

ಗೋಣಿಕೊಪ್ಪ: ಕೊಡವ ಪ್ರೀಮಿಯರ್ ಲೀಗ್‌ನ ದ್ವಿತೀಯ ಅವೃತ್ತಿಯ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮೈಸೂರು ಮಕ್ಕ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿದೆ.
ಕೊಡವ ಸ್ಪೋರ್ಟ್ಸ್ ಅಸೋಸಿಯೇಷನ್ ಕೊಡಗು ಸಂಸ್ಥೆ ವತಿಯಿಂದ ವಿರಾಜಪೇಟೆ ನಗರದ ಸಂತ ಅನ್ನಮ್ಮ ಕಾಲೇಜು ಮೈದಾನದಲ್ಲಿ ಸೋಮವಾರ ಆಯೋ ಜಿಸಿದ್ದ ಫೈನಲ್ ಪಂದ್ಯದಲ್ಲಿ ಕೈಮಡ ತಂಡವನ್ನು 30 ರನ್‌ಗಳಿಂದ ಮಣಿಸಿ ವಿಜಯ ಮಾಲೆಗೆ ಕೊರಳೊಡ್ಡಿತ್ತು.
ಫೈನಲ್‌ನಲ್ಲಿ ಕೈಮಡ ತಂಡವು ಟಾಸ್ ಗೆದ್ದು ಎದುರಾಳಿ ಮೈಸೂರು ಮಕ್ಕ ತಂಡಕ್ಕೆ ಬ್ಯಾಟಿಂಗ್‌ಗೆ ಅಹ್ವಾನ ನೀಡಿತು. ಮೈಸೂರು ಮಕ್ಕ ತಂಡ ನಿಗದಿತ 6 ಓವರ್‌ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 94 ರನ್ ಗಳಿಸಿತು. ತಂಡದ ಪರವಾಗಿ ಅಟ್ರಂಗಡ ಶರತ್ ಸೋಮಯ್ಯ 27 ಎಸೆತಗಳಲ್ಲಿ 77 ರನ್ ಗಳಿಸುವ ಮೂಲಕ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದರು. ಇದಕ್ಕೆ ಪ್ರತಿಯಾಗಿ ಕೈಮಡ ತಂಡ 7 ವಿಕೆಟ್ ನಷ್ಟಕ್ಕೆ 65 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲು ಅನುಭವಿಸಿತು. ಮೈಸೂರು ಮಕ್ಕ ತಂಡದ ಪರವಾಗಿ ಶರತ್ ಸೋಮಯ್ಯ 2 ವಿಕೆಟ್ ಕಬಳಿಸಿದರು. ಸಂತೋಷ್, ರೋಹಿತ್, ಮೇಗನ್ ಮತ್ತು ಪ್ರೇಮ್ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.
ಚಾಂಪಿಯನ್ ಮೈಸೂರು ಮಕ್ಕ ತಂಡಕ್ಕೆ ಆಕರ್ಷಕ ಟ್ರೋಫಿ ಮತ್ತು 1.50 ಲಕ್ಷ ರೂ. ನಗದು, ರನ್ನರ್ ಅಪ್ ಸ್ಥಾನ ಪಡೆದ ಕೈಮಡ ತಂಡಕ್ಕೆ ಟ್ರೋಫಿ ಮತ್ತು 75 ಸಾವಿರ ರೂ. ನಗದು, ತೃತೀಯ ಸ್ಥಾನ ಗಳಿಸಿದ ಕೊಡವ ಟ್ರೆಂಬ್ಸ್ ತಂಡಕ್ಕೆ ಟ್ರೋಫಿ ಮತ್ತು 30 ಸಾವಿರ ರೂ. ನಗದು ಹಾಗೂ ನಾಲ್ಕನೇ ಸ್ಥಾನ ಪಡೆದ ಎಂ.ಟಿ.ಬಿ. ರಾಯಲ್ಸ್ ತಂಡಕ್ಕೆ ಆಕರ್ಷಕ ಟ್ರೋಫಿ ನೀಡಿ ಗೌರವಿಸಲಾಯಿತು. ಫೈನಲ್ ಪಂದ್ಯ ಪುರುಷೋತ್ತಮ, ಸರಣಿ ಪುರುಷೋತ್ತಮ ಮತ್ತು ಉತ್ತಮ ಬ್ಯಾಟ್ಸ್‌ಮನ್ ಪ್ರಶಸ್ತಿಯನ್ನು ಮೈಸೂರು ಮಕ್ಕ ತಂಡದ ಅಟ್ರಂಗಡ ಶರತ್ ಸೋಮಯ್ಯ ಪಡೆದುಕೊಂಡರು. ಉತ್ತಮ ಬೌಲರ್ ಆಗಿ ನಿಖಿತಾ ಚೆಂಗಪ್ಪ, ಉತ್ತಮ ಕೀಪರ್ ಆಗಿ ಬೆಂಗಳೂರು ಬಬ್ಬಂಗಾ ತಂಡದ ಮಾದಂಡ ಬೋಪಣ್ಣ, ಉತ್ತಮ ಫೀಲ್ಡರ್ ಆಗಿ ಟೀಮ್ ಕೈಮಡ ತಂಡದ ಮಚ್ಚಮಾಡ ಬೋಪ್ಪಣ ಮತ್ತು ಉದಯೋನ್ಮುಖ ಆಟಗಾರ ಪ್ರಶಸ್ತಿಯನ್ನು ಮಾಳೇಟಿರ ಅನುಶುನ್ ಪಡೆದುಕೊಂಡರು.
ಕೊಡವ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಗೆ ನ.24ರಂದು ಚಾಲನೆ ನೀಡಲಾಗಿತ್ತು. ಪಂದ್ಯಾವಳಿ ಐ.ಪಿ.ಎಲ್ ಮಾದರಿಯಲ್ಲಿ ಅಯೋಜಿಸಲಾಗಿತ್ತು. ಒಟ್ಟು 12 ತಂಡಗಳು ಭಾಗವಹಿಸಿದ್ದವು.