

ಮಡಿಕೇರಿ: ಕೊಡವರ ಹೊಸ ವರ್ಷ ಎಡಮ್ಯಾರ್‌ನ್ನು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಮದೆನಾಡಿನ ಬೆಟ್ಟತ್ತೂರು ಗ್ರಾಮದಲ್ಲಿ ಅರ್ಥಪೂರ್ಣವಾಗಿ ಆಚರಿಸಿತು.
ಗ್ರಾಮದ ಕೂಪದಿರ ಎನ್.ಮೋಹನ್‌ರವರ ಗದ್ದೆಯಲ್ಲಿ ಭೂತಾಯಿಗೆ ವಿಧಿವತ್ತಾಗಿ ಪೂಜೆ ಸಲ್ಲಿಸಿದ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ, ಜೋಡೆತ್ತುಗಳ ಮೂಲಕ ಉಳುಮೆ ಮಾಡಿದರು. ಭೂತಾಯಿ ಹಾಗೂ ಆದಿಮಸಂಜಾತ ಕೊಡವ ಬುಡಕಟ್ಟು ಜನರ ನಡುವಿನ ಅವಿನಾಭಾವ ಸಂಬಂಧವನ್ನು ಪ್ರತಿಪಾದಿಸಿದರು. ಗಾಳಿಯಲ್ಲಿ ಗುಂಡು ಹಾರಿಸಿದರು, ಊರು ಮಂದ್‌ನಲ್ಲಿ ಹಿರಿಯರನ್ನು ಸ್ಮರಿಸಿದರು.
ನಂತರ ಮಾತನಾಡಿ, ಪ್ರಕೃತಿ ಆರಾಧಕರಾದ ಕೊಡವರ ವಿಶಿಷ್ಟವಾದ ಆಚರಣೆಯನ್ನು ವಿಶ್ವ ಮಟ್ಟಕ್ಕೆ ಪರಿಚಯಿಸುವ ಸಲುವಾಗಿ ಹೊಸ ವರ್ಷ ಎಡಮ್ಯಾರ್‌ನ್ನು ಸಿಎನ್‌ಸಿ ಸಂಘಟನೆ ಪ್ರತಿವರ್ಷ ಸಾರ್ವತ್ರಿಕವಾಗಿ ಆಚರಿಸಿಕೊಂಡು ಬರುತ್ತಿದ್ದು, ಇದು ೩೦ನೇ ವರ್ಷದ ಕಾರ್ಯಕ್ರಮವಾಗಿದೆ ಎಂದರು.
ನಮ್ಮ ಸಂಸ್ಕೃತಿ, ಪರಂಪರೆಯನ್ನು ಈ ರೀತಿಯಲ್ಲಿ ಪ್ರತಿಬಿಂಬಿಸುವುದರಿಂದ ಕೊಡವರ ಅಸ್ತಿತ್ವದ ಬಗ್ಗೆ ಇಡೀ ವಿಶ್ವಕ್ಕೆ ತಿಳಿಯಲಿದೆ. ಅತ್ಯಂತ ಸೂಕ್ಷ್ಮ ಆದಿಮಸಂಜಾತ ಕೊಡವರ ಸ್ಥಿತಿಗತಿಯ ಬಗ್ಗೆ ಅರಿವು ಮೂಡಲಿದ್ದು, ಹಕ್ಕು ಮತ್ತು ಸಂಸ್ಕೃತಿಯ ರಕ್ಷಣೆಗೆ ಸಹಕಾರಿಯಾಗಲಿದೆ ಎಂದು ತಿಳಿಸಿದ ಎನ್.ಯು.ನಾಚಪ್ಪ ಅವರು ಕೊಡವ ಲ್ಯಾಂಡ್ ಭೂರಾಜಕೀಯ ಸ್ವಾಯತ್ತತೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮಂಡಿಸಿದರು.
