

ಕೋಟ: ಜಮಾಬಂದಿಯ ಮೂಲಕ ಗ್ರಾಪಂ ವ್ಯಾಪ್ತಿಯಲ್ಲಿ ನಡೆದ ಅಭಿವೃದ್ಧಿ ಕಾರ್ಯ, ಆಡಳಿತ ವ್ಯವಸ್ಥೆ ಕಾಮಗಾರಿಗಳ ಲೋಪ-ದೋಷಗಳ ಕುರಿತು ಮಾಹಿತಿ ಸಿಗುತ್ತದೆ. ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಭಾಗವಹಿಸಿ ಚರ್ಚೆ ನಡೆಸುವ ರೀತಿಯಲ್ಲೇ ಜಮಾಬಂದಿಯಲ್ಲೂ ಭಾಗವಹಿಸಿದರೆ ಆಡಳಿತ ವ್ಯವಸ್ಥೆ ಇನ್ನಷ್ಟು ಪಾರದರ್ಶಕಗೊಳಿಸಲು ಸಾಧ್ಯ ಎಂದು ಉಡುಪಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಹೇಳಿದರು.
ಕೋಡಿ ಗ್ರಾಪಂ ಜಮಾಬಂದಿಯಲ್ಲಿ ಗುರುವಾರ ಮಾತನಾಡಿದರು. ಗ್ರಾಪಂ ವ್ಯಾಪ್ತಿಯಲ್ಲಿ ನಡೆಯುವ ಕಾಮಗಾರಿಗಳ ಬಗ್ಗೆ ಅನುಮಾನ, ಸಮಸ್ಯೆಗಳಿದ್ದರೆ ಜಮಾಬಂದಿಯಲ್ಲಿ ಪ್ರಶ್ನಿಸಬಹುದು ಹಾಗೂ ಸಮರ್ಪಕ ಉತ್ತರ ಪಡೆಯಬಹುದು ಎಂದರು.
ಕೋಡಿ ಹೊಸಬೆಂಗ್ರೆಯಲ್ಲಿ ಸ್ಮಶಾನ ನಿರ್ಮಾಣಕ್ಕೆ ಕಾದಿರಿಸಿದ ಜಾಗದಲ್ಲಿ ಅಸಮಪರ್ಕ ಕಾಮಗಾರಿ ನಡೆದಿದ್ದು ಕಾಮಗಾರಿಗೆ ವಿನಿಯೋಗಿಸಿದ ಹಣ ಮರುಪಾವತಿಸುವಂತೆ 2022ರಲ್ಲಿ ಆದೇಶವಾಗಿದೆ. ಆದರೆ ಇದುವರೆಗೂ ಈ ಬಗ್ಗೆ ಕ್ರಮಕೈಗೊಂಡಿಲ್ಲ ಹಾಗೂ ಆ ಸ್ಥಳದಲ್ಲಿ ಸ್ಮಶಾನ ನಿರ್ಮಾಣಕ್ಕೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರು ಬೇಡಿಕೆ ಸಲ್ಲಿಸಿದರು.
ಗ್ರಾಪಂ ಅಧ್ಯಕ್ಷೆ ಗೀತಾ ಖಾರ್ವಿ, ಸದಸ್ಯರಾದ ಕೃಷ್ಣ ಪೂಜಾರಿ, ಅಂತೋನಿ ಡಿಸೋಜ, ಪ್ರಭಾಕರ ಮೆಂಡನ್ ಅವರು ಗ್ರಾಪಂ ವ್ಯಾಪ್ತಿಯ ವಿವಿಧ ಬೇಡಿಕೆ ಬಗ್ಗೆ ತಿಳಿಸಿದರು. ಜಮಾಬಂದಿ ಸಹಾಯಕ ಅಧಿಕಾರಿಯಾದ ಕರ್ಜೆ ಗ್ರಾಪಂ ಕಾರ್ಯದರ್ಶಿ ಜ್ಯೋತಿ ಶೆಟ್ಟಿ ಶಿಶು ಅಭಿವೃದ್ಧಿ ಇಲಾಖೆ ಪೂರ್ಣಿಮಾ ಹಾಗೂ ವಿವಿಧ ಇಲಾಖೆ ಪ್ರತಿನಿಧಿಗಳಾದ ಸುನೀಲ್, ಲಥೀಶ್ ಹಾಗೂ ಸಂಜೀವಿನಿ ಸಂಘದ ದೀಪಾ ಇದ್ದರು.
ಕಡಲತಡಿಯಲ್ಲಿ ಅಳವಡಿಸಿದ ಸೋಲಾರ್ ದೀಪದ ನಿರ್ವಹಣೆಯಾಗಿಲ್ಲ ಎಂದು ಗ್ರಾಮಸ್ಥರಾದ ಸುದಿನ ಹೇಳಿದರು,. ನಿರ್ವಹಣೆಗೆ ಅನುದಾನ ಲಭ್ಯವಿಲ್ಲ ಹಾಗೂ ಆ ಸ್ಥಳದಲ್ಲಿ ಬೀದಿದೀಪ ಅಗತ್ಯವಿಲ್ಲ ಎನ್ನುವ ಅಭಿಪ್ರಾಯ ವ್ಯಕ್ತವಾಯಿತು. ಹೊಸಬೆಂಗ್ರೆಯಲ್ಲಿ ಹೊಸ ರಸ್ತೆ ನಿರ್ಮಾಣ ಹಾಗೂ ಬೀದಿ ನಾಯಿಗಳ ನಿಯಂತ್ರಣಕ್ಕೆ ಹೆಚ್ಚಿನ ಅನುದಾನ ಮೀಸಲಿರಿಸುವಂತೆ ಬೇಡಿಕೆ ವ್ಯಕ್ತವಾಯಿತು. ಹಕ್ಕು ಪತ್ರ ಸಮಸ್ಯೆ ಬಗ್ಗೆ ಅಂಗನವಾಡಿ ಶಿಕ್ಷಕಿ ಯಮುನಾ ಹಾಗೂ ಸ್ಥಳೀಯರು ಗಮನ ಸೆಳೆದರು. ಗ್ರಾಪಂ ವ್ಯಾಪ್ತಿಯ ಕಸ ಹಾಗೂ ನೀರಿನ ಬಿಲ್ ಸಂಗ್ರಹಣೆಯಲ್ಲಿ ಹೆಚ್ಚಿನ ಪ್ರಗತಿ ಸಾಧಿಸಿದ ಕುರಿತು ಪಿಡಿಒ ರವೀಂದ್ರ ರಾವ್ ಮಾಹಿತಿ ನೀಡಿದರು.