ಚುನಾವಣಾ ಬಹಿಷ್ಕಾರ ಹಿಂಪಡೆಯಿರಿ: ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್

dc new
Published on

ಕೋಟ: ಕೋಡಿ ಕನ್ಯಾಣ ಗ್ರಾಮಪಂಚಾಯಿತಿ ಹಲವು ವರ್ಷಗಳ ಬೇಡಿಕೆಯಾದ ಹಕ್ಕು ಪತ್ರ ವಿತರಣೆ ಹಾಗೂ ಜೆಟ್ಟಿ ನಿರ್ಮಾಣ ವಿಳಂಬ ವಿರೋಧಿಸಿ ಚುನಾವಣಾ ಬಹಿಷ್ಕಾರ ಕೈಗೊಂಡ ಇಲ್ಲಿನ ಗ್ರಾಮಸ್ಥರ ನಿರ್ಣಯವನ್ನು ತಿಳಿಗೊಳಿಸಲು ಗುರುವಾರ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಭೇಟಿ ನೀಡಿ ಗ್ರಾಮಸ್ಥರ ಅಹವಾಲು ಸ್ವೀಕರಿಸಿದರು.

ಕೋಡಿ ಕನ್ಯಾಣದ ಶಾಲೆಯಲ್ಲಿ ಆಯೋಜಿಸಿದ ಸಭೆಯಲ್ಲಿ ಗ್ರಾಮಸ್ಥರು, ಊರಿನ ಮುಖಂಡರು ಭಾಗಹಿಸಿದ್ದರು.

ಸಮಸ್ಯೆಗಳ ಪರಿಹಾರಕ್ಕೆ ಚುನಾವಣೆ ಬಹಿಷ್ಕಾರ ಸರಿಯಲ್ಲ. ಚುನಾವಣೆ ಬಹಿಷ್ಕರಿಸಿದರೆ ಮುಂದೆ ಗ್ರಾಮದ ಅಭಿವೃದ್ಧಿಗೆ ಸಾಕಷ್ಟು ಹಿನ್ನಡೆಯಾಗಲಿದೆ. ನಿಮ್ಮ ಸಮಸ್ಯೆ ಬಗೆಹರಿಸಲು ಈಗಾಗಲೇ ಪ್ರಕ್ರಿಯೆಗಳು ನಡೆಯುತ್ತಿದ್ದು, ಜನಪ್ರತಿನಿಧಿಗಳು ಕೂಡ ಶ್ರಮಿಸುತ್ತಿದ್ದಾರೆ. ದಯವಿಟ್ಟು ತಮ್ಮ ನಿಲುವಿನಿಂದ ಹಿಂದೆ ಸರಿಯಬೇಕು ಎಂದು ಗ್ರಾಮಸ್ಥರಿಗೆ ಮನವಿ ಮಾಡಿದರು.

ಗ್ರಾಮಸ್ಥರ ಪರವಾಗಿ ಅಂತೋನಿ ಡಿಸೋಜ ಮಾತನಾಡಿ, ಹಕ್ಕುಪತ್ರ ಸಮಸ್ಯೆ, ಜೆಟ್ಟಿ ಕಾಮಗಾರಿ ಸ್ಥಗಿತ, ಕೃಷಿಗೆ ಉಪ್ಪು ನೀರಿನ ಸಮಸ್ಯೆ, ಜನಪ್ರತಿನಿಧಿಗಳ ಅಸಹಕಾರ ಮುಂತಾದ ಕಾರಣಗಳಿಗಾಗಿ ಚುನಾವಣೆ ಬಹಿಷ್ಕಾರಕ್ಕೆ ಕರೆ ನೀಡಿದ್ದೇವೆ. ಜೆಟ್ಟಿ ಹೂಳೆತ್ತಲು ಎಲ್ಲ ಕಡೆಗಳಲ್ಲಿ ಸಾಧ್ಯವಾದರೂ ಕೋಡಿಕನ್ಯಾಣದಲ್ಲಿ ಆಗಿಲ್ಲ. ಉಪ್ಪು ನೀರಿನ ತಡೆಗೆ ವ್ಯವಸ್ಥೆಯಿಲ್ಲದೆ ಪ್ರತಿ ವರ್ಷ ಕೃಷಿ ಹಾನಿಯಾಗುತ್ತಿದೆ. ಹತ್ತಾರು ವರ್ಷಗಳ ನಮ್ಮ ಸಮಸ್ಯೆಗೆ ಸರ್ಕಾರ ಪೂರಕವಾಗಿ ಸ್ಪಂದನೆ ನೀಡದಿರುವುದರಿಂದ ಈ ಬಾರಿ ಚುನಾವಣೆ ಬಹಿಷ್ಕರಿಸುತ್ತೇವೆ. ನಮ್ಮ ಸಮಸ್ಯೆಗಳನ್ನು ಆಲಿಸಬೇಕಾದ ಜನಪ್ರತಿನಿಧಿಗಳು ಮೌನವಾಗಿರುವುದು ಶೋಚನೀಯ ಎಂದರು.

