

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹೆಚ್ಚುವರಿ ನಾಲ್ಕು ಗ್ರಾಪಂ ಕಾಂಗ್ರೆಸ್ ತೆಕ್ಕೆಗೆ ಬಂದಿದೆ. ಸುಭದ್ರ ಮತ್ತು ಭೃಷ್ಟಾಚಾರ ಮುಕ್ತ ಆಡಳಿತಕ್ಕಾಗಿ ಇತರೆ ಪಕ್ಷದ ಸದಸ್ಯರು ನಮ್ಮ ಜೊತೆ ಕೈ ಜೋಡಿಸಿದ್ದಾರೆ. ನಾವು ಯಾರಿಗೂ ಬಲವಂತ ಮಾಡಿಲ್ಲ, ಕಾಂಗ್ರೆಸ್‌ನ ತತ್ವ ಸಿದ್ದಾಂತವನ್ನು ಮೆಚ್ಚಿ ಬಿಜೆಪಿಯಲ್ಲಿದ್ದವರು ನಮ್ಮ ಜೊತೆ ಸೇರಿಕೊಳ್ಳುತ್ತಿರುವುದು ಉತ್ತಮ ವಿಚಾರವಾಗಿದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಅವರು ಕೋಡಿಂಬಾಡಿ ಗ್ರಾಮಪಂಚಾಯತ್‌ನಲ್ಲಿ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.
ಕೋಡಿಂಬಾಡಿ ಗ್ರಾಪಂ ಆಡಳಿತ ಹಲವು ವರ್ಷಗಳ ಕಾಲ ಬಿಜೆಪಿ ಆಡಳಿತದ ತೆಕ್ಕೆಯಲ್ಲಿತ್ತು, ಜನತೆ ಬದಲಾವಣೆ ಬಯಸಿದ್ದರು. ನಾವು ಬದಲಾವಣೆಯನ್ನು ಮಾಡಿದ್ದೇವೆ, ಗ್ರಾಮದ ಅಭಿವೃದ್ದಿಗಾಗಿ ಕೋಡಿಂಬಾಡಿಯಲ್ಲಿ ಕಾಂಗ್ರೆಸ್ ಆಡಳಿತದ ಪಂಚಾಯಿತಿ ಬಂದಿದೆ. ಉತ್ತಮ ಆಡಳಿತ ನಡೆಸುವ ಮೂಲಕ ನನ್ನ ಹುಟ್ಟೂರ ಗ್ರಾಪಂ ಕ್ಷೇತ್ರದ ಎಲ್ಲಾ ಗ್ರಾಪಂಗಳಿಗೂ ಮಾದರಿಯಾಗಬೇಕು. ಅನೇಕ ಮಂದಿ ಇತರೆ ಪಕ್ಷದ ಸದಸ್ಯರು ಕಾಂಗ್ರೆಸ್ ಪಕ್ಷವನ್ನು ಸೇರುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಮಂದಿ ಪಕ್ಷವನ್ನು ಸೇರಿಕೊಳ್ಳಲಿದ್ದಾರೆ ಎಂದರು.
ಗ್ರಾಮದ ಪ್ರತೀಯೊಬ್ಬ ಪ್ರಜೆಗೂ ಪಂಚಾಯತ್ ಆಡಳಿತದ ಬಗ್ಗೆ ಉತ್ತಮ ಭಾವನೆ ಬರುವ ರೀತಿಯಲ್ಲಿ ಕೆಲಸ ಮಾಡಬೇಕು. ಗ್ರಾಮದಲ್ಲಿ ಬಡವರಿಗೆ ಮನೆ ನಿರ್ಮಾಣಕ್ಕೆ ಸೈಟ್ ಮಾಡಿಕೊಡಬೇಕು. ಗ್ರಾಮದಲ್ಲಿ ಯಾರಿಗೂ ಮನೆ ಇಲ್ಲ, ಕುಡಿಯುವ ನೀರಿಲ್ಲ, ವಾಸಕ್ಕೆ ಮನೆ ಇಲ್ಲ ಎಂಬ ದೂರು ಬರಲೇಬಾರದು ಎಲ್ಲರಿಗೂ ಮೂಲಭೂತ ವ್ಯವಸ್ಥೆಯನ್ನು ಕಲ್ಪಿಸಬೇಕು. ಅಧಿಕಾರಗಳು ಹೇಳಿದ್ದನ್ನೇ ಕೇಳುವುದಲ್ಲ ಸರಕಾರದ ಸುತ್ತೋಲೆ ಯನ್ನು ನಾವು ಅಧ್ಯಯನ ನಡೆಸಬೇಕು, ಬಡವರಿಗೆ ನೆರವಾಗುವ ಯೋಜನೆಗಳನ್ನು ಗ್ರಾಪಂ ಜಾರಿಗೆ ತರಬೇಕು ಎಂದು ಹೇಳಿದರು.
