ಸಂಭ್ರಮದ ಕೊಡಿಯಾಲ್ ತೇರು

car festival
Published on

ಮಂಗಳೂರು: ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ 200ನೇ ವರ್ಷದ ‘ಮಂಗಳೂರು ರಥೋತ್ಸವ’ ಸಹಸ್ರಾರು ಭಕ್ತರ ಪಾಲ್ಗೊಳ್ಳುವಿಕೆಯೊಂದಿಗೆ ಶುಕ್ರವಾರ ವಿಜೃಂಭಣೆಯಿಂದ ಜರುಗಿತು.

ಸಾಯಂಕಾಲದಿಂದಲೇ ದೇವಳದ ಚೌಕಿಯಲ್ಲಿ ಭಕ್ತರು ಕಿಕ್ಕಿರಿದು ಸೇರಿ, ಶ್ರೀ ವೀರವೆಂಕಟೇಶ ದೇವರ ಬ್ರಹ್ಮರಥೋತ್ಸ ಸಂಭ್ರಮಕ್ಕೆ ಸಾಕ್ಷಿಯಾದರು. ಶ್ರೀ ಕಾಶೀ ಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಸಂಯಮಿಂದ್ರ ತೀರ್ಥ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಮುಂಜಾನೆ ಪ್ರಾರ್ಥನೆ, ಬಳಿಕ ದೇವರಿಗೆ ಪಂಚಾಮೃತಾಭಿಷೇಕ, ಪುಳಕಾಭಿಷೇಕ, ಕನಕಾಭಿಷೇಕ, ಗಂಗಾಭಿಷೇಕ, ಪೂರ್ವಕ ಮಹಾಭಿಷೇಕ, ಶತಕಲಶಾಭಿಷೇಕಗಳು ನಡೆಯಿತು. ಮಧ್ಯಾಹ್ನ ದೇವರು ಯಜ್ಞ ಮಂಟಪಕ್ಕೆ ಚಿತ್ತೈಸಿದರು. ಸಾಯಂಕಾಲ ಯಜ್ಞಪೂರ್ಣಾಹುತಿಯಾಗಿ ಆರತಿ ಬೆಳಗಲಾಯಿತು.

ಬಳಿಕ ಸರ್ವಾಲಂಕಾರಭೂಷಿತ ಶ್ರೀ ವೀರ ವೆಂಕಟೇಶ ಹಾಗೂ ಶ್ರೀನಿವಾಸ ದೇವರನ್ನು ಪುಷ್ಪಾಲಂಕೃತ ಚಿನ್ನದ ಪಲ್ಲಕ್ಕಿಯಲ್ಲಿ ದೇವಳದಿಂದ ರಥದೆಡೆಗೆ ತಂದು, ಸಾಂಪ್ರದಾಯಿಕ ರಥ ಪ್ರದಕ್ಷಿಣೆ ನಡೆಯಿತು. ಪಲ್ಲಕ್ಕಿಯನ್ನು ಭುಜ ಸೇವೆಯಿಂದ ಏರಿಸಿ ಸಂಭ್ರಮಿಸಲಾಯಿತು. ಬ್ಯಾಂಡ್ ವಾದ್ಯಗಳ ಅಬ್ಬರ, ಮಂಗಳವಾದ್ಯಗಳ, ನಿನಾದ, ತಾಳ ಸಂಕೀರ್ತನೆ ಹಿನ್ನೆಲೆಯಲ್ಲಿ ಸೇರಿದ ಸಹಸ್ರಾರು ಭಕ್ತರ ಹರ್ಷೋದ್ಗಾರಗಳ ನಡುವೆ ದೇವರ ಬ್ರಹ್ಮರಥೋತ್ಸವ ನಡೆಯಿತು. ರಥಾರೂಢನಾದ ವೀರ ವೆಂಕಟೇಶನಿಗೆ ಮಹಾಮಂಗಳಾರತಿ ಬೆಳಗಿ ಪ್ರಾರ್ಥಿಸಲಾಯಿತು.

ದೇಶ ವಿದೇಶಗಳಿಂದ ರಥೋತ್ಸವಕ್ಕಾಗಿ ಆಗಮಿಸಿದ್ದ ಜನರು ಕೊಡಿಯಾಲ್ ತೇರಿನ ವೈಭವ ಕಣ್ತುಂಬಿಕೊಂಡರು. ರಾತ್ರಿ ನೆರೆದ ಸಹಸ್ರಾರು ಸಮಾಜ ಬಾಂಧವರಿಗೆ ಸಮಾರಾಧನೆ ನೆರವೇರಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net