

ವಿಜಯವಾಣಿ ಸುದ್ದಿಜಾಲ ಮಡಿಕೇರಿ
ಕರ್ನಾಟಕ ರಾಜ್ಯದ ಅಧಿಕೃತ ಭಾಷೆಯನ್ನಾಗಿ ಕೊಡವ ಮತ್ತು ತುಳು ಭಾಷೆಯನ್ನು ಘೋಷಣೆ ಮಾಡುವಂತೆ ಬುಡಕಟ್ಟು ಕೊಡವ ಭಾಷಾ ಕಾರ್ಯಕರ್ತ ನೆರಪಂಡ ಪ್ರತೀಕ್ ಪೊನ್ನಣ್ಣ ರಾಜ್ಯಪಾಲರಾದ ಡಾ.ತಾವರ್ ಚಂದ್ ಗೆಹ್ಲೋಟ್ ಅವರಿಗೆ ಮನವಿ ಸಲ್ಲಿಸಿದ್ದಾರೆ. ರಾಜಭವನ ದಲ್ಲಿ ಸೋಮವಾರ ರಾಜ್ಯಪಾಲರನ್ನು ಖುದ್ದು ಭೇಟಿ ಮಾಡುವುದರ ಮೂಲಕ ಗಮನ ಸೆಳೆದಿದ್ದಾರೆ.
ರಾಜ್ಯಪಾಲರನ್ನು ಭೇಟಿ ಮಾಡಿ ೨೦ ನಿಮಿಷ ಅಧಿಕೃತ ಭಾಷೆಯನ್ನಾಗಿ ಘೋಷಿಸುವ ವಿಚಾರದ ಕುರಿತು ಚರ್ಚಿಸಲಾಗಿದೆ. ಈ ಬಗ್ಗೆ ಸರ್ಕಾರ ದ ಗಮನ ಸೆಳೆಯುವ ಭರವಸೆ ನೀಡಿದ್ದಾರೆ. ರಾಜ್ಯಪಾಲರ ಆತ್ಮೀಯತೆ ಬಹಳ ಇಷ್ಟವಾಯಿತು. ಒಬ್ಬ ಸಾಮಾನ್ಯ ರೈತನ ಮಗನನ್ನು ಕೂಡ ಭೇಟಿ ಮಾಡಲು ಅವಕಾಶ ನೀಡಿರುವುದಕ್ಕೆ ಬಹಳ ಸಂತೋಷವಾಯಿತ್ತೆಂದು ಪ್ರತೀಕ್ ಪೊನ್ನಣ್ಣ ಹೇಳಿದ್ದಾರೆ.
ಬುಡಕಟ್ಟು ಕೊಡವ ಜನಾಂಗದ ಕೊಡವ ತಕ್ಕ್ ಅನ್ನು ಕನ್ನಡ ಭಾಷೆಯೊಂದಿಗೆ ರಾಜ್ಯದ ಅಧಿಕೃತ ಭಾಷೆಯನ್ನಾಗಿ ಘೋಷಿಸಬೇಕು. ಕೊಡವ ತಕ್ಕ್ ಅನ್ನು ಕೊಡಗಿನಲ್ಲಿ ನೆಲೆಸಿರುವ ಬುಡಕಟ್ಟು ಸಮುದಾಯಕ್ಕೆ ಸೇರಿದ ೧೮ ಮೂಲನಿವಾಸಿ ಜನಾಂಗದವರ ಮಾತೃಭಾಷೆಯಾಗಿದೆ.
ಯುನೆಸ್ಕೋ ವರದಿ ಪ್ರಕಾರ ಅವನತ್ತಿಯಂಚಿನಲ್ಲಿರುವ ಭಾಷೆಗಳ ಪೈಕಿ ಒಂದಾಗಿದೆ. ೨ ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಭಾಷೆ ಯಾಗಿದೆ. ಸಂವಿಧಾನದ ೩೪೫, ೩೪೭ನೇ ವಿಧಿ ಅನ್ವಯ ರಾಜ್ಯದ ಅಧಿಕೃತ ಭಾಷೆಯನ್ನಾಗಿ ಘೋಷಿಸಲು ಮುಖ್ಯಮಂತ್ರಿ ಹಾಗೂ ರಾಷ್ಟ್ರಪತಿ ಗಮನ ಸೆಳೆಯಲಾಗಿದೆ. ಸಂವಿಧಾನದ ೨೧೩(೧) ರನ್ವಯ ಕೊಡವ ಮತ್ತು ತುಳು ಭಾಷೆಯನ್ನು ರಾಜ್ಯದ ಅಧಿಕೃತ ಭಾಷೆಯನ್ನಾಗಿ ಘೋಷಿ ಸಬೇಕೆಂದು ಪ್ರತೀಕ್ ಪೊನ್ನಣ್ಣ ಮನವಿ ಮಾಡಿದ್ದಾರೆ.