ಕೊಡವ ಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆ ಮತ್ತು ಸಂವಿಧಾನದ ಆರ್ಟಿಕಲ್ ೨೪೪ ಆರ್/ಡಬ್ಲ್ಯೂ ೬ನೇ ಮತ್ತು ೮ನೇ ಶೆಡ್ಯೂಲ್ ಅಡಿಯಲ್ಲಿ ಸ್ವ-ಆಡಳಿತ ಹಾಗೂ ಕೊಡವ ಜನಾಂಗದ ಆಂತರಿಕ ರಾಜಕೀಯ ಸ್ವ-ನಿರ್ಣಯದ ಹಕ್ಕುಗಳು ದೊರೆಯಬೇಕು. ಕೊಡವ ಬುಡಕಟ್ಟಿನ ಜನರನ್ನು ಕೊಡವ ಸೀಮೆಯ ಆದಿಮ ಬುಡಕಟ್ಟು ಜನಾಂಗ ಎಂದು ಗುರುತಿಸಬೇಕು. ಕೊಡವರ ಸಮಗ್ರ ಸಬಲೀಕರಣಕ್ಕಾಗಿ ಕೊಡವ ಬುಡಕಟ್ಟು ಜನಾಂಗವನ್ನು ಸಂವಿಧಾನದ ೩೪೦ ಮತ್ತು ೩೪೨ ನೇ ವಿಧಿಯಡಿಯಲ್ಲಿ ಎಸ್ಟಿ ಪಟ್ಟಿಗೆ ಸೇರಿಸಬೇಕು. ಶಾಸ್ತ್ರೀಯ ಪ್ರಾಚೀನ ಕೊಡವ ಥಕ್ಕ್ ಅಂದರೆ, ಕೊಡವ ಬುಡಕಟ್ಟಿನ ಮಾತೃಭಾಷೆಯನ್ನು ಸಂವಿಧಾನದ ೮ನೇ ಶೆಡ್ಯೂಲ್‌ನಲ್ಲಿ ಅಳವಡಿಸಬೇಕು. ಕೊಡವ ಸಂಸ್ಕೃತಿ ಮತ್ತು ಜಾನಪದ ಪರಂಪರೆಯನ್ನು ಯುನೆಸ್ಕೋದ ಅಮೂರ್ತ ಸಾಂಸ್ಕೃತಿಕ ಪರಂಪರೆಗಳ ಪಟ್ಟಿಯಲ್ಲಿ ಸೇರಿಸಬೇಕು ಎಂದು ಒತ್ತಾಯಿಸಿದರು.
ಡಾ.ಅಂಬೇಡ್ಕರ್ ಜಯಂತಿ: ಇದೇ ಸಂದರ್ಭ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ರವರ ಜಯಂತಿಯನ್ನು ಆಚರಿಸಿದ ಎನ್.ಯು.ನಾಚಪ್ಪ ಅವರು, ಡಾ.ಅಂಬೇಡ್ಕರ್ ಅವರನ್ನು ಸ್ಮರಿಸುವುದು ಮತ್ತು ಜಯಂತಿಯನ್ನು ಆಚರಿಸುವುದು ಸಂವಿಧಾನದ ಮಹಾನ್ ಶಿಲ್ಪಿಯ ಆತ್ಮಕ್ಕೆ ಸಲ್ಲಿಸುವ ಗೌರವವಾಗಿದೆ ಎಂದರು.
ಅಂಬೇಡ್ಕರ್ ಅವರು ವಿಶ್ವದಾದ್ಯಂತ ಕೊಡವ ಜನರಂತೆ ಅಳಿವಿನಂಚಿನಲ್ಲಿರುವ ಸೂಕ್ಷ್ಮ ಅಲ್ಪಸಂಖ್ಯಾತ ಬುಡಕಟ್ಟು ಜನಾಂಗಗಳ ನಿರಂತರ ಧ್ವನಿಯಾಗಿದ್ದಾರೆ. ಯಾವುದೇ ಪಕ್ಷಪಾತ ಅಥವಾ ಪೂರ್ವಾಗ್ರಹವಿಲ್ಲದೆ ಪ್ರತಿಯೊಂದು ಸಮುದಾಯ, ಗುಂಪು ಅಥವಾ ಬುಡಕಟ್ಟು ಜನರ ಹಕ್ಕುಗಳಿಗಾಗಿ ಸಂವಿಧಾನದಲ್ಲಿ ಜಾಗವನ್ನು ನೀಡಿದ್ದಾರೆ. ಡಾ.ಅಂಬೇಡ್ಕರ್ ಅವರು ರಚಿಸಿದ ಭಾರತೀಯ ಸಂವಿಧಾನವು ಕೊಡವ ಬುಡಕಟ್ಟು ಜನರ ಏಕೈಕ ಭರವಸೆಯ ಕಿರಣ ಮತ್ತು ನ್ಯಾಯಸಮ್ಮತವಾದ ಕೊಡವರ ಆಶಯಗಳನ್ನು ಸಾಧಿಸಲು ರಾಮಬಾಣವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕೂಪದಿರ ಮೋಹನ್, ಕೂಪದಿರ ಪುಷ್ಪಾ ಮುತ್ತಪ್ಪ, ಕೂಪದಿರ ಗಂಗವ್ವ, ಕೂಪದಿರ ಭವ್ಯ ಮಾಚಯ್ಯ, ಕೊಂಪ್ಳಿರ ಯಶವಂತ ಕುಮಾರ್, ಕೊಂಪ್ಳಿರ ನಯನಾ ಯಶವಂತ, ಕೂಪದಿರ ಸಾಬು, ಕೂಪದಿರ ಕಾವೇರಮ್ಮ, ಕೂಪದಿರ ವಿಹಾನ್, ವಿನು, ಪ್ರಣಮ್ ಕುಮಾರ್, ಕೆ.ಇರಾ ಜಗತ್ ಮತ್ತಿತರರು ಹಾಜರಿದ್ದರು.