ಮಾರಿಕಣಿವೆಯಲ್ಲಿ ಮೇಳೈಸಿದ ಜಲ ವೈಭವ

dj hyr kodi
Published on

ಖಂಡೇನಹಳ್ಳಿ ಬಸವರಾಜ್ ಹಿರಿಯೂರು: ಬಯಲು ಸೀಮೆ ಜೀವನಾಡಿ ವಿವಿ ಸಾಗರ ಜಲಾಶಯ 3ನೇ ಬಾರಿ ಭರ್ತಿಯಾಗಿ ಕೋಡಿ ಹರಿಯುತ್ತಿದ್ದು, ಜಲ ವೈಭವ ಕಣ್ತುಂಬಿಕೊಳ್ಳಲು ಜನ ಸಾಗರವೇ ಹರಿದು ಬರುತ್ತಿದೆ.

ವರುಣ ಕೃಪೆಯಿಂದ 2022ರಲ್ಲಿ 89 ವರ್ಷದ ಬಳಿಕ ಕೋಡಿ ಬಿದ್ದಿತ್ತು. ಪ್ರಸಕ್ತ ವರ್ಷ ಭದ್ರಾ ನೀರನ್ನು ಜಲಾಶಯಕ್ಕೆ ಹರಿಸಿದ ಕಾರಣ ಮಾರಿಕಣಿವೆಯಲ್ಲಿ ಅಪಾರ ಜಲರಾಶಿ ಸಂಗ್ರಹವಾಗಿದೆ.

ಕೋಡಿ ಬೀಳುವ ಸುದ್ದಿ ತಿಳಿಯುತ್ತಿದಂತೆ ಜಿಲ್ಲೆಯ ವಿವಿಧೆಡೆಯಿಂದ ಸಾವಿರಾರು ಜನರು, ರೈತರು ಬಂದು ಜಲ ವೈಭವದ ಸೊಬಗನ್ನು ಕಣ್ತುಂಬಿಕೊಂಡರು. ಈ ಮಧ್ಯೆ ಕೋಡಿ ಸಮೀಪ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

3ನೇ ಬಾರಿ: ಜಲಾಶಯ ನಿರ್ವಣದ ನಂತರ ಮೊದಲಬಾರಿಗೆ 1933ರಲ್ಲಿ 135.75 ಅಡಿ ದಾಖಲೆಯ ನೀರು ಸಂಗ್ರಹವಾಗಿತ್ತು. ಮೂರನೇ ಬಾರಿಗೆ ಶುಕ್ರವಾರ ರಾತ್ರಿ ಕೋಡಿ ಬಿದ್ದಿದೆ. ತುಂಬಿರುವ ಜಲಾಶಯದ ಹಿನ್ನೀರು ಪ್ರದೇಶ ನಯನ ಮನೋಹರವಾಗಿದೆ.

ಪ್ರಕೃತಿ ನೀಡಿದ ವರ: ದಕ್ಷಿಣ ಕಾಶಿ ಹಿರಿಯೂರು ಎಂದಾಕ್ಷಣ ತೇರುಮಲ್ಲೇಶ್ವರ ಸ್ವಾಮಿ ದೇಗುಲ, ವಾಣಿ ವಿಲಾಸ ಸಾಗರ ಜಲಾಶಯ ನೆನಪಾಗುತ್ತದೆ. ಮಾರಿಕಣಿವೆ ಎಂಬಲ್ಲಿ ವೇದಾವತಿ ನದಿಗೆ ಅಡ್ಡಲಾಗಿ 1907ರಲ್ಲಿ ಮೈಸೂರು ಅರಸರು ನಿರ್ವಿುಸಿದ ವಿವಿಸಾಗರ ಜಿಲ್ಲೆಯ ಪ್ರಮುಖ ಜಲ ಮೂಲವಾಗಿದೆ. 1898ರಲ್ಲಿ ಆರಂಭಗೊಂಡ ಜಲಾಶಯದ ಕಾಮಗಾರಿ 1907 ರಲ್ಲಿ ಪೂರ್ಣಗೊಂಡು (47 ಲಕ್ಷ ರೂ.ಗಳಲ್ಲಿ ನಿರ್ವಣ) 1910ರಿಂದ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಯಲಾರಂಭಿಸಿತು.

ಚಿಕ್ಕಮಗಳೂರು ಜಿಲ್ಲೆಯ ಬಾಬಾ ಬುಡನ್ ಗಿರಿ ಪರ್ವತ ಶ್ರೇಣಿಯಲ್ಲಿ ಜನ್ಮ ತಾಳಿ ಪೂರ್ವಾಭಿಮುಖವಾಗಿ ಹರಿಯುವ ವೇದಾವತಿ ನದಿ ಬಯಲು ಸೀಮೆಗೆ ಪ್ರಕೃತಿ ನೀಡಿದ ವರವಾಗಿದೆ.

