

ಅಂಕೋಲಾ: ತಾಲೂಕಿನ ಹಿಂದುಳಿದ ಗ್ರಾಮವಾದ ಬೆಳಂಬಾರದ ಯುವತಿಯೊಬ್ಬಳು ಸತತ ಅಧ್ಯಯನದ ಫಲದ ಶ್ರಮದ ಮೂಲಕ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಲ್ಲಿ (ಇಸ್ರೋ) ಸಹಾಯಕಿಯಾಗಿ ನೇಮಕಗೊಂಡಿದ್ದಾಳೆ.
ಬೆಳಂಬಾರ ಗ್ರಾಮದ ಹಂದಗೋಡದ ಕೋಕಿಲ ಗೋಪಾಲ ಗೌಡ ಈಕೆಯು ಇಸ್ರೋದವರು ನಡೆಸಿದ ನೇಮಕಾತಿ ಪರೀಕ್ಷೆ ಎದುರಿಸಿ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿ ಸಹಾಯಕಿ ಹುದ್ದೆಗೆ ಆಯ್ಕೆಯಾಗಿದ್ದಾಳೆ.
ತಮ್ಮ ಪ್ರಾಥಮಿಕ, ಪ್ರೌಢ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿ ಓದಿದ ಕೋಕಿಲ, ಪಟ್ಟಣದ ಜಿ.ಸಿ. ಕಾಲೇಜ್ನಲ್ಲಿ ವಿಜ್ಞಾನ ವಿಭಾಗದಲ್ಲಿ ಅತ್ಯುತ್ತಮ ಅಂಕ ಗಳಿಸುವ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಯನ್ನು ಯಶಸ್ವಿಯಾಗಿ ಮುಗಿಸಿದ್ದಳು. ಪದವಿ ಮುಗಿಯುತ್ತಿದ್ದಂತೆ ಇಸ್ರೋ ನೇಮಕಾತಿಗೆ ನಡೆದ ಮೊದಲ ಹಂತದ ಪರೀಕ್ಷೆ ಮತ್ತು ಕೌಶಲ ಪರೀಕ್ಷೆಯನ್ನು ಯಶಸ್ವಿಯಾಗಿ ಎದುರಿಸಿ ತೇರ್ಗಡೆಯೊಂದಿಗೆ ಇಸ್ರೋ ಬೆಂಗಳೂರು ವಲಯದಲ್ಲಿ ಸಹಾಯಕಿ ಹುದ್ದೆಗೆ ನೇಮಕಗೊಂಡಿದ್ದಾಳೆ. ಕೃಷಿ ಕುಟುಂಬ ಹಿನ್ನೆಲೆಯಿಂದ ಬಂದಿರುವ ಈಕೆಯ ಪಾಲಕರು ಕೃಷಿಯನ್ನೇ ನಂಬಿ ಜೀವನ ನಡೆಸುತ್ತಿದ್ದಾರೆ. ಕಡುಬಡತನದಲ್ಲಿಯೂ ಕೂಡ ಛಲ ಬಿಡದ ಕೋಕಿಲ ಗೌಡ ಅವರ ಈ ಸಾಧನೆಗೆ ತಾಲೂಕಿನೆಲ್ಲೆಡೆ ಹರ್ಷ ವ್ಯಕ್ತವಾಗಿದೆ.
ಬಾಹ್ಯಾಕಾಶ ಸಂಶೋಧನೆಯಂಥ ಮಹತ್ವಪೂರ್ಣ ಕೆಲಸ ಮಾಡುವ ಇಸ್ರೋ ಸಂಸ್ಥೆಯಲ್ಲಿ ನಮ್ಮ ಹಾಲಕ್ಕಿ ಸಮುದಾಯದ ಕೋಕಿಲ ಗೌಡ ಅವರು ಸಹಾಯಕಿಯಾಗಿ ನೇಮಕಗೊಂಡಿರುವುದು ಆಕೆಯ ಪರಿಶ್ರಮಕ್ಕೆ ಸಿಕ್ಕ ಫಲವಾಗಿದೆ. ಹಾಗೇ ನಮ್ಮ ಸಮಾಜಕ್ಕೆ ಹೆಮ್ಮೆಯ ಸಂಗತಿ ಕೂಡ ಆಗಿದೆ. | ಹನುಮಂತ ಬೊಮ್ಮು ಗೌಡ ಅಧ್ಯಕ್ಷರು, ಉಕ ಜಿಲ್ಲಾ ಹಾಲಕ್ಕಿ ಒಕ್ಕಲಿಗರ ಸಂಘ, ಅಂಕೋಲಾ