

ಪುತ್ತೂರು/ಈಶ್ವರಮಂಗಲ: ಮಾರ್ಚ್‌ನಲ್ಲಿ ಆರಂಭವಾಗಿ ಮೇ ತಿಂಗಳ 24ರ ಪತ್ತನಾಜೆವರೆಗೆ ತುಳುನಾಡಿನ ಗ್ರಾಮೀಣ ಭಾಗದ ಮನೆಗಳಲ್ಲಿ, ನಂಬಿದ ದೈವಗಳಿಗೆ ತಂಬಿಲ, ಕೋಲ ನೀಡುವ ಸಂಪ್ರದಾಯವಿದೆ. ಪವಿತ್ರ ಹಾಗೂ ಶ್ರೇಷ್ಠ ಆಚರಣೆ ಕೋಲ-ತಂಬಿಲಗಳಿಗೆ ಈ ಬಾರಿ ಕರೊನಾ ಕಂಟಕ ಎದುರಾಗಿದೆ.
ಲಾಕ್‌ಡೌನ್ ಕಾರಣಕ್ಕೆ ದೈವಗಳ ವಾರ್ಷಿಕ ತಂಬಿಲ ನಡೆಯುತ್ತಿಲ್ಲ. ಜನರು ಸೇರದೆ ಈ ಕುಟುಂಬ ದೈವಗಳಿಗೆ ತಂಬಿಲವಾಗಲೀ, ನೇಮೋತ್ಸವಗಳಾಗಲೀ, ದೊಂಪದ ಬಳಿ ನೇಮೋತ್ಸವ ಮತ್ತಿತರ ದೈವಾರಾಧನೆ ಕಾರ್ಯಕ್ರಮ ಸಂಪೂರ್ಣ ಸ್ಥಗಿತಗೊಂಡಿವೆ. ಹಾಗಾಗಿ ತಂಬಿಲ, ಕೋಲಗಳನ್ನು ಮುಂದಿನ ವರ್ಷ ನಡೆಸುವ ಬಗ್ಗೆ ಕುಟುಂಬದ ಹಿರಿಯ ಸದಸ್ಯ ಅಥವಾ ಗುರಿಕಾರ ದೈವದ ಚಾವಡಿ, ಕಟ್ಟೆ ಬಳಿ ಪ್ರಾರ್ಥಿಸಿ ‘ಈಡ್’ ತೆಗೆದಿರುವ ಪರಿಲಕ್ಪನೆಯೂ ತುಳುನಾಡಿನಲ್ಲಿ ಜಾರಿಯಲ್ಲಿದೆ. ಹೀಗಾಗಿ ಕೆಲವು ಮನೆತನದ ಹಿರಿಯರು ಅನಿವಾರ್ಯವಾಗಿ ಈ ಬಾರಿ ಈಡ್ ತೆಗೆದಿಟ್ಟು, ಮುಂದಿನ ವರ್ಷಕ್ಕೆ ತಂಬಿಲ-ಕೋಲ ನಡೆಸಲು ನಿರ್ಧರಿಸಿದ್ದಾರೆ.