ಮಾಸ್ಟರ್ ಆಫ್ ಆರ್ಕಿಟೆಕ್ಚರ್: ಬಾಬಾ ಬುಡನ್ ಗಿರಿ ಪರಿಸರದಲ್ಲಿ ಹುಟ್ಟುವ ವೇದಾ-ಅವತಿ ಎರಡು ಹೊಳೆಗಳು ಒಂದಾಗಿ ವೇದಾವತಿ ನದಿಯಾಗಿ ಹರಿದು ಬಂದು ವಿವಿ ಸಾಗರ ಒಡಲು ಸೇರುತ್ತದೆ. ಜಲಾಶಯದ ಯೋಜನೆ ಸಿದ್ದಪಡಿಸಿ ಬಿಟ್ರಿಷ್ ಇಂಜಿನಿಯರ್ ಎಚ್.ಡಿ. ರೈಸ್ ಅವರು ಡ್ಯಾಂನ ಅಡಿಪಾಯದ ಕಲ್ಲುಗಳು, ಅವುಗಳ ರಚನೆ, ನೀರಿನ ಬಲ, ಒತ್ತಡ ತಡೆದುಕೊಳ್ಳಲು ಬೇಕಾದ ಶಕ್ತಿ, ಕಾಲುವೆಗಳ ನಿರ್ವಣ, ನೀರಿನ ಲಭ್ಯತೆ, ಭಾರತದ ಭೂಪಟ ಹೋಲಿಕೆ, ಕಣಿವೆ ಗುಡ್ಡಗಳ ಪರಿಸರ, ವೈಜ್ಞಾನಿಕ ತಳಹದಿ ಮೇಲೆ ನಿರ್ವಿುಸಿದ ಜಲಾಶಯ ಅತ್ಯಂತ ಸುರಕ್ಷಿತವಾಗಿದೆ ಎಂದು ಕೇಂದ್ರ ಜಲ ತಜ್ಞರು ವರದಿ ನೀಡಿದ್ದಾರೆ.

ಜಲಾಶಯದ ಮಾಹಿತಿ: ಜಲಾಶಯದ ಪೂರ್ಣ ಮಟ್ಟ 135 ಅಡಿ.

30 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯ.

ಒಳ ಹರಿವು 693 ಕ್ಯುಸೆಕ್.

ಪ್ರಸ್ತುತ 129.5 ಅಡಿ.

ಅಚ್ಚುಕಟ್ಟು 12,135 ಹೆಕ್ಟೇರ್.

ಪ್ರಸಕ್ತ ವರ್ಷ ಜಲಾಶಯಕ್ಕೆ ಹರಿದ ನೀರು: 13.15 ಟಿಎಂಸಿ.

ಮಳೆಯಿಂದ: 8.1ಟಿಎಂಸಿ.

ಭದ್ರಾ ಜಲಾಶಯದಿಂದ ವಿವಿ ಸಾಗರಕ್ಕೆ 5 ಟಿಎಂಸಿ ಅಡಿ ನೀರು ಹರಿದು ಬಂದಿದೆ.

2022, ಸೆ.2ರಂದು ಶುಕ್ರವಾರ ಜಲಾಶಯದ ಕೋಡಿ ಬಿದ್ದಿದ್ದು ವಿಶೇಷ, ಕಾಕತಾಳೀಯ ಎಂಬಂತೆ 2025ರ ಜ.10 ರಂದು ಶುಕ್ರವಾರ ಜಲಾಶಯ ಕೋಡಿ ಬಿದ್ದಿರುವುದು ಇಲ್ಲಿನ ಕಣಿವೆ ಮಾರಮ್ಮ ದೇವಿ ಪವಾಡ ಎಂಬುದು ಜನರ ನಂಬಿಕೆ.

ಜಲಾಶಯದ ಮುಂಭಾಗದಲ್ಲಿರುವ ಕಣಿವೆ ಮಾರಮ್ಮ ದೇವಿ ಜಲಾಶಯದ ರಕ್ಷಕಿ. ದೇವಿಯ ವಿಗ್ರಹ ಜಲಾಶಯದ ಕಡೆ ಮುಖ ಮಾಡಿದೆ. ದೇವಿಯ ಬೆನ್ನಿಗೆ ಪೂಜೆ ಮಾಡಲಾಗುತ್ತದೆ.

