

ಕುಂದಾಪುರ: ಒಂದು ಕಡೆ ದಂಡೆಗೆ ಬಡಿಯುವ ಅಲೆಗಳ ಅಬ್ಬರ. ಮತ್ತೊಂದು ಕಡೆ ಇಡೀ ಅಂಬರವನ್ನೇ ಬಣ್ಣದಲ್ಲಿ ಅದ್ದಿ ತೆಗೆವ ಸೂರ್ಯ.. ಗಾಳಿ ಅಬ್ಬರ.. ಓಲಾಡುವ ತೆಂಗಿನ ಮರಗಳ ನಡುವಿನ ಸೀವಾಕ್ ಅದ್ಭುತ ಅನುಭವ.
ಕುಂದಾಪುರ ಸಮೀಪ ಕೋಡಿ ಕಡಲ ಕಿನಾರೆಯಲ್ಲಿ ಕಿಲೋ ಮೀಟರ್ ಉದ್ದದ ಸೀವಾಕ್ ಮತ್ತೊಂದು ಪ್ರಪಂಚಕ್ಕೆ ಕೊಂಡೊಯ್ಯುತ್ತದೆ. ಸಂಜೆ ಸೂರ್ಯ ಬಾನಂಗಳದಲ್ಲಿ ಮೂಡಿಸುವ ಬಣ್ಣದ ಚಿತ್ತಾರ, ಬೀಸಿಬರುವ ಕುಳಿರ್ಗಾಳಿ, ಕಡಲ ಅಲೆಗಳ ಬೆಳ್ನೊರೆ ಪ್ರವಾಸಿಗರನ್ನು ಬೇರೆಯೇ ಲೋಕಕ್ಕೆ ಕೊಂಡೊಯ್ಯುತ್ತದೆ.
ದೇಶದ ಬೇರೆ ಬೇರೆ ಕಡೆಯಲ್ಲಿ ಸೀವಾಕ್ ಇದ್ದರೂ ಕೋಡಿ ಬೀಚಿಗೆ ಸರಿಸಾಟಿಯಲ್ಲ. ಬ್ರೇಕ್ ವಾಟರ್ ತಡೆಗೋಡೆಯೇ ಸೀವಾಕ್ ಆಗಿ ಪರಿವರ್ತನೆಗೊಂಡು ಸೌಂದರ್ಯ ನೀಡಿದೆ.
ಮಂಗಳೂರಿನ ಪಣಂಬೂರಿನಲ್ಲಿ ಒಂದು ಕಿ.ಮೀ, ವಿಶಾಖಪಟ್ಟಣದಲ್ಲಿ ಮೂರು ಕಿ.ಮೀ. ಉದ್ದದ ಸೀವಾಕ್ ಇದ್ದರೂ ಅವು ಪ್ರವಾಸಿಗರಿಂದ ದೂರ ಉಳಿದಿದ್ದು, ಕೋಡಿ ಕಡಲ ಕಿನಾರೆ ಸೀವಾಕ್ ಜನರನ್ನು ಕೈಬೀಸಿ ಕರೆಯುತ್ತಿದೆ. ಪ್ರತಿದಿನ ನೂರಾರು ಜನ ಸೀವಾಕ್ ಖುಷಿ ಅನುಭವಿಸಿದರೆ, ಶನಿವಾರ, ಭಾನುವಾರ ರಜಾದಿನ ಸಾವಿರಾರು ಪ್ರವಾಸಿಗರು ಕೋಡಿ ಸೀವಾಕ್‌ನಲ್ಲಿ ವಾಕಿಂಗ್ ಮಾಡುವ ಮೂಲಕ ತೃಪ್ತರಾಗುತ್ತಾರೆ.