ತಂಬಿಲ ನೀಡದಿದ್ದರೆ ದೈವಕೋಪ
ಗ್ರಾಮೀಣ ಭಾಗದ ಹಳ್ಳಿಯ ಮೂಲೆ ಮೂಲೆಗಳಲ್ಲೂ ದೈವಾರಾಧನೆಗೆ ಮಹತ್ವ. ವರ್ಷಕ್ಕೊಮ್ಮೆ ದೈವಗಳಿಗೆ ತಂಬಿಲ ನೀಡದಿದ್ದರೆ ನಮ್ಮನ್ನರಸಿ ರಕ್ಷಿಸುವ ದೈವಗಳು ಕೋಪಗೊಳ್ಳುತ್ತವೆ ಎಂಬ ಭಯ ತುಳುವರದ್ದು. ತಮ್ಮ ಅಕ್ಕ ಪಕ್ಕದ ಮನೆಮಂದಿಯನ್ನು ಕರೆದು ದೈವಗಳಿಗೆ ತಂಬಿಲ ನೀಡುವ ಜತೆಗೆ ಅನ್ನದಾನ ಮಾಡುವ ಕ್ರಮವೂ ಹಳ್ಳಿಯಲ್ಲಿ ನಡೆದುಕೊಂಡು ಬರುತ್ತಿತ್ತು. ದೇವಸ್ಥಾನಗಳಲ್ಲೂ ವಾರ್ಷಿಕ ಜಾತ್ರೆ ನಡೆದು ದೈವಗಳಿಗೆ ನೇಮೋತ್ಸವ ನಡೆಸಲಾಗುತ್ತದೆ. ಅಳಿಯಕಟ್ಟು ಪ್ರಧಾನವಾಗಿರುವ ತುಳುನಾಡಿನ ಕುಟುಂಬಕ್ಕೆ ಸೇರಿದ 10ರಿಂದ 20 ಮನೆಗಳ ಮಂದಿ ಸೇರಿಕೊಂಡು ಕುಟುಂಬ ದೈವಗಳಿಗೆ ತಂಬಿಲ, ನೇಮ ಸೇವೆ ನೀಡುವುದು ರೂಢಿ. ಆದರೆ ಲಾಕ್‌ಡೌನ್ ಹಿನ್ನೆಲೆಯಲ್ಲಿ ಈ ಬಾರಿ ಇದೆಲ್ಲದಕ್ಕೂ ತಿಲಾಂಜಲಿ ನೀಡಲಾಗಿದೆ.
ಕುಟುಂಬ ದೈವಗಳು
ತುಳುನಾಡಿನ ಜನತೆಯಲ್ಲಿ ಬರಿ(ಗೋತ್ರ) ಆಧಾರದಲ್ಲಿ ಕುಟುಂಬ ವ್ಯವಸ್ಥೆಗಳು ನಡೆಯುತ್ತವೆ. ತುಳು ನಾಡಿನ ಗೌಡ ಸಮುದಾಯದಲ್ಲಿ 18 ಗೋತ್ರಗಳಿವೆ. ಇದರಲ್ಲಿ ಬಂಗೇರ್, ಪೆರ್ಬನ್ನ, ಗುಂಡಣ್ಣ, ಬಳಸನ್ನ, ನಂದರ್, ಚಿತ್ರಾನ್ನ, ನಾಯೆರ್ ಪ್ರಮುಖ ಬರಿಗಳಾಗಿವೆ. ಒಂದೇ ಬರಿಗೆ ಸೇರಿದ ಮನೆಗಳು ಒಂದು ಕುಟುಂಬ ಎಂಬ ಕಲ್ಪನೆ ಈ ಜನರಲ್ಲಿದೆ. ಗೌಡ ಸಮುದಾಯವಲ್ಲದೆ ಬಿಲ್ಲವ, ಬಂಟ್ಸ್ , ಕ್ಷತ್ರೀಯ, ಬ್ರಾಹ್ಮಣ ಜನಾಂಗದಲ್ಲೂ ಇಂಥದ್ದೇ ಗೋತ್ರಗಳಿವೆ. ಈ ರೀತಿಯಲ್ಲಿ ಹಲವು ಮನೆಗಳು ಒಂದಾಗಿ ಈ ‘ಕುಟುಂಬದೈವ’ ಗಳನ್ನು ಆರಾಧನೆ ಮಾಡುತ್ತವೆ. ಕೊರೊನಾದಿಂದ ಮನೆಗಳಲ್ಲೂ ಜನರ ಗುಂಪು ಸೇರುವ ಹಾಗಿಲ್ಲ. ಬೇರೆ ಊರುಗಳಲ್ಲಿರುವ ಈ ಕುಟುಂಬಗಳ ಮನೆ ಮಂದಿ ಬರಲು ನಿರ್ಬಂಧ ಹಾಕಲಾಗಿದೆ.
ಕರೊನಾ ತುಳುನಾಡಿನ ಜನತೆಯ ನಂಬಿಕೆ ದೈವಗಳ ಆಚರಣೆಗೆ ಕಂಟಕ ತಂದಿದೆ. ಕೋಲ ತಂಬಿಲ ನಡೆಸಲು ಸಾಧ್ಯವಾಗದಿದ್ದರೆ ಕುಟುಂಬದ ಗುರಿಕಾರ ದೈವಗಳಲ್ಲಿ ಪ್ರಾರ್ಥಿಸಿ ಮುಂದಿನ ಬಾರಿ ಕೋಲ-ತಂಬಿಲ ನಡೆಸುವ ವಾಗ್ದಾನ ನೀಡುವ ಈಡ್ ತೆಗೆದಿರುವ ಪರಿಲಕ್ಪನೆಯೂ ದೈವರಾಧನೆಯಲ್ಲಿದೆ.
