ಕೊಡೇರಿ ಸಮಸ್ಯೆಗೆ ಸಿಕ್ಕಿಲ್ಲ ಪರಿಹಾರ, ತೂಗುಗತ್ತಿಯಲ್ಲಿ ಎಂಟು ಸಾವಿರ ಜನರ ಬದುಕು

koderi new
Published on

ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ

ಸಮುದ್ರ ಯಾವಾಗ ಎಡವಟ್ಟು ಮಾಡುತ್ತದೋ ಎಂಬ ಆತಂಕದಿಂದಲೇ ಕೊಡೇರಿಯ ಮೀನುಗಾರರು ಜೀವನ ಸಾಗಿಸಬೇಕು. ದೋಣಿ ತುಂಬ ಮೀನು ತಂದರೂ ಮಾರಾಟ ಪ್ರಾಂಗಣಕ್ಕೆ ಹೋಗಲು ಮತ್ತೊಂದು ಸಾಹಸ. ಭಯ, ಆತಂಕ, ನೆಮ್ಮದಿಯಿಲ್ಲದೆ ಬದುಕೇ ಕಳೆದು ಹೋಗುತ್ತಿದೆ.
ಕೊಡೇರಿ ಬಂದರಿಗೆ ಹೇಳಿ ಮಾಡಿಸಿದ ಜಾಗ. ಪರಿಸರದ ಜನರ ಒತ್ತಾಯಕ್ಕೆ ಮಣಿದ ಸರ್ಕಾರ ಜಟ್ಟಿ, ಬ್ರೇಕ್‌ವಾಟರ್ ಕಾಮಗಾರಿಗೆ ಹಸಿರು ನಿಶಾನೆ ತೋರಿಸಿದೆ. ಆದರೆ ಅದು ಮೀನುಗಾರರ ಇಚ್ಛೆಯಂತೆ ಆಗದೆ ಅಧಿಕಾರಿಗಳಿಗೆ ಬೇಕಾದಲ್ಲಿ ಮಾಡುವ ಮೂಲಕ ಸ್ಥಳೀಯರ ಬದುಕಿಗೆ ಮೊದಲ ಪೆಟ್ಟು ಬಿದ್ದಿತ್ತು. ತಡೆಗೋಡೆ ಬದಲು ಹೊಳೆಗೆ ರಿವಿಟ್ಮೆಂಟ್ ಕಟ್ಟಿ ಅದೇ ತಡೆಗೋಡೆ ಎಂದು ನಂಬಿಸಿದರು. ಬ್ರೇಕ್‌ವಾಟರ್ ಕಾಮಗಾರಿ ಪೂರ್ಣವಾಗದೆ ಕಳೆದ ಮಳೆಗಾಲದಲ್ಲಿ ನಾಲ್ವರು ಮೀನುಗಾರರ ಪ್ರಾಣ ಕಳೆದುಕೊಂಡಿದ್ದರು.

ಕೊಡೇರಿ ಎಡಮಾವಿನಹೊಳೆಯಲ್ಲಿ 250 ದೋಣಿ ನಿಲ್ಲುತ್ತದೆ. ಮೀನುಗಾರಿಕೆಗೆ ತೆರಳಿದವರು ದಡ ಸೇರುವುದು ಎಡಮಾವಿನಹೊಳೆಯಲ್ಲಿ. ನದಿ ದಂಡೆಯಲ್ಲಿ ಎಕರೆಗಟ್ಟಲೆ ಜಾಗವಿದ್ದರೂ ಹೊಳೆ ದಂಡೆ ಮೂಲೆಯಲ್ಲಿ ಮೀನು ಹರಾಜು ಪ್ರಾಂಗಣ ಕಟ್ಟಿದ್ದರಿಂದ 500 ಮೀಟರ್ ಕ್ರಮಿಸಿ ಅಲ್ಲಿಗೆ ಸೇರಬೇಕು. ಮೀನು ವಿಕ್ರಯಿಸಬೇಕಿದ್ದರೆ ಸುತ್ತಿ ಬಳಸಿ 16 ಕಿ.ಮೀ. ಕ್ರಮಿಸಿ ಪ್ರಾಂಗಣ ಸೇರಬೇಕು. ಮೀನು ಮಾರಾಟದ ಮಹಿಳೆಯರು ದೋಣಿಯಲ್ಲಿ ಹೊಳೆ ದಾಟಿ ಮೀನು ಪಡೆದು ಮತ್ತೆ ದೋಣಿ ದಾಟಿ ಮಾರಾಟಕ್ಕೆ ಹೊರಡಬೇಕು.
ಶಿಕ್ಷಣ ಇಲಾಖೆಗೆ ಭೂಮಿ ದಾನ
ಎಡೆಮಾವಿನಹೊಳೆ ದಂಡೆ ಬಳಿ 11.90 ಸೆಂಟ್ಸ್ ಸರ್ಕಾರಿ ಜಾಗವಿದೆ. ಅದನ್ನು ಕೊಡೇರಿ ಶಾಲೆಗೆ ದಾನ ಮಾಡಲಾಗಿದೆ. ಶಾಲೆಗೆ ಸಾಕಷ್ಟು ಜಾಗವಿದ್ದರೂ ಮೀನು ಏಲಂ ಶೆಡ್ ಕಟ್ಟದೆ ಹೊಳೆ ದಂಡೆ ತುದಿಯಲ್ಲಿ ಪ್ರಾಂಗಣ, ಜಟ್ಟಿ ನಿರ್ಮಿಸಲಾಗಿದೆ. ಇದರಿಂದ ಮೀನುಗಾರರಿಗೆ ತೊಂದರೆಯಾಗಿದೆ.