ಪ್ರವಾಸೋದ್ಯಮ ಅವಕಾಶ: ಕೋಡಿ ಕಡಲ ಕಿನಾರೆ ಪ್ರವಾಸೋದ್ಯಮ ಇಲಾಖೆ ಅಭಿವೃದ್ಧಿ ಪಡಿಸಲು ಬಹಳಷ್ಟು ಅವಕಾಶವಿದ್ದು, ಪ್ರಸಕ್ತ ಮೂಲ ಸೌಲಭ್ಯದ ಕೊರತೆ ಇದೆ. ಕಡಲ ಕಿನಾರೆಯಲ್ಲಿ ಸಾಕಷ್ಟು ಜಾಗವಿದ್ದು, ದೋಣಿ ವಿಹಾರ, ಸಾಹಸ ಜಲಕ್ರೀಡೆಗೆ ಅವಕಾಶ ಸಿಕ್ಕರೆ ಪ್ರವಾಸಿಗಳ ಸಂಖ್ಯೆ ಹೆಚ್ಚುವ ಜತೆ ಪರಿಸರದ ಜನರಿಗೆ ಸಣ್ಣ ಪುಟ್ಟ ಉದ್ಯೋಗ ಕೂಡ ಸಿಗಲಿದೆ. ಕರಾವಳಿ ತೀರದಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶವಿದ್ದರೂ, ಚುನಾವಣೆ ಸಮಯದಲ್ಲಿ ಸದ್ದು ಮಾಡಿ ಮತ್ತೆ ತಣ್ಣಗಾಗುವ ಮೂಲಕ ಮುಗಿದು ಹೋಗುತ್ತದೆ. ಗೋವಾ ಮತ್ತು ಕೇರಳ ರಾಜ್ಯ ಕಡಲ ತೀರ ಅಭಿವೃದ್ಧಿ ಪಡಿಸಿದ ಹಾಗೆ ಕರ್ನಾಟಕ ಕರಾವಳಿಯಲ್ಲಿ ಆಗಿಲ್ಲ. ಕೋಡಿಯಲ್ಲಿ ಪ್ರವಾಸಗರಿಗೆ ಉತ್ತಮ ಹೋಟೆಲ್, ವಸತಿ ವ್ಯವಸ್ಥೆ, ದೋಣಿ ವಿಹಾರ, ಜಲಕ್ರೀಡೆಗಳಿಗೆ ಆದ್ಯತೆ ಜತೆ ಶೌಚಗೃಹ, ಸ್ನಾನಗೃಹ ನಿರ್ಮಾಣ ಮೂಲಕ ಕೋಡಿ ಬೀಚ್ ಅಭಿವೃದ್ಧಿ ಮಾಡಿ, ಪ್ರವಾಸಿಗರ ಇನ್ನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯುವ ಎಲ್ಲಾ ಅವಕಾಶವಿದೆ.
ಕೋಡಿ ಕಡಲ ಕಿನಾರೆ ಸೀವಾಕ್ ಜನಾಕರ್ಷಣೆ ತಾಣವಾಗುತ್ತಿದ್ದು, ಪ್ರವಾಸೋದ್ಯಮ ಇಲಾಖೆ ಮೂಲಕ ಅಭಿವೃದ್ಧಿಗೊಳಿಸುವ ಎಲ್ಲ ಪ್ರಯತ್ನ ಮಾಡಲಾಗುತ್ತದೆ. ಮೊದಲು ಶೌಚಾಗೃಹ, ಸ್ನಾನಗೃಹಕ್ಕೆ ಒತ್ತು ನೀಡುವ ಜತೆ ಕಡಲ ಕಿನಾರೆ ಬಳಿ ಏನೆಲ್ಲಾ ಅಭಿವೃದ್ಧಿ ಮಾಡಲು ಸಾಧ್ಯವೋ ಅದನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.
ಹಾಲಾಡಿ ಶ್ರೀನಿವಾಸ ಶೆಟ್ಟಿ, ಶಾಸಕ, ಕುಂದಾಪುರ
ಕೋಡಿ ಕಡಲ ಕಿನಾರೆ, ಸೀವಾಕ್ ಬಳಿ ಅಭಿವೃದ್ಧಿಗೆ ಸಾಕಷ್ಟು ಅವಕಾಶವಿದ್ದು, ಮೊದಲು ಪ್ರವಾಸಿಗರಿಗೆ ಶೌಚಗೃಹ, ಬಟ್ಟೆ ಬದಲಾಯಿಸುವ ಕೊಠಡಿ, ಸ್ನಾನ ಗೃಹ, ಕುಡಿಯುವ ನೀರು ಸೌಲಭ್ಯ ಒದಗಿಸಬೇಕು. ವಸತಿಗೃಹ, ಹೋಟೆಲ್ ಸಮುಚ್ಚಯದ ಮೂಲಕ ಕರಾವಳಿ ಊಟ, ತಿನಿಸುಗಳ ಪ್ರವಾಸಿಗರಿಗೆ ಪರಿಚಯಿಸುವ ಕೆಲಸ ಆಗಬೇಕು. ಕಡಲ ತೀರದಲ್ಲಿ ಬೀಚ್ ಕ್ರೀಡೆ, ಗಾಳಿಪಟ ಉತ್ಸವ ಮೂಲಕ ಕೋಡಿ ಕಿನಾರೆ ಪರಿಚಯಿಸುವುದಷ್ಟೇ ಅಲ್ಲದೆ ಕುಂದಾಪುರದಿಂದ ಕೋಡಿಗೆ ಬರುವ ರಸ್ತೆ ಅಗಲೀಕರಿಸಬೇಕು.
ಸರಸ್ವತಿ ಜಿ.ಪುತ್ರನ್, ಮಾಜಿ ಅಧ್ಯಕ್ಷೆ, ಗೋಪಾಡಿ ಗ್ರಾಪಂ