

ಉಪ್ಪಿನಂಗಡಿ: ಕೌಕ್ರಾಡಿ ಗ್ರಾಮದ ಸೌತಡ್ಕ ಎಂಬಲ್ಲಿ ಒಂಬತ್ತು ದರೋಡೆಕೋರರು ವಿಶ್ವ ಹಿಂದು ಪರಿಷತ್ ಮುಂದಾಳು ನೂಜೆ ತುಕ್ರಪ್ಪ ಶೆಟ್ಟಿ ಅವರ ಮನೆಗೆ ನುಗ್ಗಿ ಕಟ್ಟಿ ಹಾಕಿ, ಪತ್ನಿಗೆ ಚೂರಿಯಿಂದ ಇರಿದು ನಗ ನಗದನ್ನು ದೋಚಿದ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ಸಾಗಿದ್ದು, ಇದುವರೆಗೆ ಮಹತ್ವದ ಸುಳಿವು ಲಭಿಸಿಲ್ಲ.
ದರೋಡೆಕೋರರು ಬಳಸಿದ ಭಾಷೆ ಗಮನಿಸಿದಾಗ ಬಯಲು ಸೀಮೆಯವರು ಇರಬಹುದು ಎಂಬ ಶಂಕೆ ಮೂಡಿದೆ. ತಾಯಿಗೆ ದರೋಡೆಕೋರರು ಇರಿಯುತ್ತಿದ್ದಾಗ 8ರ ಹರೆಯದ ಪುತ್ರಿ ಮನೆ ಹಿಂಬದಿ ರಬ್ಬರ್ ಟ್ಯಾಪಿಂಗ್ ಮಾಡುವ ಕುಟುಂಬದ ಮಹಿಳೆಯನ್ನು ರಕ್ಷಣೆಗಾಗಿ ಕೂಗಿ ಕರೆದಿದ್ದಳು. ಆಗ ದರೋಡೆಕೋರರಲ್ಲಿ ಒಬ್ಬಾತ ‘ಬೊಬ್ಬೆ ಪಾಡ್‌ಂಡಾ ನಿನನು ಸೈಪಬೆ..’ ಎಂದು ತುಳುವಿನಲ್ಲಿ ಹೇಳಿರುವುದಾಗಿ ಬಾಲಕಿ ತಿಳಿಸಿದ್ದಾಳೆ.
ಸಾಮಾನ್ಯವಾಗಿ ದ.ಕ ಜಿಲ್ಲೆಯ ತುಳುವರು ಕೆರ್ಪೆ (ಸಾಯಿಸುತ್ತೇನೆ) ಎಂಬ ಪದವನ್ನು ಬಳಸುತ್ತಾರೆ. ಸೈಪಬೆ ಎನ್ನುವ ಪದ ಬಯಲು ಸೀಮೆಯ ಕನ್ನಡ ಭಾಷಿಗರು ತುಳು ಭಾಷೆಯಲ್ಲಿ ಮಾತನಾಡುವಾಗ ಕೇಳುವಂಥದ್ದು. ಮಾತ್ರವಲ್ಲ, ದರೋಡೆಕೋರರ ಇತರ ಮಾತುಗಳೂ ಬಯಲು ಸೀಮೆಯ ಕನ್ನಡ ಶೈಲಿಯಲ್ಲಿತ್ತು ಎಂಬ ಮಾಹಿತಿ ಲಭಿಸಿದೆ.
ಗೀತಾ ಶೆಟ್ಟಿಗೆ ಚೂರಿಯಿಂದ ತಿವಿದ ದರೋಡೆಕೋರ ಹೊರಡುವ ಮುನ್ನ ಅವರಿಗೆ ಕುಡಿಯಲು ನೀರು ಕೊಟ್ಟು, ಪಾದಮುಟ್ಟಿ ನಮಸ್ಕರಿಸಿ, ನಾವು ಹೋದ ಕೂಡಲೆ ಆಂಬುಲೆನ್ಸ್ ತರಿಸಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಿರಿ ಎಂದು ಹೇಳಿದ್ದಾನೆ ಎನ್ನಲಾಗಿದೆ.
ಮುಖಕ್ಕೆ ಬಟ್ಟೆ ಸುತ್ತಿಕೊಂಡು ಬಂದಿದ್ದ ದರೋಡೆಕೋರರ ಮುಖ ನೋಡುವುದು ಸಾಧ್ಯವಾಗಿಲ್ಲ. ಆದರೆ ದೈಹಿಕವಾಗಿ ಗಮನಿಸಿದಾಗ 25ರಿಂದ 30 ವರ್ಷದವರು ಎಂದು ಅಂದಾಜಿಸಲಾಗಿದೆ. ತುಕ್ರಪ್ಪ ಶೆಟ್ರ ಮಗುವನ್ನು ದರೋಡೆಕೋರನೊಬ್ಬ ಎತ್ತಿಕೊಳ್ಳಲು ಹೋದಾಗ ಮುಖದ ಬಟ್ಟೆ ಕೆಳಕ್ಕೆ ಜಾರಿದ್ದು, ಬಾವು ಎದ್ದಿರುವುದು ಕಾಣಿಸಿದೆ.
ಕೋವಿ ಠಾಣೆಯಲ್ಲಿ!:ತುಕ್ರಪ್ಪ ಶೆಟ್ಟರಲ್ಲಿ ಕೋವಿ ಇತ್ತು. ಆದರೆ ಗ್ರಾಪಂ ಚುನಾವಣೆ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಯಲ್ಲಿ ಇರಿಸಿದ್ದರು. ನಾಯಿ ಬೊಗಳಿದಾಗ ಬರಿಗೈಯಲ್ಲಿ ಹೊರಗೆ ಬಂದಿದ್ದರು. ಚುನಾವಣೆಯ ನಿಯಮದ ಲಾಭ ದರೋಡೆಕೋರರಿಗೆ ಆಗಿದೆಯೇ ಎಂಬ ಶಂಕೆಯೂ ಮೂಡಿದೆ.