ನೂತನ ಅಧ್ಯಕ್ಷೆ ಮಲ್ಲಿಕಾ ಅಶೋಕ್ ಪೂಜಾರಿ ಮಾತನಾಡಿ ನಾವು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇವೆ, ಗ್ರಾಪಂ ನ ಎಲ್ಲಾ ಸದಸ್ಯರು, ಪಕ್ಷದ ಮುಖಂಡರು , ಶಾಸಕರ ಮಾರ್ಗದರ್ಶನದಂತೆ ಕೆಲಸವನ್ನು ಮಾಡಲಿದ್ದು ಪಂಚಾಯತ್‌ನಲ್ಲಿ ಬಾಕಿ ಇರುವ ಮತ್ತು ಆಗಬೇಕಾದ ಅಭಿವೃದ್ದಿ ಕೆಲಸಗಳನ್ನು ಎಲ್ಲರ ಸಹಕಾರದಿಂದ ಮಾಡಲಿದ್ದೇವೆ ಎಂದು ಹೇಳಿದರು. ಕಳೆದ ಹಲವು ವರ್ಷಗಳಿಂದ ಅನೇಕ ಕೆಲಸಗಳು ನೆನೆಗುದಿಗೆ ಬಿದ್ದಿದೆ ಅವುಗಳಿಗೆ ವೇಗವನ್ನು ನೀಡುವ ಕೆಲಸವನ್ನು ಮಾಡಲಿದ್ದೇವೆ ಎಂದು ಹೇಳಿದರು.
ನೂತನವಾಗಿ ಅಧಿಕಾರ ಸ್ವೀಕರಿಸಿದ ಗ್ರಾಪಂ ಉಪಾಧ್ಯಕ್ಷರಾದ ಜಯಪ್ರಕಾಶ್ ಬದಿನಾರ್ ಮಾತನಾಡಿ ನೂತನವಾಗಿ ಅಸ್ತಿತ್ವಕ್ಕೆ ಬಂದ ಗ್ರಾಪಂ ಆಡಳಿತದಲ್ಲಿ ಯಾವುದೇ ತಾರತಮ್ಯವಿಲ್ಲದೆ ಎಲ್ಲರನ್ನೂ ಸಮಾನ ರೀತಿಯಲ್ಲಿ ನೋಡಿಕೊಳ್ಳುತ್ತೇವೆ, ಪಂಚಾಯತ್‌ನ ಎಲ್ಲಾ ಸದಸ್ಯರನ್ನು ವಿಸ್ವಾಸಕ್ಕೆ ತೆಗೆದುಕೊಂಡು ನಾವು ಮುಂದಕ್ಕೆ ಕೆಲಸ ಮಾಡಲಿದ್ದೇವೆ. ಶಾಸಕರ ನಿರ್ದೇಶನದಂತೆ ಭೃಷ್ಟಾಚಾರ ರಹಿತ ಆಡಳಿತವನ್ನು ನೀಡಲಿದ್ದು ಗ್ರಾಪಂ ನ್ನು ಡಿಜಿಟಲ್ ಪಂಚಾಯತನ್ನಾಗಿ ಪರಿವರ್ತನೆ ಮಾಡುತ್ತೇವೆ ಎಲ್ಲದಕ್ಕೂ ಗ್ರಾಮಸ್ಥರ ಮತ್ತು ಗ್ರಾಪಂ ಸದಸ್ಯರ ಸಹಕಾರ ಅಗತ್ಯವಾಗಿದೆ ಎಂದು ಹೇಳಿದರು.
ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷ ಡಾ. ರಾಜಾರಾಂ ಕೆ ಬಿ., ಮಾಜಿ ಅಧ್ಯಕ್ಷರಾದ ಮುರಳೀದರ್ ರೈ ಮಠಂತಬೆಟ್ಟು ಮಾತನಾಡಿದರು. ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಗ್ರಾಪಂ ಪಿಡಿಒ ರೀಹಿತ್, ಗ್ರಾಪಂ ಸದಸ್ಯರುಗಳಾದ ಜಗನ್ನಾಥ ಶೆಟ್ಟಿ ನಡುಮನೆ, ಪೂರ್ಣಿಮಾ ಯತೀಶ್ ಶೆಟ್ಟಿ , ಗೀತಾ ಉಪಸ್ಥಿತರಿದ್ದರು.
ವಲಯಾಧ್ಯಕ್ಷರಾದ ಮೋನಪ್ಪ ಗೌಡ ಸ್ವಾಗತಿಸಿದರು. ನಿರಂಜನ್ ರೈ ಮಠಂತಬೆಟ್ಟು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.