ಕೊಡವರ ಉಳಿವಿಗಾಗಿ ಕೊಡವಲ್ಯಾಂಡ್ ಹೋರಾಟ ಅಗತ್ಯ: ಜಗದೀಶ್ ಶೆಟ್ಟಿ

kakkada18
Published on

ಮಡಿಕೇರಿ: ಕೊಡವರ ಉಳಿವಿಗಾಗಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ನಡೆಸುತ್ತಿರುವ ಕೊಡವ ಲ್ಯಾಂಡ್ ಪರವಾದ ಹೋರಾಟಕ್ಕೆ ಸರ್ವರೂ ಬೆಂಬಲ ನೀಡಬೇಕೆಂದು ವಿರಾಟ್ ಹಿಂದೂಸ್ಥಾನ್ ಸಂಗಮ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಗದೀಶ್ ಶೆಟ್ಟಿ ಹೇಳಿದರು.


ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಮಡಿಕೇರಿ ಹೊರ ವಲಯದ ಕ್ಯಾಪಿಟಲ್ ವಿಲೇಜ್‌ನಲ್ಲಿ ಶುಕ್ರವಾರ ನಡೆದ ೨೯ನೇ ವರ್ಷದ ಕಕ್ಕಡ-೧೮ ಆಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.


ಅತ್ಯಂತ ಸೂಕ್ಷ್ಮ ಆದಿಮ ಸಂಜಾತ ಬುಡಕಟ್ಟು ಸಮುದಾಯದ ಕೊಡವರು ಮತ್ತು ಕೊಡವ ನೆಲೆ ಉಳಿಯಬೇಕಾದರೆ ಕೊಡವ ಲ್ಯಾಂಡ್ ಘೋಷಣೆ ಅಗತ್ಯವಾಗಿದೆ. ವಿಭಿನ್ನತೆಯಲ್ಲಿ ಏಕತೆಯನ್ನು ಸಾಧಿಸಿರುವ ಭಾರತ ದೇಶದಲ್ಲಿ ಹಿಂದೂ ಧರ್ಮದಡಿ ವಿಶಿಷ್ಟ ಆಚಾರ, ವಿಚಾರ, ಸಂಸ್ಕೃತಿಯನ್ನು ಅನುಸರಿಸುವ ಅನೇಕ ಸಮುದಾಯಗಳಿವೆ. ಇವುಗಳಲ್ಲಿ ಆದಿಮ ಸಂಜಾತ ಕೊಡವ ಬುಡಕಟ್ಟು ಸಮುದಾಯ ಕೂಡ ಒಂದು. ೧೯೫೬ ರವರೆಗೆ ಸ್ವತಂತ್ರ್ಯವಾಗಿ ಪ್ರತ್ಯೇಕವಾಗಿದ್ದ ಕೊಡವರ ಜನ್ಮಭೂಮಿ ಬಲವಂತ ಮತ್ತು ಕೊಡವರ ವಿರೋಧದ ನಡುವೆ ಕರ್ನಾಟಕದೊಂದಿಗೆ ವಿಲೀನವಾಯಿತು. ಅಂದಿನಿಂದ ಇಂದಿನವರೆಗೆ ಕೊಡವರು ದ್ವಿತೀಯ ದರ್ಜೆಯ ನಾಗರೀಕರಂತೆ ಕಷ್ಟಗಳನ್ನು ಅನುಭವಿಸುತ್ತಿದ್ದಾರೆ ಎಂದು ಜಗದೀಶ್ ಶೆಟ್ಟಿ ಆರೋಪಿಸಿದರು.


