

ಬೈಂದೂರು: ಕೊಡೇರಿ ಕಿರು ಬಂದರಿನಲ್ಲಿ ಶನಿವಾರ ಮೀನು ಹರಾಜು ಪ್ರಕ್ರಿಯೆಯ ಸಂಬಂಧ ಉಪ್ಪುಂದ ಹಾಗೂ ಕೊಡೇರಿ ಭಾಗದ ಮೀನುಗಾರರ ನಡುವೆ ಘರ್ಷಣೆ ಉಂಟಾಗಿದ್ದು, ಪೊಲೀಸರು ಲಾಠಿ ಚಾರ್ಜ್ ನಡೆಸಿ ಗುಂಪು ಚದುರಿಸಿದ್ದಾರೆ.
ಮೀನುಗಾರಿಕೆ ಇಲಾಖೆಯು ಕೊಡೇರಿ ಬಂದರಿನ ಮೀನು ಹರಾಜು ಪ್ರಾಂಗಾಣದಲ್ಲಿ ಮೀನು ಹರಾಜು ಮಾಡಲು ಉಪ್ಪುಂದ, ಕೊಡೇರಿ ಹಾಗೂ ಮರವಂತೆ ಭಾಗದ ಮೀನುಗಾರರಿಗೆ ತಾತ್ಕಾಲಿಕ ಅನುಮತಿ ನೀಡಿತ್ತು, ಉಪ್ಪುಂದ ಭಾಗದ 100ಕ್ಕೂ ಹೆಚ್ಚು ದೋಣಿಗಳು ಶನಿವಾರ ಮಧ್ಯಾಹ್ನದ ಮೀನುಗಾರಿಕೆ ನಡೆಸಿ, ಎಡಮಾವಿನ ಹೊಳೆಯ ಮೂಲಕ ಮೀನು ಮಾರಾಟ ಮಾಡಲು ಬಂದರಿನ ಪ್ರಾಂಗಣ ಪ್ರವೇಶಿಸಿದರು. ಈ ವೇಳೆ ಕೊಡೇರಿ ಭಾಗದ ಮೀನುಗಾರರು ಇಲ್ಲಿನ ಪ್ರಾಂಗಣದಲ್ಲಿ ಮೂಲಸೌಕರ್ಯ ಕಲ್ಪಿಸದ ಹಾಗೂ ಕೊಡೇರಿ ಭಾಗದ ಮೀನುಗಾರರಿಗೆ ಅನುಕೂಲವಾಗುವಂತೆ ಎಡಮಾವಿನ ಹೊಳೆಯಲ್ಲಿ ಸೇತುವೆ ನಿರ್ಮಾಣ ಮಾಡುವವರೆಗೆ ಪ್ರಾಂಗಣದಲ್ಲಿ ಮೀನು ಹರಾಜಿಗೆ ಅವಕಾಶ ನೀಡುವುದಿಲ್ಲ ಎಂದು ಪ್ರತಿರೋಧ ವ್ಯಕ್ತಪಡಿಸಿದರು. ಎಡಮಾವಿನ ಹೊಳೆಯಲ್ಲಿ ಉಪ್ಪುಂದ ಭಾಗದ ದೋಣಿಗಳು ಸಂಚರಿಸದಂತೆ ತಮ್ಮ ದೋಣಿಯನ್ನು ಅಡ್ಡಲಾಗಿರಿಸಿ, ಮೀನು ಹರಾಜು ಪ್ರಕ್ರಿಯೆಗೆ ತಡೆಯೊಡ್ಡಿದರು.
ಕುಂದಾಪುರ ಎಎಸ್‌ಪಿ ಹರಿರಾಮ್ ಶಂಕರ ಅಗಮಿಸಿ, ಎರಡು ಭಾಗದ ಮೀನುಗಾರರ ನಡುವೆ ಮಾತುಕತೆ ನಡೆಸಿ ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನ ಮಾಡಿದ್ದರು. ಆದರೆ ನಮ್ಮ ಬೇಡಿಕೆ ಈಡೇರುವ ತನಕ ಮೀನು ಹರಾಜು ಪ್ರಾಂಗಣದಲ್ಲಿ ಮೀನು ಹರಾಜಿಗೆ ಅವಕಾಶ ಕಲ್ಪಿಸಿಕೊಡುವುದಿಲ್ಲ ಎಂದು ಕೊಡೇರಿ ಭಾಗದ ಮೀನುಗಾರರು ಪಟ್ಟು ಹಿಡಿದರು.
