ತ್ಯಾಜ್ಯ ವಿಲೇವಾರಿ ಘಟಕ ಯಂತ್ರಗಳು ನಿರುಪಯುಕ್ತ

Untitled design (9)
Published on

ಸಿಂಧನೂರು: ನಗರದ ಮಲ್ಲಾಪುರ ಮಾರ್ಗದ ನಗರಸಭೆಯ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಮಾಜಿ ಸಚಿವ ಹಾಗು ಕೆಒಎಫ್ ಅಧ್ಯಕ್ಷ ವೆಂಕಟರಾವ ನಾಡಗೌಡ ಶನಿವಾರ ಭೇಟಿ ನೀಡಿ ಪರಿಶೀಲಿಸಿದರು.

ಕಸವಿಲೇವಾರಿ ಘಟಕದಲ್ಲಿ ಹತ್ತಿರುವ ಬೆಂಕಿಯಿಂದ ಉಂಟಾಗಿರುವ ಪ್ರಮಾದವು ಆತಂಕಕಾರಿ ಬೆಳವಣಿಗೆಯಾಗಿದೆ. ಸುತ್ತಮುತ್ತಲಿನ ಗ್ರಾಮ ಹಾಗು ನಗರ ಪ್ರದೇಶದಲ್ಲಿ ಕಲುಷಿತ ಬೆಂಕಿಯ ಹೊಗೆ ಆವರಿಸಿದ್ದರಿಂದ ಜನರಿಗೆ ಅನಾರೋಗ್ಯ ಉಂಟಾಗುವ ಸಾಧ್ಯತೆ ಇದೆ. ನಗರಸಭೆ ಈ ಕುರಿತು ಹೆಚ್ಚಿನ ಜಾಗೃತಿವಹಿಸಬೇಕು ಎಂದು ಕೆಒಎಫ್ ಅಧ್ಯಕ್ಷ ವೆಂಕಟರಾವ ನಾಡಗೌಡ ಹೇಳಿದರು.

ಸರಿಯಾದ ರೀತಿಯಲ್ಲಿ ಘಟಕವನ್ನು ನಿರ್ವಹಣೆ ಮಾಡಬೇಕು. ಶಾಸಕನಾಗಿದ್ದಾಗ ಕಸವಿಲೇವಾರಿಗಾಗಿ ಹೆಚ್ಚಿನ ಅನುದಾನ ನೀಡಿದ್ದೆ. ಕಸ ನಿರ್ವಹಣೆಗಾಗಿ ತಂದಿರುವ ಯಂತ್ರಗಳು ನಿರುಪಯುಕ್ತವಾಗಿವೆ. ಕಸ ಸಂಸ್ಕರಣೆಯಲ್ಲಿ ತುಂಬಾ ನಿರ್ಲಕ್ಷ್ಯ ಮಾಡಲಾಗಿದೆ. ಆರೋಗ್ಯ ವಿಷಯದಲ್ಲಿ ಜನರೊಂದಿಗೆ ಚೆಲ್ಲಾಟ ಆಡಬಾರದು. ತಳಮಟ್ಟದಿಂದ ಸಮಸ್ಯೆ ಪರಿಹಾರಕ್ಕೆ ಯೋಜನೆ ಸಿದ್ಧಪಡಿಸಬೇಕು ಎಂದರು.

ಇದೇ ಸಂದರ್ಭದಲ್ಲಿ ಮಾಜಿ ಸಚಿವರಿಗೆ ಮಲ್ಲಾಪುರ ಗ್ರಾಮಸ್ಥರು ಕಸ ವಿಲೇವಾರಿ ಘಟಕ ಸ್ಥಳಾಂತರಿಸುವಂತೆ ಒತ್ತಾಯಿಸಿ ಮನವಿ ಮಾಡಿದರು. ನಗರಸಭೆ ಸದಸ್ಯರಾದ ಡಿ.ಸತ್ಯನಾರಾಯಣ, ಚಂದ್ರುಮೈಲಾರ, ಜೆಡಿಎಸ್ ನಗರ ಘಟಕ ಅಧ್ಯಕ್ಷ ರವಿ, ಮುಖಂಡರಾದ ಅಲ್ಲಮಪ್ರಭು ಪೂಜಾರ, ಜಗದೀಶ ವಕೀಲ, ಪರಶುರಾಮ ಮಲ್ಲಾಪುರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net