಗೆ ಸುಮಾರು 7 ಲಕ್ಷ ರೂ. ಆಗಬಹುದು ಎಂದು ಅಂದಾಜಿಸಲಾಗಿದೆ. ಒಟ್ಟಾರೆ ಕೈಜಾರಿದ ಕನಸಿನ ಮನೆಯನ್ನು ಹೈಡ್ರಾಲಿಕ್ ತಂತ್ರಜ್ಞಾನದಿಂದ ಉಳಿಸಿಕೊಳ್ಳಲು ದಂಪತಿ ಮುಂದಾಗಿದ್ದಾರೆ. ಇವರ ಈ ಪ್ರಯತ್ನ ತಾಲೂಕಿನ ಮಟ್ಟಿಗೆ ಹೊಸದಾಗಿದ್ದು, ಜನತೆ ಕುತೂಹಲದಿಂದ ಮನೆ ಎತ್ತರಿಸುವ ಕಾರ್ಯ ನೋಡುತ್ತಿದ್ದಾರೆ.

ನಮ್ಮ ತಂದೆ ಕಷ್ಟಪಟ್ಟು ಕಟ್ಟಿದ ಮನೆ ವಾಸಿಸಲು ಆಗದಂತಾಗಿತ್ತು. ಅಕ್ಕಪಕ್ಕದವರಿಗೂ ವಾಸನೆಯಿಂದಾಗಿ ಕಿರಿಕಿರಿ ಆಗುತ್ತಿತ್ತು. ಮನೆ ಒಡೆದು ಹೊಸದಾಗಿ ಕಟ್ಟುವುದು ಸಾಧ್ಯವಿರಲಿಲ್ಲ. ಇದೀಗ ಈ ತಂತ್ರಜ್ಞಾನ ಬಳಸಿ ಮನೆ ಉಳಿಸಿಕೊಳ್ಳುತ್ತಿದ್ದೇವೆ. -ಕಿರಣ್ ವೆಂಕಟೇಶ್, ಸುಜಾತ ದಂಪತಿ ಪುತ್ರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net