ಮಾತುಕತೆ ವಿಫಲ: ನಾಲ್ಕೈದು ತಾಸು ಕಾಲ ಉಪ್ಪುಂದ ಭಾಗದ ಮೀನುಗಾರರು ತಮ್ಮ ದೋಣಿಯಲ್ಲಿದ್ದ ಮೀನುಗಳನ್ನು ಖಾಲಿ ಮಾಡದೆ ನದಿಯಲ್ಲಿ ತಮ್ಮ ದೋಣಿಗಳನ್ನು ನಿಲ್ಲಿಸಿದ್ದರು. ಬಳಿಕ ತಹಸೀಲ್ದಾರ್ ಬಿ.ಪಿ.ಪೂಜಾರ್ ಭೇಟಿ ಆಗಮಿಸಿ ಮಾತುಕತೆ ನಡೆಸಿದರೂ ಪ್ರಯೋಜನವಾಗಲಿಲ್ಲ. ಸುಮಾರು 5 ತಾಸಿನವರೆಗೂ ಮೀನು ಹರಾಜಿಗೆ ಅವಕಾಶ ಕಲ್ಪಿಸದ ಹಿನ್ನೆಲೆಯಲ್ಲಿ, ಉಪ್ಪುಂದ ಭಾಗದ ಮೀನುಗಾರರು ದೋಣಿಯನ್ನು ಒಮ್ಮೆಲೆ ಮುನ್ನುಗ್ಗಿಸಿ ಅಡ್ಡಲಾಗಿರುವ ಕೊಡೇರಿ ಭಾಗದ ದೋಣಿ ಭೇದಿಸುವ ಪ್ರಯತ್ನ ಮಾಡಿದಾಗ ಎರಡು ಗುಂಪುಗಳ ನಡುವೆ ಘರ್ಷಣೆ ತಾರಕಕ್ಕೇರಿ ನದಿಯಲ್ಲಿಯೇ ಉದ್ವಿಗ್ನ ಸ್ಥಿತಿ ಉಂಟಾಯಿತು. ಮಧ್ಯೆ ಪ್ರವೇಶಿಸಿದ ಪೊಲೀಸರು ದೋಣಿ ಮೇಲೇರಿ ಲಾಠಿಚಾರ್ಜ್ ನಡೆಸಿ ಚದುರಿಸಿದರು.
ಇಲ್ಲಿ ಬಂದರು ನಿರ್ಮಾಣದ ಸಂದರ್ಭದ ಕೊಡೇರಿ ಭಾಗದ ಮೀನುಗಾರರಿಗೆ ಅನುಕೂಲವಾಗುವಂತೆ ಇಲ್ಲಿನ ಎಡಮಾವಿನ ಹೊಳೆಗೆ ಸಂಪರ್ಕ ಸೇತುವೆ ನಿರ್ಮಿಸಿಕೊಡುವ ಭರವಸೆ ನೀಡಿರುವುದಲ್ಲದೇ ಕಾಮಗಾರಿಗೂ ಚಾಲನೆ ನೀಡಿದ್ದರು. ಆದರೆ ಏಕಾಏಕಿ ಸೇತುವೆ ನಿರ್ಮಾಣ ಕಾಮಗಾರಿ ಸ್ಥಗಿತಗೊಳಿಸಲಾಗಿದೆ. ಶೀಘ್ರ ಸೇತುವೆ ಕಾಮಗಾರಿ ಆರಂಭಿಸಿ ಹಾಗೂ ಬಂದರು ಪ್ರದೇಶದಲ್ಲಿ ಎಲ್ಲ ರೀತಿಯ ಮೂಲ ಸೌಕರ್ಯ ಕಲ್ಪಿಸಿ ಆ ಬಳಿಕ ಇಲ್ಲಿ ಮೀನು ಹರಾಜಿಗೆ ಅವಕಾಶ ಕಲ್ಪಿಸಿಕೊಡಬೇಕಿತ್ತು. ಮೀನುಗಾರಿಕಾ ಇಲಾಖೆ ವಿವಾದಾಸ್ಪದ ಜಾಗದಲ್ಲಿ ತರಾತುರಿಯಲ್ಲಿ ಮೀನು ಹರಾಜಿಗೆ ಅವಕಾಶ ನೀಡುವ ಅಗತ್ಯವಿರಲಿಲ್ಲ.
-ಶುಕ್ರದಾಸ್ ಖಾರ್ವಿ, ಅಧ್ಯಕ್ಷ, ಟ್ರಾಲ್ ದೋಣಿ ಸಂಘ ಕೊಡೇರಿ
ಹರಾಜು ಪ್ರಾಂಗಣದಲ್ಲಿ ಮೀನು ಹರಾಜಿಗೆ ಸಂಬಂಧಿಸಿದಂತೆ ಕೊಡೇರಿ ಭಾಗದ ಮೀನುಗಾರರೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿದ್ದೆವು. ನೀವು ಇಲಾಖೆಯಿಂದ ಲಿಖಿತ ಆದೇಶ ಪ್ರತಿ ತನ್ನಿ, ಆ ಬಳಿಕ ಮೀನು ಹರಾಜು ಮಾಡಿ ಎಂದು ತಿಳಿಸಿದ್ದರು. ಅದರಂತೆ ಮೀನುಗಾರಿಕೆ ಇಲಾಖೆ ಷರತ್ತುಬದ್ಧವಾಗಿ ತಾತ್ಕಾಲಿಕವಾಗಿ ಮೀನು ಹರಾಜಿಗೆ ಆದೇಶಿಸಿದ್ದರು. ಆದರೆ ಕೊಡೇರಿ ಭಾಗದ ಮೀನುಗಾರರು ಕೆಲವೊಂದು ಬೇಡಿಕೆ ಮುಂದಿಟ್ಟು ಮೀನು ಹರಾಜಿಗೆ ತಡೆಯೊಡ್ಡುತ್ತಿದ್ದಾರೆ.
ವೆಂಕಟರಮಣ ಖಾರ್ವಿ, ಅಧ್ಯಕ್ಷರು, ರಾಣಿಬಲೆ ಮೀನುಗಾರರ ಒಕ್ಕೂಟ ಉಪ್ಪುಂದ
ಎರಡು ಭಾಗದ ಮೀನುಗಾರರ ಸಮಸ್ಯೆಗಳನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬಹುದು. ಯಾರು ಕಾನೂನು ಕೈಗೆತ್ತಿಕೊಂಡರೂ ಅದನ್ನು ನಿಭಾಯಿಸಲು ಪೊಲೀಸ್ ಇಲಾಖೆ ಸನ್ನದ್ಧವಾಗಿದೆ.
-ಕುಮಾರಚಂದ್ರ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