ಪಾಲಕರು ಮಕ್ಕಳೊಂದಿಗೆ ಕೊಡವ ಭಾಷೆ ಮಾತನಾಡಿ; ಕೆ.ಎಸ್.ದೇವಯ್ಯ

WhatsApp Image 2021-03-18 at 2.11.28 PM
Published on

ಮಡಿಕೇರಿ: ಪಾಲಕರು ತಮ್ಮ ಮಕ್ಕಳೊಂದಿಗೆ ಕೊಡವ ಭಾಷೆ ಮಾತನಾಡಿ ಕೊಡವ ಭಾಷೆಯ ಬೆಳವಣಿಗೆಗೆ ಪ್ರೋತ್ಸಾಹಿಸಬೇಕು ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಕೊಂಗಂಡ ಎಸ್.ದೇವಯ್ಯ ಕಿವಿ ಮಾತು ಹೇಳಿದರು.

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಭಾರತೀಯ ವಿದ್ಯಾಭವನ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಕೊಡವ ಕಿರುನಾಟಕ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೊಡವ ಭಾಷೆಯನ್ನ ಮಕ್ಕಳೊಂದಿಗೆ ಪಾಲಕರು ಹೆಚ್ಚಾಗಿ ಮಾತನಾಡಬೇಕು. ಆದರೆ ಪ್ರಸ್ತುತ ಸನ್ನಿವೇಶದಲ್ಲಿ ಬಹುತೇಕ ಕಡೆ ಪಾಲಕರೆ ತಮ್ಮ ಮಕ್ಕಳ ಜತೆ ಇಂಗ್ಲೀಷ್‌ನಲ್ಲಿ ಮಾತನಾಡುವುದು ಕಂಡು ಬರುತ್ತಿದೆ. ಇದು ವಿಷಾದಕರ. ಮಕ್ಕಳಲ್ಲಿ ಮಾತೃ ಭಾಷೆಯ ಬಗ್ಗೆ ಅಭಿಮಾನ ಮೂಡಿಸಬೇಕಾದ ತಂದೆ ತಾಯಿಗಳೇ ತಮ್ಮ ಮಕ್ಕಳೊಂದಿಗೆ ಇಂಗ್ಲೀಷ್ ಭಾಷೆಯಲ್ಲಿ ಮಾತನಾಡಿದರೆ ಕೊಡವಾಮೆ ಬೆಳೆಯಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ದೇವಯ್ಯ, ಕೊಡವ ಸಂಸ್ಕೃತಿ ಆಚಾರ-ವಿಚಾರದ ಬಗ್ಗೆ ಗೌರವ ಪ್ರೀತಿ ಇರಬೇಕೆಂದು ಹೇಳಿದರು.

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಡಾ.ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಮಾತನಾಡಿ, ಕೊಡವ ಭಾಷೆ ಹಾಗೂ ಸಾಹಿತ್ಯವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಕೊಡವ ಕಿರುನಾಟಕ ಸ್ಪರ್ಧೆಯನ್ನು ಕೂಡ ಅದೇ ಉದ್ದೇಶದಿಂದ ಆಯೋಜಿಸಲಾಗಿದೆ. ಸ್ಪರ್ಧೆಯಲ್ಲಿ ಸುಮಾರು ೬ ತಂಡಗಳು ಭಾಗವಹಿಸಿವೆ ಎಂದು ಹೇಳಿದರು.

ವೇದಿಕೆಯಲ್ಲಿ ಅತಿಥಿಗಳಾಗಿ ಹಿರಿಯ ಸಾಹಿತಿಗಳಾದ ಬಾಚರಣಿಯಂಡ ಅಪ್ಪಣ್ಣ, ಮೊಣ್ಣಂಡ ಶೋಭಾ ಸುಬ್ಬಯ್ಯ, ಬಾಚರಣಿಯಂಡ ರಾಣು ಅಪ್ಪಣ್ಣ, ರಂಗಭೂಮಿ ಕಲಾವಿದ ಮಾದೇಟಿರ ಬೆಳ್ಯಪ್ಪ, ತೂಕ್‌ಬೊಳಕ್ ಪತ್ರಿಕೆ ಸಂಪಾದಕ ಮುಲ್ಲೇಂಗಡ ಮಧೋಶ್ ಪೂವಯ್ಯ, ಅಕಾಡೆಮಿ ಸದಸ್ಯ ತೇಲಪಂಡ ಕವನ್ ಕಾರ್ಯಪ್ಪ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net