

ಚನ್ನಗಿರಿ: ಸಮಾಜದಲ್ಲಿ ದಿನನಿತ್ಯ ಪ್ರತಿ ಹಂತದಲ್ಲಿ ಮೋಸ, ವಂಚನೆ ಹೆಚ್ಚಾಗುತ್ತಿರುವ ಪರಿಣಾಮ ಪಾಪ ಅಧಿಕವಾಗಿ ಜಗತ್ತು ನಾಶವಾಗಿ, ಜನರ ಅಂತ್ಯವಾಗಲಿದೆ ಎಂದು ಶ್ರೀ ಕೋಡಿಮಠ ಮಹಾಸಂಸ್ಥಾನ ಡಾ.ಶಿವಾನಂದ ಶಿವಯೋಗಿರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದರು.
ಪಟ್ಟಣದ ಹಾಲಸ್ವಾಮಿ ವಿರಕ್ತಮಠದಲ್ಲಿ ಶ್ರಾವಣ ಮಾಸದ ಒಂದು ತಿಂಗಳು ಡಾ.ಪುಟ್ಟರಾಜ ಕವಿ ವಿರಚಿತ ಗುಡ್ಡಾಪುರದ ದಾನಮ್ಮ ತಾಯಿ ವಚನಾಮೃತ ಬೋಧನೆ ಪ್ರವಚನ ಹಾಗೂ ಶಿವಲಿಂಗೇಶ್ವರ ಶ್ರೀಗಳ ಸಂಸ್ಮರಣೆ, ಹಾಲಸ್ವಾಮಿಯವರ ಸಂಸ್ಮರಣೆ, ಲಿಂ. ಶ್ರೀಕಂಠ ಶ್ರೀಗಳ 39 ನೇ ವರ್ಷದ ಸಂಸ್ಮರಣೆ, ಲಿಂ. ಜಯದೇವ ಶ್ರೀಗಳ ತೃತೀಯ ವರ್ಷದ ಸಂಸ್ಮರಣೋತ್ಸವ ಹಾಗೂ ಬಸವತತ್ವ ಸಮಾರಂಭದಲ್ಲಿ ಶುಕ್ರವಾರ ಮಾತನಾಡಿದರು.
ಸಮಾಜದಲ್ಲಿ ಧರ್ಮ ಕಾಣೆಯಾಗಿ ದ್ವೇಷ, ಅಸೂಯೆ ಹೆಚ್ಚಾಗುತ್ತಿದೆ. ನಾವು ಮಾಡಿದ ಪಾಪ ನಮ್ಮನ್ನು ಬಿಡುವುದಿಲ್ಲ. ಹಾಗಾಗಿ, ಇರುವಷ್ಟು ಸಮಯವನ್ನು ಧರ್ಮಕಾರ್ಯಗಳಿಗೆ ಬಳಸಿ ಎಂದರು.
ಮಾನವ ಜಗತ್ತಿಗೆ ಬರುವಾಗ ಅಳುತ್ತಾ ಬರುತ್ತಾನೆ. ಸಾಯುವಾಗ ಎಲ್ಲರನ್ನು ಅಳಿಸಿ ಹೋಗುತ್ತಾನೆ. ಇವೆರಡರ ನಡುವೆ ನಾವು ಮಾಡಿದ ಒಳ್ಳೆಯ ಕೆಲಸಗಳು ಜನರ ಮನಸ್ಸಿನಲ್ಲಿ ಉಳಿಯುತ್ತವೆ ಎಂದರು.
ಅಮಿತ್ ಷಾ, ಯಡಿಯೂರಪ್ಪ, ಇಂದಿರಾಗಾಂಧಿ, ಮಹಾತ್ಮಗಾಂಧಿ ಸೇರಿದಂತೆ ಅನೇಕರು ತಪ್ಪು ಮಾಡದಿದ್ದರೂ ಜೈಲು ಸೇರಬೇಕಾಯಿತು. ಅದರಂತೆ ಮಾಡಾಳು ವಿರೂಪಾಕ್ಷಪ್ಪ ಸಹ ಬೇರೆಯವರ ಸಂಚಿಗೆ ಬಲಿಯಾಗಿ ಜೈಲಿಗೆ ಹೋದರು. ಅದಕ್ಕಾಗಿ ಚಿಂತಿಸಬೇಕಿಲ್ಲ. ನಿಮಗೆ ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯವಿದೆ. ಹಾಗಾಗಿ, ಸದಾಕಾಲ ಜನಸಂಪರ್ಕದಲ್ಲಿರಿ ಎಂದು ಹೇಳಿದರು.
ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭಾರತದ ಸಂಸ್ಕೃತಿ ಮೇಲೆ ಅನೇಕ ವರ್ಷಗಳಿಂದ ಕೆಲ ಧರ್ಮಗಳು ಪ್ರಹಾರ ಮಾಡುತ್ತಾ ಬಂದರೂ ನಮ್ಮ ಸಂಸ್ಕೃತಿ ಅಳಿಸಲು ಸಾಧ್ಯವಿಲ್ಲ. ಮನುಷ್ಯ ಬದುಕಲು ಗಾಳಿ, ನೀರು ಬೆಳಕು ಬೇಕು. ಅದರಂತೆ ಅಧ್ಯಾತ್ಮ, ಗುರುಗಳ ಮಾರ್ಗದರ್ಶನ ಬೇಕು ಎಂದರು.
ಹಾಲಸ್ವಾಮಿ ವಿರಕ್ತಮಠದ ಡಾ. ಬಸವಜಯಚಂದ್ರ ಶ್ರೀ, ಡಾ. ಪುಟ್ಟರಾಜ ಗವಾಯಿ ಶಿಷ್ಯರಾದ ಮಹಾಂತೇಶ್ ಶಾಸ್ತ್ರಿ ಮಾತನಾಡಿದರು.
ಚನ್ನಗಿರಿ ಕೇದಾರ ಶಾಖಾ ಮಠದ ಕೇದಾರಲಿಂಗ ಶಿವಶಾಂತವೀರ ಸ್ವಾಮೀಜಿ, ವೀರಶೈವ ಸಮಾಜದ ಅಧ್ಯಕ್ಷ ಕೋರಿ ಬಸವರಾಜ್, ಗೌರವಾಧ್ಯಕ್ಷ ಎನ್.ಯು. ರಾಜಶೇಖರಯ್ಯ, ಶಿಕ್ಷಕಿ ಕವಿತಾ, ಸಂತೋಷ್ ಹೂಗಾರ್, ಮಹೇಶ್ ಜವಳಿ ಇದ್ದರು.