ಕೊಡವಾಮೆ ಬಾಳೋ ಪಾದಯಾತ್ರೆ: ಸೂಕ್ತ ಬಂದೋಬಸ್ತ್

sp
Published on

ಮಡಿಕೇರಿ: ಕೊಡವಾಮೆ ಬಾಳೋ ಪಾದಯಾತ್ರೆ ಫೆ.೭ ರಂದು ಮಡಿಕೇರಿ ನಗರಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚರಿಕಾ ಕ್ರಮವಾಗಿ ಕೊಡಗು ಜಿಲ್ಲಾ ಪೊಲೀಸ್ ಸೂಕ್ತ ಬಂದೋಬಸ್ತ್ ಮಾಡಲಾಗಿದೆ.

ಪೊಲೀಸ್ ಇಲಾಖೆಯ ಪ್ರಕಾರ ಪಾದಯಾತ್ರೆಯಲ್ಲಿ ಅಂದಾಜು ೧೫ ರಿಂದ ೨೫ ಸಾವಿರ ಜನ ಪಾಲ್ಗೊಳ್ಳುವ ಸಾಧ್ಯತೆ ಇದ್ದು, ಕೊಡಗು ಜಿಲ್ಲಾ ಪೊಲೀಸ್ ಹಾಗೂ ಹೊರ ಜಿಲ್ಲೆಗಳ ವಿವಿಧ ಘಟಕದಿಂದ ಅಧಿಕಾರಿ/ಸಿಬ್ಬಂದಿಗಳನ್ನು ಸಹ ನಿಯೋಜಿಸಲಾಗಿದೆ. ಬಂದೋಬಸ್ತ್ ಕರ್ತವ್ಯಕ್ಕಾಗಿ ೧, ಪೊಲೀಸ್ ಅಧೀಕ್ಷಕರು, ೧ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ೬ ಪೊಲೀಸ್ ಉಪಾಧೀಕ್ಷಕರು, ೧೮ ಪೊಲೀಸ್ ನಿರೀಕ್ಷಕರು, ೩೫ ಪೊಲೀಸ್ ಉಪನಿರೀಕ್ಷಕರು, ೫೫ ಸಹಾಯಕ ಪೊಲೀಸ್ ಉಪನಿರೀಕ್ಷಕರು, ೪೩೦ ಪೊಲೀಸ್ ಹೆಡ್ ಕಾನ್ಸೆಬಲ್/ಕಾನ್ಸ್‌ಟೇಬಲ್ಸ್, ೧೦೦ ಕೆ.ಎಸ್.ಆರ್.ಪಿ(೫ ಪ್ಲಾಟಿನ್) ಹಾಗೂ ೭೦ ಡಿಎಆರ್‌ಗಳನ್ನು ನೇಮಿಸಲಾಗಿದೆ.

ಇದರೊಂದಿಗೆ ೭ ರಂದು ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಬೆಳಿಗ್ಗೆ ೬ ರಿಂದ ರಾತ್ರಿ ೧೨ ಘಂಟೆವರೆಗೆ ಮಧ್ಯ ಮಾರಾಟವನ್ನು ನಿಷೇಧಿಸಲಾಗಿದೆ. ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವವರು ಶಾಂತಿಯುತವಾಗಿ ರಸ್ತೆಯ ಒಂದು ಬದಿಯಲ್ಲಿ ತೆರಳುವುದು. ಪಾದಯಾತ್ರೆಯ ಆಯೋಜಕರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ಆಗಮಿಸುವದರ ವಾಹನಗಳನ್ನು ಪಾರ್ಕಿಂಗ್ ನಿಗಧಿಪಡಿಸಿರುವ ಸ್ಥಳಗಳಲ್ಲಿ ಪಾರ್ಕಿಂಗ್ ಮಾಡುವ ಬಗ್ಗೆ ಕ್ರಮ ಕೈಗೊಳ್ಳುವುದು ಹಾಗೂ ಪಾದಯಾತ್ರೆಯೊಂದಿಗೆ ವಾಹನಗಳು ಬರದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ತಿಳಿಸಿದ್ದಾರೆ.

ಪಾದಯಾತ್ರೆಯಲ್ಲಿನ ಸ್ವಯಂ ಸೇವಕರು ಸಾರ್ವಜನಿಕರಿಗೆ ಹಾಗೂ ತುರ್ತು ಸೇವೆಗಳ ವಾಹನಗಳ ಸಂಚಾರಕ್ಕೆ ಅಡ್ಡಿಯಾಗದಂತೆ ನೋಡಿಕೊಳ್ಳಬೇಕು. ಪಾದಯಾತ್ರೆ ಸಮಯದಲ್ಲಿ ಎಲ್ಲಿಯು ರಸ್ತೆ ತಡೆ ಮಾಡದಂತೆ ಸ್ವಯಂ ಸೇವಕರು ನೋಡಿಕೊಳ್ಳಬೇಕು. ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಆಯೋಜಕರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೂಚನೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net