ಬರಿದಾದ ನೆತ್ತೆರ್‌ಕೆರೆ ; ನಿರ್ವಹಣೆಯಿಲ್ಲದೆ ತುಂಬಿದ ಹೂಳು

Nettar kere
Published on

ಪ್ರವೀಣ್‌ರಾಜ್   ಕಡಬ

ಬರಪೂರ ನೀರಿನ ಸೆಲೆಯಿರುವ ಕೊಯಿಲ ಜಾನುವಾರು ಸಂವರ್ಧನ ಕೇಂದ್ರದ ಜಮೀನಿನಲ್ಲಿರುವ ‘ನೆತ್ತರ್‌ಕೆರೆ’ ನಿರ್ವಹಣೆಯಿಲ್ಲದೆ ಅವಸಾನದ ಅಂಚಿಗೆ ತಲುಪಿದೆ.

ಹಿಂದೆ ಸುಮಾರು ಅರ್ಧ ಎಕರೆಯಲ್ಲಿದ್ದ ನೆತ್ತರ್‌ಕೆರೆ ವರ್ಷಪೂರ್ತಿ ಜೀವಜಲ ತುಂಬಿಕೊಂಡು ನಳನಳಿಸುತ್ತಿತ್ತು. ಪ್ರಸ್ತುತ ಕೆರೆಯಲ್ಲಿ ಹೂಳು ತುಂಬಿಕೊಂಡು ಕಿರಿದಾಗಿದ್ದು, ನೀರು ಬತ್ತಿಹೋಗಿದೆ. ಮಳೆಗಾಲದಲ್ಲಿ ನೀರು ಶೇಖರಣೆಯಾಗುತ್ತಿದ್ದ ಜಾಗವನ್ನು ಸಂವಧರ್ನ ಕೇಂದ್ರದ ವತಿಯಿಂದ 1995ರಲ್ಲಿ ಮಾನವ ಶ್ರಮದಿಂದ ಕೆರೆಯಾಗಿ ಮಾರ್ಪಡಿಸಲಾಗಿತ್ತು. ಬಳಿಕ 2010ರಲ್ಲಿ ಮರು ನಿರ್ಮಾಣಗೊಳಿಸಲಾಗಿತ್ತು. ಸಂವರ್ಧನಾ ಕೇಂದ್ರದ ದನಗಳ ಆಹಾರಕ್ಕಾಗಿ ಬೆಳೆಯುತ್ತಿದ್ದ ಹುಲ್ಲುಗಾವಲಿಗೆ ಇದರ ನೀರನ್ನು ಉಪಯೋಗಿಸಲಾಗುತ್ತಿತ್ತು. ಸದ್ಯ ಕೆರೆಯಲ್ಲಿ ಹೂಳು ತುಂಬಿಕೊಂಡು ನೀರು ಬತ್ತಿ ಹೋಗಿ ಗುಡ್ಡದಂತಾಗಿದೆ.

ಅಪಾಯಕಾರಿ ಕೆರೆ: ಉಪ್ಪಿನಂಗಡಿ ಕಡಬ- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಆತೂರು ಎಂಬಲ್ಲಿಂದ ಕೊಯಿಲ ಗ್ರಾಮದ ಆತೂರು ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ದೇವಸ್ಥಾನದ ಬಳಿ ರಸ್ತೆಯ ಮಗ್ಗುಲಲ್ಲೆ ಈ ಕೆರೆಯಿದೆ. ಕೆರೆಗೆ ಸಮರ್ಪಕ ರಕ್ಷಣಾ ಬೇಲಿಯಿಲ್ಲ. ವಾಹನ ಸವಾರರ ಗಮನಕ್ಕೆ ಬಾರದೆ ಸಂಚರಿಸಿದರೆ ಅಪಾಯ ಸಾಧ್ಯತೆ ಹೆಚ್ಚು. ಈ ರಸ್ತೆಯಲ್ಲಿ ಭಾರೀ ವಾಹನಗಳು, ಶಾಲಾ ವಿದ್ಯಾರ್ಥಿಗಳನ್ನು ಹೊತ್ತೊಯ್ಯವ ವಾಹನಗಳು ಸೇರಿದಂತೆ ನಿತ್ಯ ನೂರಾರು ವಾಹನಗಳು ಓಡಾಡುತ್ತವೆ. ಸಂವರ್ಧನಾ ಕೇಂದ್ರದ ಸಾಕೆಮ್ಮೆಗಳು ಗುಡ್ಡದಲ್ಲಿ ಹುಲ್ಲು ಮೇಯುತ್ತ ಬೇಸಿಗೆ ಕಾಲದಲ್ಲಿ ಈಜಾಡಿ ಸೆಕೆ ತಣಿಸಿಕೊಳ್ಳುತ್ತಿದ್ದವು. ಕೆರೆಗೆ ಆವರಣಗೋಡೆಯಿದ್ದರೆ ಸುರಕ್ಷಿತವಾಗುತ್ತದೆ ಎನ್ನುತ್ತಾರೆ ಸ್ಥಳೀಯರು.

