

ಮಡಿಕೇರಿ:
ಕೊಡವ ಜನಾಂಗದ ಹೆಸರಿನಲ್ಲಿ ಅಸಂಬದ್ಧ ಹೇಳಿಕೆಗಳನ್ನು ನೀಡುವ ಮೂಲಕ ಜನಾಂಗಕ್ಕೆ ಮುಜುಗರ ಉಂಟು ಮಾಡುವವರಿಗೆ ಹಾಗೂ ಅವರುಗಳು ನೀಡುವ ಹೇಳಿಕೆಯನ್ನು ವೈಯಕ್ತಿಕ ಎಂದು ಭಾವಿಸಿ, ಜನಾಂಗದ ಮೇಲೆ ಇಲ್ಲಸಲ್ಲದ ಹೇಳಿಕೆಗಳನ್ನು ನೀಡುವ ಮೂಲಕ ಜನಾಂಗದ ಘನತೆಗೆ ಕುತ್ತು ತರುವವರ ಮೇಲೆ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಕೊಡವ ಜನಾಂಗದ ಮಾತೃ ಸಂಸ್ಥೆ ಅಖಿಲ ಕೊಡವ ಸಮಾಜ ಎಚ್ಚರಿಸಿದೆ.
ವಿರಾಜಪೇಟೆಯಲ್ಲಿರುವ ಅಖಿಲ ಕೊಡವ ಸಮಾಜದ ಕೇಂದ್ರ ಕಚೇರಿಯಲ್ಲಿ ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ ಅಧ್ಯಕ್ಷತೆಯಲ್ಲಿ ಶುಕ್ರವಾರನಡೆದ ತುರ್ತು ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ.
ಕೊಡವ ಜನಾಂಗದ ಕೆಲವರು ತಮ್ಮ ತಮ್ಮ ಸಂಘಟನೆಗಳು ಹಾಗೂ ತಾವು ಗುರುತಿಸಿಕೊಂಡಿರುವ ರಾಜಕೀಯ ಪಕ್ಷಗಳ ಮೂಲಕ ಹೇಳಿಕೆ ನೀಡುವಾಗ ಜನಾಂಗಕ್ಕೆ ಮುಜುಗರ ಉಂಟುಮಾಡುವ ರೀತಿಯಲ್ಲಿ ಅಸಂಬದ್ಧ ಹೇಳಿಕೆಗಳನ್ನು ನೀಡುತ್ತಿದ್ದು, ಇದರಿಂದ ಇತರ ಜನಾಂಗ ಕೊಡವ ಜನಾಂಗವನ್ನು ಗೇಲಿ ಮಾಡುವ ಹಂತಕ್ಕೆ ತಲುಪಿದೆ. ನಮ್ಮವರೇ ನೀಡುತ್ತಿರುವ ಒಂದೊಂದು ಅಸಂಬದ್ಧ ಹೇಳಿಕೆಗಳಿಂದ ಜನಾಂಗ ಮುಜುಗರಕ್ಕೀಡಾಗುವ ಪ್ರಸಂಗ ಎದುರಾಗಿರುವುದು ದುರಂತ. ಈ ಕೂಡಲೇ ನಮ್ಮ ಜನಾಂಗದ ಪ್ರಮುಖರು ಕೊಡವ ಜನಾಂಗದ ಹೆಸರಿನಲ್ಲಿ ಅಸಂಬದ್ಧ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಬೇಕಿದೆ ಎಂಬ ಸ್ಪಷ್ಟ ಸಂದೇಶವನ್ನು ಸಮಾಜಕ್ಕೆ ರವಾನಿಸಲು ಸಭೆಯಲ್ಲಿ ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು. ಯಾರೋ ವೈಯಕ್ತಿಕವಾಗಿ ನೀಡುವ ಹೇಳಿಕೆಗಳಿಗೆ ಇದು ಜನಾಂಗದ ಹೇಳಿಕೆ ಎಂಬಂತೆ ಇತರ ಜನಾಂಗ ಕೂಡ ಕೊಡವ ಜನಾಂಗದ ವಿರುದ್ಧ ಹರಿಹಾಯುತ್ತಿದ್ದು, ಬಾಯಿಗೆ ಬಂದಂತೆ ಜನಾಂಗವನ್ನು ನಿಂದಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿದ್ದು ಅವರುಗಳ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ಕೂಡ ಅಖಿಲ ಕೊಡವ ಸಮಾಜ ನೀಡಿದೆ.
ಜನಾಂಗದ ಯಾವುದೇ ವ್ಯಕ್ತಿಗಳು ಅಥವಾ ಅವರು ಪ್ರತಿನಿಧಿಸುವ ಸಂಘ ಸಂಸ್ಥೆ ಅಥವಾ ರಾಜಕೀಯ ಪಕ್ಷಗಳಡಿಯಲ್ಲಿ ನೀಡುವ ಹೇಳಿಕೆಗಳು ಅವರ ವೈಯಕ್ತಿಕ ಹೇಳಿಕೆ ಹೊರತು ಅದು ಸಂಪೂರ್ಣ ಜನಾಂಗದ ಹೇಳಿಕೆ ಅಲ್ಲ ಎಂಬುದನ್ನು ಇತರ ಜನಾಂಗ ಕೂಡ ಮನದಟ್ಟು ಮಾಡಿಕೊಳ್ಳಬೇಕಿದೆ. ಜನಾಂಗದ ಪ್ರತಿನಿಧಿಗಳು ಯಾರೇ ಇರಲಿ ಜನಾಂಗದ ಗೌರವವನ್ನು ಎತ್ತಿಹಿಡಿಯುವ ಹೇಳಿಕೆಗಳನ್ನು ನೀಡಬೇಕು ಹೊರತು ಅಸಂಬದ್ಧ ಹೇಳಿಕೆಗಳನ್ನು ನೀಡುವ ಮೂಲಕ ಜನಾಂಗ ತಲೆ ತಗ್ಗಿಸುವಂತಹ ಹೇಳಿಕೆ ನೀಡಿದರೆ ಮುಂದಾಗುವ ಕಷ್ಟ ನಷ್ಟಕ್ಕೆ ಅವರೇ ಹೊಣೆಗಾರರು ಹೊರತು ಜನಾಂಗವಲ್ಲ ಎಂಬ ಸ್ಪಷ್ಟ ಸಂದೇಶವನ್ನು ಅಖಿಲ ಕೊಡವ ಸಮಾಜ ನೀಡಿದೆ.
ಈ ಸಂದರ್ಭದಲ್ಲಿ ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ, ಅಖಿಲ ಕೊಡವ ಸಮಾಜ ಉಪಾಧ್ಯಕ್ಷ ಅಜ್ಜಿಕುಟ್ಟೀರ ಸುಬ್ರಮಣಿ ಮಾದಯ್ಯ, ಖಜಾಂಚಿ ಮಂಡೇಪಂಡ ಸುಗುಣ ಮುತ್ತಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.