ಕೊಡವ ಎಸ್ಪಿ ಕೆಜಿಬಿಗೆ ಬೇಡ

a.s. ponnanna
Published on

ಮಡಿಕೇರಿ: ಕೊಡವನೊಬ್ಬ ಪೊಲೀಸ್ ವರಿಷ್ಠಾಧಿಕಾರಿಯಾಗಿ ಬರುವುದು ಶಾಸಕ ಕೆ.ಜಿ. ಬೋಪಯ್ಯಗೆ ಇಷ್ಟವಿರಲಿಲ್ಲ. ಈ ಹಿನ್ನೆಲೆಯಲ್ಲಿ ಕೊಡಗು ಎಸ್ಪಿ ಹುದ್ದೆಗೆ ಎಂ.ಎ. ಅಯ್ಯಪ್ಪ ನೇಮಕ ಮಾಡುವ ಪ್ರಕ್ರಿಯೆ ವೇಳೆ ತಡೆಯುವ ಪ್ರಯತ್ನ ನಡೆಸಿದ್ದಾರೆಂದು ಕೆಪಿಸಿಸಿ ಕಾನೂನು ಘಟಕ ಅಧ್ಯಕ್ಷ ಎ.ಎಸ್. ಪೊನ್ನಣ್ಣ ಆರೋಪಿಸಿದ್ದಾರೆ.

ಬೋಪಯ್ಯ ಅವರಿಗೆ ಸವಾಲು ಹಾಕುತ್ತೇನೆ. ಕೊಡವ ಎಸ್ಪಿ ಬರಬಾರದೆಂದು ವಿರೋಧಿಸಿದ್ದನ್ನು ಇಲ್ಲ ಎಂದು ಆತ್ಮಸಾಕ್ಷಿ ಒಪ್ಪುವಂತೆ ಹೇಳಲಿ. ಎಸ್ಪಿಯಾಗಿ ಮುಂದುವರಿಯಬಾರದೆಂದು ನಿರಂತರವಾಗಿ ಕಿರುಕುಳ ನೀಡುತ್ತಾ ಬಂದಿದ್ದಾರೆ. ಈಗ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.

ಇದುವರೆಗೂ ಎಸ್ಪಿ ವರ್ಗಾವಣೆಗೆ ಒತ್ತಾಯಿಸಿಲ್ಲ. ಕಾವೇರಿ ಮಾತೆ, ಕೊಡವತಿಯರ ಅವಹೇಳನ ಮಾಡಿದ ಆರೋಪಿ ಬಂಧಿಸಿದ ಕ್ರಮಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದ್ದೇವೆ. ಆದರೆ, ಇವರು ಅಂದಿನಿಂದ ಕಿರುಕುಳ ಹೆಚ್ಚು ಮಾಡಿದ್ದಾರೆ. ಷಡ್ಯಂತ್ರದ ಭಾಗವಾಗಿ ಮೊಟ್ಟೆ ಎಸೆತ ಪ್ರಕರಣ ಬಳಸಿಕೊಂಡು ವರ್ಗಾವಣೆ ಮಾಡಿಸುವ ಪ್ರಯತ್ನದಲ್ಲಿದ್ದಾರೆಂದು ಆರೋಪಿಸಿದರು.

ಶಾಸಕರ ಶಿಫಾರಸ್ಸಿನ ಮೇಲೆ ಬಂಧಿರುವ ಡಿವೈಎಸ್ಪಿ, ಸರ್ಕಲ್ ಇನ್ಸ್‌ಪೆಕ್ಟರ್ ಅವರ ಸೂಚನೆಯಂತೆ ಆ.೧೮ ರಂದು ನಡೆದುಕೊಂಡಿದ್ದಾರೆ. ಇದರೊಂದಿಗೆ ಎಸ್ಪಿ ಬಲಿ ಮಾಡುವ ಪ್ರಯತ್ನ ನಡೆದಿದೆ. ವರ್ಗಾವಣೆ ಮಾಡುವ ಶಕ್ತಿ ನಮಗಿಲ್ಲ. ಈ ವಿಚಾರದ ಬಗ್ಗೆ ಚರ್ಚೆ ನಡೆಯುತ್ತಿ
ರುವುದು ಕೂಡ ದೊಡ್ಡ ಪಿತೂರಿ ಎಂದು ದೂಷಿಸಿದರು.

ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ಬಂದಿರುವ ಕೊಡಗಿನ ಯುವಕ ಎಸ್ಪಿ ಆಗಿರುವುದು ನಮಗೆ ಹೆಮ್ಮೆ. ಅವರ ಕಾರ್ಯವೈಖರಿ ಪ್ರಶಂಸಿಸುತ್ತಾ ಬಂದಿದ್ದೇವೆ ಎಂದು ಎ.ಎಸ್. ಪೊನ್ನಣ್ಣ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net