ವಿಶೇಷತೆ: ಮೂರನೇ ಬಾರಿ ಜಲಾಶಯ ಭರ್ತಿ. 1933 ಮತ್ತು 2022ರಲ್ಲಿ ಗರಿಷ್ಟ ನೀರಿನ ಸಂಗ್ರಹ (135 ಅಡಿ). 2022ರಲ್ಲಿ ಅಂದಿನ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿಎಸ್​ವೈ ಅವರು ಮೊದಲ ಬಾರಿಗೆ ವಿವಿ ಸಾಗರಕ್ಕೆ ಬಾಗಿನ ಅರ್ಪಿಸಿದ್ದರು. ಸಿಎಂ ಸಿದ್ದರಾಮಯ್ಯ ಅವರು ಎರಡನೇ ಬಾರಿ ಜಲಾಶಯಕ್ಕೆ ಬಾಗಿನ ಸಮರ್ಪಣೆ ಮಾಡಲಿದ್ದಾರೆ.

ಕಣಿವೆ ಗುಡ್ಡಗಳ ಸಂದರ ಪರಿಸರದ ನಡುವೆ ಜಲಾಶಯವಿದೆ. ಹಿನ್ನೀರು ಪ್ರದೇಶದಲ್ಲಿ ಜಲ ಸಾಹಸ ಕ್ರೀಡಾ ತರಬೇತಿ ಕೇಂದ್ರವಿದೆ. ಜಲಾಶಯದಲ್ಲಿ ನೀರಿನ ಸಂಗ್ರಹ ಹೆಚ್ಚಳದಿಂದ ಹಿನ್ನೀರು ಪ್ರದೇಶದ ತೋಟಗಳು ಮುಳುಗಡೆ ಭೀತಿ ರೈತರಲ್ಲಿದೆ. ಕೋಡಿ ಎತ್ತರ ತಗ್ಗಿಸುವ ಪ್ರಸ್ತಾಪ ಹೊಸದುರ್ಗ, ಹಿರಿಯೂರು ತಾಲೂಕಿನ ರೈತರು, ಜನಪ್ರತಿನಿಧಿಗಳ ನಡುವೆ ಜಟಾಪಟಿಗೆ ಕಾರಣವಾಗಿತ್ತು.