ಡಾ.ಧನಜಂಯ ಕುಂಬ್ಳೆ, ಸಹಾಯಕ ಪ್ರಾಧ್ಯಾಪಕ,
ತುಳು-ಕನ್ನಡ ಭಾಷಾ ವಿದ್ವಾಂಸಕರು, ಮಂಗಳೂರು ವಿವಿ
ಕುಟುಂಬ ದೈವಗಳಿಗೆ ಈ ಬಾರಿ ತಂಬಿಲ ಸೇವೆ ಹೇಗೆ ಮಾಡುವುದೆಂದು ತಿಳಿಯುತ್ತಿಲ್ಲ. ದೂರದಲ್ಲಿರುವ ಕುಟುಂಬಸ್ಥರನ್ನು ಕರೆಸಿಕೊಂಡು ದೈವಗಳಿಗೆ ತಂಬಿಲ ಸೇವೆ ನೀಡುವ ಹಾಗೆಯೂ ಇಲ್ಲ. ವ್ಯಾಪಕವಾಗಿ ಕರೊನಾ ಸೋಂಕು ಹರಡಿರುವ ಇಂತಹ ಸಂದರ್ಭ ದಲ್ಲಿ ಎಲ್ಲರನ್ನೂ ಬರಮಾಡಿಕೊಂಡು ದೈವಗಳ ಆರಾಧನೆ ಮಾಡುವುದು ಅಪಾಯಕಾರಿಯಾಗಬಹುದು.
-ರವಿರಾಜ್ ರೈ, ಸಜಂಕಾಡಿ ನಿವಾಸಿ
ಮಾರ್ಚ್ 22ರ ಬಳಿಕ ಎಲ್ಲಿಯೂ ದೈವದ ನೇಮೋತ್ಸವಗಳು ನಡೆದಿಲ್ಲ. ಎಲ್ಲ ಕಡೆಗಳಲ್ಲಿ ದಿನ ನಿಗದಿಗೊಂಡಿದ್ದ ದೈವಗಳ ನೇಮೋತ್ಸವ ಕಾರ್ಯಕ್ರಮಗಳು ರದ್ದುಗೊಂಡಿದೆ. ಮೇ4 ಕ್ಕೆ ಲಾಕ್‌ಡೌನ್ ಮುಕ್ತಾಯಗೊಂಡರೂ, ಈ ಬಾರಿ ದೈವದ ಕೋಲಗಳನ್ನು ನಡೆಸಲು ಅವಕಾಶ ಸಿಗುವುದು ಕಷ್ಟ. ಮೇ 24ರ ಬಳಿಕ ದೈವಗಳಿಗೆ ನೇಮೋತ್ಸವ ನಡೆಸುವ ಪದ್ಧತಿ ಇಲ್ಲ. ಹಾಗಾಗಿ ಈ ಬಾರಿ ನಮ್ಮ ದೈವನರ್ತಕ ಸಮುದಾಯಕ್ಕೆ ಆರ್ಥಿಕ ಹೊಡೆತ ಬಿದ್ದಿದೆ. ಆದಾಯ ಇಲ್ಲದೆ ಆರ್ಥಿಕ ಸಂಕಷ್ಟಕ್ಕೊಳಗಾಗಿದ್ದೇವೆ. ಸಂಬಂಧಪಟ್ಟ ಇಲಾಖೆಗಳಿಗೆ ಮನವಿ ಮಾಡಿಕೊಂಡು ಏನಾದರೂ ಪರಿಹಾರ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದೇವೆ.
ಮೋಹನ ಮಾಡಾವು, ಉಪಾಧ್ಯಕ್ಷ, ಪುತ್ತೂರು ತಾಲೂಕು ದೈವಾರಾಧಕರ ಸಂಘ