ಜಟ್ಟಿ, ಪ್ರಾಂಗಣ ಮಾಡುತ್ತೇವೆ
ಪೂರ್ವ ಮತ್ತು ಪಶ್ಚಿಮದಲ್ಲಿ ಕೊಡೇರಿ, ಕಿರಿಮಂಜೇಶ್ವರ ಬಂದರು. ಎರಡೂ ಕಡೆ ಜಟ್ಟಿ ನಿರ್ಮಾಣಕ್ಕೆ 9.75 ಕೋಟಿ ಅಂದಾಜು ಮಂಜೂರಾತಿ ಬಾಕಿಯಿದೆ. ಕೊಡೇರಿ ಶಾಲೆ ಹಿಂಭಾಗದಲ್ಲಿ ಮೀನು ಹರಾಜು ಪ್ರಾಂಗಣ ನಿರ್ಮಿಸಲು 2.5 ಕೋಟಿ ರೂ. ಮಂಜೂರಾಗಿದ್ದು, ಯೋಜಕರು ಕೋರ್ಟ್‌ಗೆ ಹೋಗಿದ್ದರಿಂದ ತಡೆಯಾಗಿದೆ. ನ್ಯಾಯಾಲಯ ಕ್ಲಿಯರೆನ್ಸ್ ತೆಗದುಕೊಂಡು ಅನುದಾನ ಸಿಕ್ಕ ಕೂಡಲೇ ಪ್ರಾಂಗಣ, ವಿದ್ಯುತ್, ನೀರಿನ ವ್ಯವಸ್ಥೆ ಮಾಡಿಕೊಡಲಾಗುತ್ತದೆ ಎಂದು ಬಂದರು ಮತ್ತು ಮೀನುಗಾರಿಕೆ ಇಲಾಖೆ ಸಹಾಯಕ ಕಾರ‌್ಯನಿರ್ವಾಹಕ ಇಂಜಿನಿಯರ್ ಉದಯ ಕುಮಾರ್ ಶೆಟ್ಟಿ ವಿಜಯವಾಣಿಗೆ ತಿಳಿಸಿದ್ದಾರೆ.

ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ನಮ್ಮ ಕಷ್ಟ ಹೇಳಿಕೊಂಡು ಸಾಕಾಗಿದೆ. ಕೊಡೇರಿ ಬಂದರಿಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಬರೋದಿಲ್ಲ. ಶಾಲೆ ಹಿಂದುಗಡೆ ಇರುವ ಜಾಗದಲ್ಲಿ ಜಟ್ಟಿ ಹಾಗೂ ಮೀನು ಹರಾಜು ಪ್ರಾಂಗಣ ನಿರ್ಮಿಸಬೇಕು. ಎಡೆಮಾವಿನಹೊಳೆ ದಂಡೆಯುದ್ದಕ್ಕೂ ಸಮುದ್ರ ಕೊರೆತಕ್ಕೆ ಶಾಶ್ವತ ಪರಿಹಾರ ಬೇಕು. ಬೇಡಿಕೆಗೆ ಸ್ಪಂದಿಸದಿದ್ದರೆ ಎಲ್ಲ ಚುನಾವಣೆ ಬಹಿಷ್ಕರಿಸಬೇಕಾಗುತ್ತದೆ.
ಆನಂದ ಪೂಜಾರಿ
ಕಿರಿಮಂಜೇಶ್ವರ ಗ್ರಾಮ ಪಂಚಾಯಿತಿ ಸದಸ್ಯ

ಬ್ರೇಕ್‌ವಾಟರ್ ಉದ್ದ 200 ಮೀಟರ್ ವಿಸ್ತರಿಸಬೇಕು. ಉದ್ದ ಕಡಿಮೆ ಇರುವುದರಿಂದ ಮೀನುಗಾರಿಕೆಗೆ ತೆರಳಿದ ಬೋಟ್ ಲಂಗರು ಹಾಕಲು ಸಾಹಸಪಡಬೇಕಾಗುತ್ತದೆ. ಸಮುದ್ರ ಅಬ್ಬರ ಜಾಸ್ತಿಯಿದ್ದರೆ ದೋಣಿ ದಡಕ್ಕೆ ತರುವುದೇ ಸಾಹಸ.
ವೆಂಕಟೇಶ ಖಾರ್ವಿ
ಹಿರಿಯ ಮೀನುಗಾರ, ಕೊಡೇರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net