ರಾಜ್ಯ ಸರ್ಕಾರದ ಇಚ್ಛಾಶಕ್ತಿಯಿಂದ ಭದ್ರೆ ವಿವಿ ಸಾಗರದ ಒಡಲು ಸೇರಿ ಜಲಾಶಯ ಭರ್ತಿಯಾಗಿದೆ. ಜ.18ರಂದು ನಾಡ ದೊರೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಜಲಾಶಯಕ್ಕೆ ಬಾಗಿನ ಸಮರ್ಪಣೆ ಮಾಡಲಿದ್ದಾರೆ. ಐತಿಹಾಸಿಕ ಕ್ಷಣಕ್ಕೆ ಜಿಲ್ಲೆಯ ಜನತೆ ಕಾತರರಾಗಿದ್ದಾರೆ. | ಡಿ.ಸುಧಾಕರ್, ಜಿಲ್ಲಾ ಸಚಿವ. ಡೆಡ್ ಸ್ಟೋರೇಜ್ ತಲುಪಿದ ಜಲಾಶಯದಲ್ಲಿ ಇಂದು ಜಲ ವೈಭವ ಮೇಳೈಸುತ್ತಿರುವುದು ಕೃಷಿ, ಕುಡಿವ ನೀರಿಗೆ ಸಂಜೀವಿನಿಯಾಗಲಿದೆ. ಹಿರಿಯೂರು ತಾಲೂಕಿನಲ್ಲಿ ಭೂಮಿಗೆ ಬಂಗಾರದ ಬೆಲೆ ಬಂದಿದೆ. ರೈತರು ಯಾವುದೇ ಕಾರಣಕ್ಕೂ ಭೂಮಿ ಮಾರಾಟ ಮಾಡಬಾರದು. | ಕಸವನಹಳ್ಳಿ ರಮೇಶ್, ಅಧ್ಯಕ್ಷ. ನೀರಾವರಿ ಹೋರಾಟ ಸಮಿತಿ. ಜಲಾಶಯದ ಕೋಡಿ ನೀರು ಹರಿಯುವ ನದಿ ಪಾತ್ರದಲ್ಲಿ ಸುರಕ್ಷಿತ ಕ್ರಮ ಕೈಗೊಳ್ಳಲಾಗಿದೆ. ಜಲಾಶಯ ಭರ್ತಿಯಾಗಿ ನೀರಿನ ಪ್ರಮಾಣ ಹೆಚ್ಚಿದ್ದು ಜನರು ಕೋಡಿ ಬಳಿ ಹೋಗುವ ಸಾಹಸ ಮಾಡಬಾರದು. | ಮಾನಸಾ, ಇಂಜಿನಿಯರ್, ವಿವಿ ಸಾಗರ. ಶತಮಾನದ ಇತಿಹಾಸವಿರುವ ವಿವಿ ಸಾಗರ ಜಲಾಶಯ ಮೂರನೇ ಬಾರಿ ಭರ್ತಿಯಾಗಿ, ಕೋಡಿ ಬಿದ್ದಿರುವುದ ಸಂತಸ ತಂದಿದೆ. ಭದ್ರಾ ಮೇಲ್ದಂಡೆ ಯೋಜನೆ ಬರ ಪೀಡಿತ ಚಿತ್ರದುರ್ಗ ಜಿಲ್ಲೆಯ ಸಮಗ್ರ ನೀರಾವರಿ ಯೋಜನೆಗೆ ವರದಾನವಾಗಲಿದೆ. | ಕೆ. ಪೂರ್ಣಿಮಾ, ಮಾಜಿ ಶಾಸಕಿ. ಮೈಸೂರಿನ ಕೆಆರ್​ಎಸ್, ಆಲಮಟ್ಟಿ ಜಲಾಶಯದ ಮಾದರಿಯಲ್ಲಿ ವಿವಿ ಸಾಗರವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಬೇಕು. ಈ ಬಗ್ಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಜಿಲ್ಲಾ ಸಚಿವರ ಜತೆ ರ್ಚಚಿಸಲಾಗುವುದು. | ಡಿ.ಟಿ. ಶ್ರೀನಿವಾಸ್, ಎಂಎಲ್ಸಿ. ಬಯಲು ಸೀಮೆಗೆ ಪ್ರಕೃತಿ ಕೊಟ್ಟಿರುವ ವರ ವಿವಿ ಸಾಗರ ಜಲಾಶಯ. ವರುಣನ ಕೃಪೆ, ಭದ್ರಾ ಮೇಲ್ದಂಡೆ ಯೋಜನೆ ಸಾಕಾರದಿಂದ ಕೋಡಿ ಬಿದ್ದಿರುವುದು ಸಂತಸ ತಂದಿದೆ. ಜನ-ಜಾನುವಾರು ಕುಡಿವ ನೀರು, ಕೃಷಿಗೆ ಅನುಕೂಲವಾಗಲಿದೆ. | ಶ್ರೀ ಷಡಕ್ಷರಮುನಿ ಸ್ವಾಮೀಜಿ. ಆಳುವ ಸರ್ಕಾರ-ಜನಪ್ರತಿನಿಧಿಗಳಿಗೆ ಬದ್ಧತೆ, ರೈತ ಪರ ಕಾಳಜಿ ಇದ್ದರೆ ನೀರಾವರಿ ಯೋಜನೆಗಳು ಫಲಪ್ರದವಾಗಲಿವೆ. ಜಲಾಶಯ ಭರ್ತಿಯಾಗಿರುವುದು ಸಕಲ ಜೀವ ರಾಶಿಗಳಿಗೆ ವರದಾನವಾಗಲಿದೆ. ಭವಿಷ್ಯದ ಹಿತದೃಷ್ಟಿಯಿಂದ ವಿವಿ ಸಾಗರಕ್ಕೆ ಕನಿಷ್ಠ 10 ಟಿಎಂಸಿ ನೀರು ತುಂಬಿಸಬೇಕು. | ಶ್ರೀ ನಂಜಾವಧೂತ ಸ್ವಾಮೀಜಿ. ಭದ್ರೆ, ವೇದಾವತಿ ನದಿ ಚಿತ್ರದುರ್ಗ ಜಿಲ್ಲೆಗೆ ಸಂಜೀವಿನಿಯಾಗಿದೆ. 3ನೇ ಬಾರಿ ಕೋಡಿ ಬಿದ್ದಿರುವುದು ಸಂತಸ ತಂದಿದೆ. ಐತಿಹಾಸಿಕ ಕ್ಷಣದಲ್ಲಿ ನಾವಿರುವುದೇ ಪುಣ್ಯ. | ಶ್ರೀ ಶಾಂತವೀರ ಸ್ವಾಮೀಜಿ. ಸ್ವಾತಂತ್ರ್ಯಾನಂತರ ಎರಡನೇ ಬಾರಿಗೆ ವಿವಿ ಸಾಗರ ಜಲಾಶಯ ಕೋಡಿ ಬಿದ್ದಿರುವುದು ಅವಿಸ್ಮರಣೀಯ. ಜಲಾಶಯದ ಗತ ವೈಭವ ಮರುಕಳಿಸಿದ್ದು. ಇಡೀ ಜಿಲ್ಲೆ ಹಸಿರಾಗಿ ಮುಂದಿನ ಪೀಳಿಗೆಗೆ ಅನುಕೂಲವಾಗಲಿದೆ. | ಟಿ.ರಘುಮೂರ್ತಿ, ಚಳ್ಳಕೆರೆ ಶಾಸಕ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net