ಸುಮಾರು ೫೦೦ ವರ್ಷಗಳ ಹಿಂದೆ ಅಮೆರಿಕದಲ್ಲಿ ಮೂಲನಿವಾಸಿ ರೆಡ್ ಇಂಡಿಯನ್ಸ್ ನಾಶವಾದರು. ಅವರ ನೆಲೆಯನ್ನು ವಶಕ್ಕೆ ಪಡೆದ ಅಮೆರಿಕ ಇಂದು ಯುರೋಪಿಯನ್ನರ ಕೈಯಲ್ಲಿದೆ. ಬರ್ಮಾದಿಂದ ಬಂದ ಕೂಕಿಗಳು ಹಿಂದೂ ಧರ್ಮದಡಿ ಬರುವ ಮಣಿಪುರದ ಬುಡಕಟ್ಟು ಸಮುದಾಯ ಮೇಟಿಗಳಿಗೆ ನಿರಂತರ ಕಿರುಕುಳ ನೀಡುತ್ತಿದೆ. ಈಶಾನ್ಯ ಭಾಗದಲ್ಲೂ ಬುಡಕಟ್ಟು ಸಮುದಾಯ ಸಂಕಷ್ಟವನ್ನು ಎದುರಿಸುತ್ತಿದೆ. ಇದೇ ರೀತಿಯ ಬದುಕು ಆದಿಮಸಂಜಾತ ಕೊಡವರದ್ದಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.


ಡಾ.ಸುಬ್ರಮಣಿಯನ್ ಸ್ವಾಮಿ ಅವರು ಬೇಡಿಕೆ ನ್ಯಾಯ ಸಮ್ಮತವಾಗಿದ್ದರೆ ಮಾತ್ರ ಹೋರಾಟಗಾರರ ಬೆಂಬಲಕ್ಕೆ ನಿಲ್ಲುತ್ತಾರೆ. ಸಿಎನ್‌ಸಿಯ ಬೇಡಿಕೆಗಳಲ್ಲಿ ಸತ್ಯಾಂಶ ಇದೆ ಎನ್ನುವ ಕಾರಣಕ್ಕೆ ಸ್ವಾಮಿ ಬೆಂಬಲವಾಗಿ ನಿಂತಿದ್ದಾರೆ. ಒಂದು ವಿಚಾರ ಸತ್ಯವೆಂದು ದೃಢವಾದಲ್ಲಿ ಅದನ್ನು ಕೈಗೆತ್ತಿಕೊಂಡು ಗುರಿ ಸಾಧಿಸುವವರೆಗೆ ಮತ್ತು ತಾರ್ತಿಕ ಅಂತ್ಯ ಹಾಡುವವರೆಗೆ ಬಿಡುವುದಿಲ್ಲ. ಇದು ಡಾ.ಸುಬ್ರಮಣಿಯನ್ ಸ್ವಾಮಿ ಅವರ ಜಾಯಮಾನವಾಗಿದೆ. ಕರ್ನಾಟಕ ರಾಜ್ಯದಡಿ, ಭಾರತದ ಸಂವಿಧಾನದ ಆಶಯಕ್ಕೆ ಪೂರಕವಾಗಿ ಸಿಎನ್‌ಸಿ ಸಂಘಟನೆ ನ್ಯಾಯ ಸಮ್ಮತವಾದ ಹೋರಾಟ ನಡೆಸುತ್ತಿದೆ ಎಂದರು.