ಜಿಲ್ಲಾಧಿಕಾರಿ ಜಗದೀಶ್ ಪ್ರತಿಕ್ರಿಯಿಸಿ, ಸಿ.ಆರ್.ಜಡ್. ನಿಯಮಗಳನ್ನು ಪರಿಶೀಲಿಸಿ ಹಕ್ಕುಪತ್ರ ನೀಡುವಂತೆ ಈ ಹಿಂದೆ ಸರ್ಕಾರ ಆದೇಶದಲ್ಲಿ ತಿಳಿಸಿದ್ದರಿಂದ ಹಿನ್ನಡೆಯಾಗಿದೆ. ನಿಮ್ಮ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಪರಂಬೋಕು ಶೀರ್ಷಿಕೆಯನ್ನು ಕಡಿತಗೊಳಿಸುವ ಸಲುವಾಗಿ ಸರ್ಕಾರಕ್ಕೆ ಮನವಿ ಸಲ್ಲಿಸುವ ಕಾರ್ಯ 15 ದಿನಗಳಲ್ಲಿ ನಡೆಯಲಿದೆ. ಶೀಘ್ರದಲ್ಲೇ ಹೊಸ ಸರ್ವೇ ನಂಬರ್ ನೀಡಿ ಹಕ್ಕುಪತ್ರ ವಿತರಿಸಲಾಗುವುದು. ಕೃಷಿಭೂಮಿಗೆ ಹಕ್ಕುಪತ್ರ ನೀಡಲು ಸಿ.ಆರ್.ಜಡ್‌ನಲ್ಲಿ ಯಾವುದೇ ಸಮಸ್ಯೆಯಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಹಕ್ಕುಪತ್ರಕ್ಕಾಗಿ ಪಾವತಿಸಬೇಕಾದ ಮೊತ್ತ ಕಡಿತಗೊಳಿಸಲು ಸೂಚಿಸಿದ್ದು, ಈ ಬಗ್ಗೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಜೆಟ್ಟಿ ಸಮಸ್ಯೆಗೆ ಸಂಬಂಧಿಸಿ ತಜ್ಞರೊಂದಿಗೆ ಮಾತುಕತೆ ನಡೆಸಿ ಕ್ರಮಕೈಗೊಳ್ಳಲಾಗುವುದು. ಎಲ್ಲ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮುಂಚೂಣಿಯಲ್ಲಿ ನಿಂತು ಕಾರ್ಯ ನಿರ್ವಹಿಸುತ್ತದೆ ಎಂದರು.

ಬ್ರಹ್ಮಾವರ ತಹಸೀಲ್ದಾರ್ ಕಿರಣ್ ಗೋರಯ್ಯ, ಕುಂದಾಪುರ ಸಹಾಯಕ ಉಪವಿಭಾಗಾಧಿಕಾರಿ ರಾಜು, ಬ್ರಹ್ಮಾವರ ವೃತ್ತ ನಿರೀಕ್ಷಕ ಅನಂತಪದ್ಮನಾಭ, ಕೋಟ ಕಂದಾಯ ಅಧಿಕಾರಿ ರಾಜು, ಸಿ.ಆರ್.ಝಡ್. ಅಧಿಕಾರಿ ಸವಿತಾ ಖಾದ್ರಿ, ಮೀನುಗಾರಿಕೆ ಇಲಾಖೆಯ ದಿವಾಕರ ಖಾರ್ವಿ, ಕೋಡಿ ಗ್ರಾಮಸ್ಥರ ಪರವಾಗಿ ಮಹಾಬಲ ತಿಂಗಳಾಯ, ಲಕ್ಷ್ಮಣ ಸುವರ್ಣ, ಅಶೋಕ ತಿಂಗಳಾಯ, ಜಗನ್ನಾಥ ಅಮೀನ್, ಶಂಕರ್ ಬಂಗೇರ, ಉದಯ ತಿಂಗಳಾಯ, ಕೃಷ್ಣ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

ನಿರ್ಧಾರ ಬದಲಿಸದ ಗ್ರಾಮಸ್ಥರು

ಮೊದಲು ನಮ್ಮ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕೆಲಸಗಳು ನಡೆಯಲಿ. ಉಪ ಚುನಾವಣೆಯಲ್ಲಿ ನಾವೆಲ್ಲ ಒಮ್ಮತದ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತೇವೆ. ಹತ್ತಾರು ವರ್ಷಗಳಿಂದ ಇರುವ ಈ ಸಮಸ್ಯೆ ಬಗೆಹರಿದಿಲ್ಲ. ಐದಾರು ಜಿಲ್ಲಾಧಿಕಾರಿ ಬದಲಾವಣೆಯಾಗಿದ್ದಾರೆ. ನೀವು ಕಾಳಜಿಯಿಂದ ನಮ್ಮ ಸಮಸ್ಯೆ ಆಲಿಸಿದ್ದೀರಿ, ಪರಿಹಾರ ನಿಟ್ಟಿನಲ್ಲಿ ಪ್ರಾಮಾಣಿಕ ಕ್ರಮ ಕೈಗೊಳ್ಳುತ್ತೀರಿ ಎನ್ನುವ ಸಂಪೂರ್ಣ ಭರವಸೆ ಇದೆ. ತಹಸೀಲ್ದಾರ್ ಕಿರಣ್ ಗೋರಯ್ಯ ಕೂಡ ಉತ್ತಮವಾಗಿ ಸ್ಪಂದಿಸಿದ್ದಾರೆ. ಆದರೆ ಈ ಚುನಾವಣೆ ಬಹಿಷ್ಕಾರದ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಗ್ರಾಮಸ್ಥರಾದ ಜಗನ್ನಾಥ ಅಮೀನ್ ಮತ್ತು ಲಕ್ಷ್ಮಣ ಸುವರ್ಣ ಹೇಳಿದರು. ಈ ಬಗ್ಗೆ ಇನ್ನೊಮ್ಮೆ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಬೇಕು. ಸ್ವಯಂಪ್ರೇರಿತವಾಗಿ ನಾಮಪತ್ರ ಸಲ್ಲಿಸಲು ಮುಂದಾದವರಿಗೆ ಅಡ್ಡಿಪಡಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net