

ಕುಂದಾಪುರ : ಕೋಡಿ ಕಡಲ ತೀರಕ್ಕೆ ಮೊಟ್ಟಮೊದಲು ಮೊಟ್ಟೆಯಿಡಲು ಬಂದ ೯೦ ಕೇಜಿ ತೂಕದ ಬಾರಿ ಕಡಲಾಮೆ ೧೫೪ ಮೊಟ್ಟೆಯಿಟ್ಟಿದ್ದು, ಅಷ್ಟೂ ಮೊಟ್ಟೆಗಳ ಕೋಡಿ ಪ್ರಾಥಮಿಕ ಆರೋಗ್ಯ ಘಟಕ ಬಳಿ ಹ್ಯಾಚರ್ ನಿರ್ಮಿಸಿ ರಕ್ಷಣೆ ಮಾಡಲಾಗಿದೆ.
ಮೊಟ್ಟೆಯಿಡುವುದಕ್ಕಾಗಿ ಭಾನುವಾರ ತಡರಾತ್ರಿ ಕೋಡಿ ಕಡಲ ತೀರಕ್ಕೆ ಬಂದ ಆಮೆಗೆ ನಾಯಿಗಳ ಇನ್ನಿಲ್ಲದ ಕಾಟ ನೀಡಿದ್ದರಿಂದ ಮೂರು ಗಂಟೆ ಕಾಲ ಪ್ರಸವವೇದನೆಯಿಂದ ಬಳಲಿ ಆಮೆ ಕಂಗಾಲಾಗಿತ್ತು. ನಾಯಿಗಳು ಕೂಗಾಟದಿಂದ ಎಚ್ಚೆತ್ತ ಸ್ಥಳೀಯ ನಿವಾಸಿಗಳು, ಕಿನಾರೆ ಫ್ರೆಂಡ್ಸ್ ಸದಸ್ಯರು ಆಮೆ ಮೊಟ್ಟೆಯಿಡುವ ಪ್ರಕ್ರಿಯೆ ಮುಗಿಯುವ ತನಕ ರಕ್ಷಣೆ ನೀಡಿದರು. ಆಮೆ ಮೊಟ್ಟೆಯಿಡುವ ಪ್ರಕ್ರಿಯೆ ಎರಡು ತಾಸಿಗೂ ಮಿಕ್ಕಿ ನಡೆದಿದ್ದು, ನಂತರ ಆಮೆ ಕಡಲು ಸೇರಿ ಕಣ್ಣರೆಯಾಯಿತು.
ಆಮೆ ಮೇಲೆ ದಾಳಿ ನಡೆಸುತ್ತಿದ್ದ ನಾಯಿಗಳ ಪರಿಸರ ನಿವಾಸಿಗಳಾದ ರಂಜಿತ್, ಅರುಣ್, ರವಿ, ನರಸಿಂಹ ಪೂಜಾರಿ, ದಾಳಿ ಹಿಮ್ಮೆಟ್ಟಿಸುವ ಜೊತೆ ಆರಣ್ಯ ಇಲಾಖೆ ಸ್ಥಳೀಯ ಸಿಬ್ಬಂದಿ ರಂಜಿತ್ ಗಮನಕ್ಕೆ ತಂದಿದ್ದರು. ಎಸ್‌ಎಫ್‌ಎಲ್ ಇಂಡಿಯಾ ಸದಸ್ಯರಾದ ದಿನೇಶ್ ಸಾರಂಗ, ವೆಂಕಟೇಶ್, ಬಾಬು ಮೊಗವೀರ, ಅಶೋಕ್ ಪೂಜಾರಿ, ಲಕ್ಷ್ಮಣ ಪೂಜಾರಿ ಪ್ರಾಥಮಿಕ ಆರೋಗ್ಯ ಘಟಕ ಬಳಿ ಹ್ಯಾಚರ್ ನಿರ್ಮಿಸಿ ಅಷ್ಟೂ ಮೊಟ್ಟೆಗಳ ರಕ್ಷಣೆ ಮಾಡಿದ್ದಾರೆ.
ಕಳೆದ ವಾರ ಮೊಟ್ಟೆಯಿಡಲು ಬಂದ ಕಡಲಾಮೆ ಮೇಲೆ ನಾಯಿಗಳು ದಾಳಿ ನಡೆಸಿದ್ದರಿಂದ ಆಮೆ ಸಾವಿಗೀಡಾಗಿದ್ದು, ಸತ್ತ ಆಮೆ ಹೊಟ್ಟೆಯಿಂದ ಜೀವಂತ ಮೊಟ್ಟೆಗಳ ರಕ್ಷಣೆ ಮಾಡಲಾಗಿತ್ತು, ಒಟ್ಟು ರಕ್ಷಣೆ ಮಾಡಿದ ೪೨ ಮೊಟ್ಟೆಗಳಲ್ಲಿ ೨೪ ಮೊಟ್ಟೆಗಳ ನಾಯಿ ಹ್ಯಾಚರಿಗೆ ನುಗ್ಗಿ ತಿಂದು ಹಾಕಿತ್ತು. ಕೋಡಿ ಕಡಲ ತೀರಕ್ಕೆ ಆಮೆಗಳು ಮೊಟ್ಟೆಯಿಡಲು ಬರವ ಪ್ರಸಕ್ತ ಕಾಲವಾಗಿದ್ದು, ಬೀದನಾಯಿಗಳ ಸಮಸ್ಯೆ ಗಂಭೀರವಾಗಿ ಪರಿಗಣಿಸಬೇಕು ಎಂದು ಸ್ವಯಂಸೇವಕರು ಒತ್ತಾಯಿಸಿದ್ದಾರೆ.