ಕಕ್ಕಡ-೧೮ ಆಚರಣೆಯ ನೇತೃತ್ವ ವಹಿಸಿ ಮಾತನಾಡಿದ ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು.ನಾಚಪ್ಪ, ಕೊಡವಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆಯ ಸ್ವಯಂ ಆಡಳಿತ ನೀಡಬೇಕು. ಕೊಡವರಿಗೆ ಎಸ್‌ಟಿ ಟ್ಯಾಗ್ ಘೋಷಿಸಬೇಕು. ಆರ್ಟಿಕಲ್ ೨೪೪ನೇ ವಿಧಿ ಮತ್ತು ೬ ಮತ್ತು ೮ನೇ ಶೆಡ್ಯೂಲ್ ಪ್ರಕಾರ ಆಂತರಿಕ ರಾಜಕೀಯ ಸ್ವ-ನಿರ್ಣಯದ ಹಕ್ಕು ಒದಗಿಸಬೇಕು. ಕೊಡವ ಬುಡಕಟ್ಟು ವಿಶಿಷ್ಟ ಸಾಂಸ್ಕೃತಿಕ ಪರಂಪರೆಯನ್ನು ಯುನೆಸ್ಕೋದ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪಟ್ಟಿಗೆ ಸೇರಿಸಬೇಕು. ಆದಿಮಸಂಜಾತ ಜನಾಂಗಗಳ ಹಕ್ಕುಗಳ ಸಂರಕ್ಷಣೆಗಾಗಿ ವಿಶ್ವ ರಾಷ್ಟ್ರ ಸಂಸ್ಥೆ ಯುಎನ್‌ಒ ಒಡಂಬಡಿಕೆಯಂತೆ ಅಂತರಾಷ್ಟ್ರೀಯ ಕಾನೂನಿನಡಿಯಲ್ಲಿ ಕೊಡವರ ಹಕ್ಕುಗಳನ್ನು ಘೋಷಿಸಬೇಕು ಮತ್ತು ಪೋಷಿಸಬೇಕು ಎಂದು ಹಕ್ಕೊತ್ತಾಯ ಮಂಡಿಸಿದರು.


ಸಭೆ ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿ ವಿರುದ್ಧ ಪ್ರತಿಜ್ಞಾ ವಿಧಿ ಸ್ವೀಕರಿಸಿತು. ಅಲ್ಲದೆ ಸಿಎನ್‌ಸಿ ಯ ಬೇಡಿಕೆಗಳ ಪರ ನಿರ್ಣಯ ಕೈಗೊಂಡಿತು. ಕಾರ್ಯಕ್ರಮದ ಆರಂಭದಲ್ಲಿ ಕೊಡವ ಗುರುಕಾರೋಣರನ್ನು ಸ್ಮರಿಸಿ ಪ್ರಾರ್ಥಿಸಲಾಯಿತು ಮತ್ತು ಕಕ್ಕಡ-೧೮ರ ವಿಶೇಷ ಖಾದ್ಯಗಳನ್ನು ಅರ್ಪಿಸಲಾಯಿತು. ಮೆರವಣಿಗೆ ಮೂಲಕ ತೆರಳಿ ಮಂದ್‌ಗೆ ಪ್ರದಕ್ಷಿಣೆ ಬರಲಾಯಿತು. ಭತ್ತದ ಗದ್ದೆಯಲ್ಲಿ ಸಾಂಪ್ರದಾಯಿಕ ನಾಟಿ ಕಾರ್ಯ ಮಾಡಲಾಯಿತು. ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಕಕ್ಕಡ-೧೮ ರ ಸಂಭ್ರಮಕ್ಕೆ ಚಾಲನೆ ನೀಡಲಾಯಿತು.


ಕಾರ್ಯಕ್ರಮದಲ್ಲಿ ಕಲಿಯಂಡ ಮೀನಾ ಪ್ರಕಾಶ್, ಬೊಪ್ಪಂಡ ಬೊಳ್ಳಮ್ಮ ನಾಣಯ್ಯ, ಪಟ್ಟಮಾಡ ಲಲಿತಾ ಗಣಪತಿ, ನಂದೇಟಿರ ಕವಿತಾ, ಬೊಟ್ಟಂಗಡ ಸವಿತ, ಚೋಳಪಂಡ ಜ್ಯೋತಿ ನಾಣಯ್ಯ, ಅರೆಯಡ ಸವಿತಾ, ಲೆಫ್ಟಿನೆಂಟ್ ಕರ್ನಲ್ ಬಿ.ಎಂ.ಪಾರ್ವತಿ, ನಂದಿನೆರವಂಡ ನಿಶ ಸೇರಿದಂತೆ ಕೊಡವ ಸಮುದಾಯ ಬಾಂಧವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net