

ವಿಜಯವಾಣಿ ಸುದ್ದಿಜಾಲ ಮಡಿಕೇರಿ
ಹಲ್ಲಿನ ಆರೋಗ್ಯ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸುವುದು ಅತ್ಯಗತ್ಯ ಎಂದು ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್ ಪ್ರಾಂಶುಪಾಲ ಡಾ.ಕೊಂಗೇಟಿರ ಪೊನ್ನಪ್ಪ ಹೇಳಿದರು.
ಕೊಡವಾಮೆರ ಕೊಂಡಾಟ ಸಂಘಟನೆಯ ತಿಂಗಕೋರ್ ಅರಿವು ಮಾಲಿಕೆ ಪ್ರಯುಕ್ತ ಶುಕ್ರವಾರ ರಾತ್ರಿ ಆಯೋಜಿಸಿದ್ದ ೯ನೇ ಗೂಗಲ್ ಮೀಟ್ ವೆಬಿನಾರ್‌ನಲ್ಲಿ ಪಾಲ್ಗೊಂಡು ಮಾತನಾಡಿ, ಮಾನವ ಆರೋಗ್ಯವಂತ ಜೀವನ ನಡೆಸುವಲ್ಲಿ ದೇಹದ ಎಲ್ಲಾ ಭಾಗಗಳು ಆರೋಗ್ಯಯುತವಾಗಿರುವುದು ಅನಿವಾರ್ಯ ಎಂದರು.
ಮನುಷ್ಯನ ಸೌಂದರ್ಯ ಅಡಗಿರುವ ಮುಖ ಭಾಗದ ನಿರ್ವಹಣೆ ಸಮರ್ಪಕವಾಗಿರಬೇಕು. ಮಾನವನ ಹಾವಭಾವ, ನೋವು- ನಲಿವು ವ್ಯಕ್ತ ಪಡಿಸುವ ಹಾಗೂ ಆಹಾರ ಪಚನ ಕ್ರಿಯೆಗೆ ಅತ್ಯಂತ ಅವಶ್ಯವಾಗಿರುವ ಬಾಯಿ ಮತ್ತು ಹಲ್ಲಿನ ಆರೋಗ್ಯ ಪಾಲಿಸುವುದು ಮುಖ್ಯ ಎಂದು ಹೇಳಿದರು.
ಮಗು ಜನಿಸಿದ ಕೆಲವು ತಿಂಗಳು ನಂತರ ಬರುವ ಮೊದಲ ಹಲ್ಲು ಕೂಡ ಆರೋಗ್ಯವಾಗಿ ಇರುವಂತೆಯೂ ಆ ನಂತರ ಬರುವ ಶಾಶ್ವತ ಹಲ್ಲುಗಳ ರಕ್ಷಣೆಗೆ ಕಟ್ಟುನಿಟ್ಟಿನ ಕ್ರಮ ಅನುಸರಿಸಬೇಕು. ಪ್ರತಿನಿತ್ಯ ಎರಡು ಬಾರಿ ಕಡ್ಡಾಯ ಹಲ್ಲುಜ್ಜುವುದು, ಆಹಾರ ಸೇವಿಸಿದ ತಕ್ಷಣ ಬಾಯಿ ಮುಕ್ಕಳಿಸುವುದು, ಅಂಟು ಪದಾರ್ಥ ಮತ್ತು ಅತೀ ಸಿಹಿ ತಿನಿಸು ತಿಂದ ತಕ್ಷಣ ಬಾಯಿ ಮುಕ್ಕಳಿಸಿ ಸ್ವಚ್ಛಗೊಳಿಸಿಕೊಂಡರೆ ಹಲ್ಲು ಆರೋಗ್ಯವಾಗಿರುತ್ತದೆ.
ತಂಬಾಕು ವಸ್ತು ಸೇವನೆಯಿಂದ ದೂರ ಇರುವುದರಿಂದಲೂ ಹಲ್ಲಿನ ಆರೋಗ್ಯ ಸಮರ್ಪಕವಾಗಿರುತ್ತದೆ. ಹಲ್ಲಿನ ನಿರ್ವಹಣೆಯಲ್ಲೂ ಹಲವಾರು ಮೂಢನಂಬಿಕೆ ಅನುಸರಿಸುತ್ತಿರುವುದು ಕಂಡು ಬರುತ್ತಿದೆ. ವೈಜ್ಞಾನಿಕವಾಗಿ ಕೆಲವೊಂದು ಆಧುನಿಕ ಶೈಲಿಯ ನಿರ್ವಹಣೆ ರೂಪಿ ಸಿಕೊಳ್ಳುವುದರ ಮೂಲಕ ಹಲ್ಲನ್ನು ಗಟ್ಟಿಮುಟ್ಟಾಗಿ ಇಟ್ಟುಕೊಳ್ಳಲು ಅನುಕೂಲವಾಗುತ್ತದೆ. ಹಲ್ಲಿನ ಸಮಸ್ಯೆ ಘೋಚರಿಸಿದ ತಕ್ಷಣ ದಂತ ವೈದ್ಯ ರನ್ನು ಸಂಪರ್ಕಿಸುವುದರ ಮೂಲಕ ಸಮಸ್ಯೆ ಆರಂಭದಲ್ಲಿಯೇ ಪರಿಹಾರ ಕಂಡುಕೊಳ್ಳಬಹುದು. ಹಳೆಯ ಸಮಸ್ಯೆಗಳಿಂದ ತೊಂದರೆ ಹೆಚ್ಚಾಗುವುದಲ್ಲದೆ, ಪರಿಹಾರವೂ ಸವಾಲಾಗುತ್ತದೆ ಎಂದರು.
ಕೊಡವಾಮೆರ ಕೊಂಡಾಟ ಸಂಘಟನೆ ಉಪಾಧ್ಯಕ್ಷ ಮಾಳೇಟಿರ ಅಜಿತ್ ಪೂವಣ್ಣ ಅಧ್ಯಕ್ಷತೆ ವಹಿಸಿದ್ದರು. ಸಂಘಟನೆ ಸ್ಥಾಪಕಾಧ್ಯಕ್ಷ ಚಾಮೆರ ದಿನೇಶ್ ಬೆಳ್ಯಪ್ಪ ಇದ್ದರು. ಬೊಟ್ಟಂಗಡ ಸುಮಂತ್ ಸೀತಮ್ಮ ನಿರೂಪಿಸಿದರು. ಶಿವಚಾಳಿಯಂಡ ಕಿಶೋರ್ ಬೋಪಣ್ಣ ಸ್ವಾಗತಿಸಿದರು. ಕುಂಞೀರ ಗಿರೀಶ್ ಭೀಮಯ್ಯ ವಂದಿಸಿದರು.