

ಉಡುಪಿ: ಕೋಡಿಬೆಂಗ್ರೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ಕೊರತೆ ಇದ್ದರೂ ಓರ್ವ ಶಿಕ್ಷಕರನ್ನು ವರ್ಗಾವಣೆ ಮಾಡಿರುವ ಶಿಕ್ಷಣ ಇಲಾಖೆ ಕ್ರಮ ವಿರೋಧಿಸಿ ಸೋಮವಾರ ಸ್ಥಳೀಯರು ಶಾಲೆಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
1ರಿಂದ 7ನೇ ತರಗತಿಯವರೆಗೆ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದ್ದು, ಪ್ರಸ್ತುತ ಮೂವರು ಶಿಕ್ಷರು ಕಾರ್ಯನಿರ್ವಹಿಸುತ್ತಿದ್ದಾರೆ. ಇವರಲ್ಲಿ ಒಬ್ಬರನ್ನು ವರ್ಗಾವಣೆ ಮಾಡಲು ಶಿಕ್ಷಣ ಇಲಾಖೆ ಮುಂದಾಗಿದೆ. ಕಳೆದ ವರ್ಷವೂ ವರ್ಗಾವಣೆಗೆ ಹುನ್ನಾರ ನಡೆಸಲಾಗಿದ್ದು, ನಂತರ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದರಿಂದ ಈ ಪ್ರಕ್ರಿಯೆ ತಾತ್ಕಾಲಿಕವಾಗಿ ತಡೆಯಾಗಿತ್ತು.
ಸ್ಥಳೀಯರಾದ ರಮೇಶ್ ತಿಂಗಳಾಯ ಮಾತನಾಡಿ, ನಿಧಾನವಾಗಿ ಸರ್ಕಾರಿ ಶಾಲೆಗಳನ್ನು ಮುಚ್ಚು ಹುನ್ನಾರ ಶಿಕ್ಷಣ ಇಲಾಖೆ ಮಾಡುತ್ತಿದೆ. ಕೋಡಿ ಬೆಂಗ್ರೆ ಶಾಲೆಯಲ್ಲಿ ಶಿಕ್ಷಕರ ಕೊರತೆಯ ಕಾರಣದಿಂದ ಮಕ್ಕಳ ಭವಿಷ್ಯಕ್ಕೆ ತೊಂದರೆಯಾಗಿದೆ. ಊರಿನಲ್ಲಿರುವ ಒಂದೇ ಒಂದು ಶಾಲೆಯು ಮುಂದಿನ ದಿನಗಳಲ್ಲಿ ಮುಚ್ಚುವ ಸಂಭವ ಇದೆ. ಇಲ್ಲಿರುವ 80 ಮಕ್ಕಳಿಗೆ ಇಬ್ಬರು ಶಿಕ್ಷಕರು ಪಾಠ ಮಾಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಶಿಕ್ಷಣಾಧಿಕಾರಿಗಳಿಂದ ಸಮರ್ಪಕ ಉತ್ತರ ಸಿಗದಿದ್ದಾಗ ಉಪ ನಿರ್ದೇಶಕರು ಸ್ಥಳಕ್ಕೆ ಬರುವಂತೆ ಗ್ರಾಮಸ್ಥರು ಪಟ್ಟು ಹಿಡಿದರು. ಮಧ್ಯಾಹ್ನದ ಬಳಿಕ ಸ್ಥಳಕ್ಕೆ ಬಂದ ಬ್ರಹ್ಮಾವರ ತಹಶೀಲ್ದಾರ ರಾಜಶೇಖರ ಮೂರ್ತಿ ಅವರು ಪ್ರಸ್ತುತ ಇರುವ ಶಿಕ್ಷಕರ ವರ್ಗಾವಣೆಯನ್ನು ನಿಲ್ಲಿಸಲಾಗುವುದು, ಹೆಚ್ಚುವರಿಯಾಗಿ ಮತ್ತೊಬ್ಬ ಖಾಯಂ ಶಿಕ್ಷಕರನ್ನು ನೇಮಕ ಮಾಡಲಾಗುವುದು ಎಂದರು.
ಪ್ರತಿಭಟನೆಯಲ್ಲಿ ರಮೇಶ್ ಎಸ್. ತಿಂಗಳಾಯ, ಪ್ರಶಾಂತ್ ಕಾಂಚನ್, ರವೀಂದ್ರ ಶ್ರೆಯಾನ್, ನಾಗೇಶ್ ತಿಂಗಳಾಯ, ಮನೋಹರ ಕುಂದರ್, ಜಮಾಲ್ ಸಾಹೇಬ್, ಸವಿತಾ, ವೀಣಾ, ಬಾಬು ಪಿ. ತಿಂಗಳಾಯ, ರೋಶನ್, ಶಶಿಕಾಂತ್ ತಿಂಗಳಾಯ ಮತ್ತಿತರ ಪ್ರಮುಖರು ಪಾಲ್ಗೊಂಡಿದ್ದರು