

ಹುಬ್ಬಳ್ಳಿ : ಲೋಕಸಭೆ ಚುನಾವಣೆಗೆ ಇನ್ನೂ ಬಹಳ ದಿನಗಳಿವೆ. ಈಗಲೇ ಸತ್ಯವನ್ನು ಹೇಳಿದರೇ ನಾನು ಮಠ ತಲುಪಲು ಸಾಧ್ಯವಾಗುವುದಿಲ್ಲ. ಸಮಯ ಬಂದಾಗ ಹೇಳುತ್ತೇನೆ ಎಂದು ಹಾರನಹಳ್ಳಿ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ಸ್ವಾಮೀಜಿ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸತ್ಯ ಯಾರಿಗೂ ಇಷ್ಟವಾಗುವುದಿಲ್ಲ. ಅಸತ್ಯವೇ ಎಲ್ಲರಿಗೂ ಇಷ್ಟವಾಗುತ್ತದೆ. ಹೀಗಾಗಿ, ಲೋಕಸಭೆ ಚುನಾವಣೆ ಬಗ್ಗೆ ಈಗಲೇ ಏನನ್ನೂ ಹೇಳುವುದಿಲ್ಲ ಎಂದರು.
ರಾಜ್ಯ ರಾಜಕರಣದ ಬಗ್ಗೆ ಭವಿಷ್ಯ ನುಡಿದ ಶ್ರೀಗಳು, ಒಂದು ಸ್ಥಿರ ಸರ್ಕಾರ ಬರುತ್ತದೆಯೆಂದು ಈ ಮುಂಚೆ ಭವಿಷ್ಯ ಹೇಳಿದ್ದೆ. ಅದು ನಿಜವಾಗಿದೆ ಎಂದರು. ರಾಜ್ಯ ಕಾಂಗ್ರೆಸ್ ಸರ್ಕಾರ ಪೂರ್ಣಾವಧಿ ಆಡಳಿತ ನಡೆಸುವುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಶ್ರೀಗಳು, ಬಾಯಿಯ ವಾಸನೆ ಮೂಗಿಗೆ ಬಡಿಯುವುದಿಲ್ಲ. ಆದರೆ, ಊರಿನ ಎಲ್ಲ ವಾಸನೆ ಮೂಗಿಗೆ ಮುಟ್ಟುತ್ತದೆ ಎಂದು ಮಾರ್ವಿುಕವಾಗಿ ನುಡಿದರು.
ಕರುನಾಡಿಗೆ ಕೆಲವೊಂದು ಆಪತ್ತು ಎದುರಾಗುವ ಸಾಧ್ಯತೆ ಇವೆ. ಸಾವು-ನೋವುಗಳು ಸಂಭವಿಸಬಹುದು. ಆದರೆ, ದೈವ ಕೃಪೆಯಿಂದ ಪಾರಾಗಬಹುದು ಎಂದು ಹೇಳಿದರು.
ಈ ಮೊದಲು ಸ್ವಾತಂತ್ರ್ಯ ಇಲ್ಲದ ಮಹಿಳೆಯರು ಇಂದು ಸ್ವತಂತ್ರವಾಗಿ ಹೊರಗಡೆ ಬಂದಿದ್ದಾರೆ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಸಾರ್ವಜನಿಕರ ಹಿತದೃಷ್ಟಿಯಿಂದ ಒಳ್ಳೆಯವು ಎಂದು ಅಭಿಪ್ರಾಯಪಟ್ಟರು.
ರಾಜ್ಯದಲ್ಲಿ ಈ ಬಾರಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ. ಜಲಪ್ರಳಯದ ಲಕ್ಷಣಗಳೂ ಇವೆ ಎಂದರು.
ಜಾಗತಿಕ ಮಟ್ಟದಲ್ಲಿ ದುರಂತ ಸಂಭವಿಸುವ ಸಾಧ್ಯತೆ ಇದೆ ಎಂದು ಭವಿಷ್ಯ ನುಡಿದ ಶ್ರೀಗಳು, ಒಂದೆರಡು ರಾಷ್ಟ್ರಗಳು ಮುಚ್ಚಿ ಹೋಗಲಿವೆ. ಜಗತ್ತಿನ ಸಾಮ್ರಾಟರು ತಲ್ಲಣಗೊಳ್ಳುತ್ತಾರೆ. ಅಕಾಲ ಮೃತ್ಯುಗಳಾಗುವ ಸೂಚನೆ ಇದೆ. ವಿಜಯದಶಮಿಯಿಂದ ಸಂಕ್ರಾಂತಿವರೆಗೆ ಜಗತ್ತಿನಲ್ಲಿ ದುರ್ಘಟನೆ ನಡೆಯುತ್ತದೆ. ಆಳುವವರು ಅರಿತರೆ ಗಂಡಾಂತರದಿಂದ ಪಾರಾಗಬಹುದು. ಇಲ್ಲದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಜಾಗತಿಕವಾಗಿ ಮೂರು ಗಂಡಾಂತರಗಳು ಕಾದಿವೆ ಎಂದು ಎಚ್ಚರಿಕೆ ನೀಡಿದರು.