ಮಳೆ ನೀರು ಕೆರೆಗೆ: ಕೆರೆಯ ಒಂದು ಭಾಗ ರಸ್ತೆ ಇದ್ದರೆ ಉಳಿದ ಭಾಗ ಎತ್ತರದ ಜಾಗ. ಹಾಗಾಗಿ ಮಳೆ ನೀರು ನೇರವಾಗಿ ಕೆರೆಯಲ್ಲಿ ಸಂಗ್ರಹವಾಗುತ್ತದೆ. ಕೆರೆಯಲ್ಲಿ ಹೆಚ್ಚಾದ ನೀರು ಪಕ್ಕದ ತೋಡಿಗೆ ಹರಿಯುತ್ತದೆ. ಮಳೆ ನೀರಿನೊಂದಿಗೆ ಬಂದ ಮಣ್ಣು ಕೆರೆಯಲ್ಲಿ ಶೇಖರಣೆಯಾಗಿ ಕೆರೆ ಕಿರಿದಾಗಿದೆ. ಹೂಳು ತೆಗೆದರೆ ಈಗಲೂ ನೀರಿದೆ. ಮಳೆಗಾಲದಲ್ಲಿ ಮಳೆನೀರು ಇಂಗಿಸಲು ಉಪಯೋಗಕಾರಿ ಎನ್ನುವುದು ಗ್ರಾಮಸ್ಥರ ಅಭಿಪ್ರಾಯ.

ಮೂರ್ತಿಗೆ ಹಾರೆ ತಾಗಿ ಕೆರೆಯಲ್ಲಿ ಹರಿದಿತ್ತು ರಕ್ತ: ಈ ಕೆರೆಗೂ ಪಕ್ಕದ ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನಕ್ಕೂ ಸಂಬಂಧವಿದೆ. ಈ ಕೆರೆ ನಿರ್ಮಾಣಕ್ಕೂ ಮುನ್ನವೇ ಇಲ್ಲಿ ಬೃಹದಾಕಾರದ ಕೆರೆಯಿತ್ತು. ಕಾಲ ನಂತರ ಮಣ್ಣಿನಿಂದ ಕೆರೆ ಮುಚ್ಚಿ ಹೋಯಿತು. ಆದರೂ ವರ್ಷಪೂರ್ತಿ ಈ ಜಾಗದಲ್ಲಿ ನೀರಿನ ತೇವವಿತ್ತು. ಹಿರಿಯರು ಕೆರೆ ನಿರ್ಮಿಸುವ ಸಂದರ್ಭ ಶಿವನ ಮೂರ್ತಿ ಸಿಕ್ಕಿತ್ತು. ಕೆರೆ ನಿರ್ಮಾಣಕ್ಕೆ ಬಳಸುವ ಹಾರೆ ಈ ಶಿವನ ಮೂರ್ತಿಗೆ ತಾಗಿ ರಕ್ತ ಚೆಲ್ಲಿತ್ತು. ಆದ್ದರಿಂದ ಈ ಕೆರೆಗೆ ನೆತ್ತೆರ್ ಕೆರೆಯೆಂದಾಯಿತು ಎನ್ನುವ ಕಥೆಯನ್ನು ಹಿರಿಯರು ಬಿಚ್ಚಿಡುತ್ತಾರೆ.

ನೆತ್ತರ್‌ಕೆರೆ ಅಭಿವೃದ್ಧಿಗೆ ಹೆಚ್ಚಿನ ಮೊತ್ತ ಬೇಕಾಗಬಹುದು. ಹೀಗಾಗಿ ಇಲಾಖೆಯಿಂದ ಅನುದಾನ ನಿರೀಕ್ಷಿಸುವಂತಿಲ್ಲ. ನರೇಗಾದಂತಹ ಯೋಜನೆಯಲ್ಲಿ ಅಭಿವೃದ್ಧಿಪಡಿಸಬಹುದು. ಈ ಬಗ್ಗೆ ಕಡಬ ತಾಲೂಕು ಕಾರ್ಯನಿರ್ವಹಣಾಧಿಕಾರಿ, ಕೊಲ ಪಂಚಾಯಿತಿ ಆಡಳಿತದೊಂದಿಗೆ ಮೌಖಿಕ ಮಾತುಕತೆ ನಡೆದಿದೆ. ಅಭಿವೃದ್ಧಿಗೆ ಇಲಾಖೆಯಿಂದ ಎಲ್ಲ ರೀತಿಯ ಸಹಕಾರ ನೀಡಲು ಬದ್ಧ. -ಡಾ.ಹೆನ್ರಿ ಆರ್.ಲಸ್ರೋದೊ ಉಪನಿರ್ದೇಶಕ,   ಪಶುಸಂಗಪಾನ ಇಲಾಖೆ ನೀರಿನ ಮೂಲವನ್ನು ಉಳಿಸಿಕೊಳ್ಳುವ ನಿಟ್ಟನಲ್ಲಿ ನೆತ್ತರ್‌ಕೆರೆಯನ್ನು ಅಭಿವೃದ್ಧಿಪಡಿಸಲು ಚಿಂತನೆ ನಡೆಸಲಾಗಿದೆ. ಈ ಬಗ್ಗೆ ಕ್ರಮಕೈಗೊಳ್ಳಲಾಗುವುದು. -ಹರ್ಷಿತ್, ಕೊಲ ಗ್ರಾಮ ಪಂಚಾಯಿತಿ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net