

ವಿಜಯವಾಣಿ ಸುದ್ದಿಜಾಲ ಮಡಿಕೇರಿ
ಸುಪ್ರೀಂಕೋರ್ಟ್‌ನಲ್ಲಿ ದಾವೆ ಹೂಡುವುದರ ಮೂಲಕ ಸ್ವಾಯತ್ತ ಕೊಡವ ಲ್ಯಾಂಡ್ ಮುಂದಿನ ವರ್ಷ ನವೆಂಬರ್ ೨೬ ರೊಳಗೆ ಅಸ್ತಿತ್ವಕ್ಕೆ ಬರುವಂತೆ ಮಾಡುತ್ತೇನೆಂದು ಮಾಜಿ ಕೇಂದ್ರ ಕಾನೂನು ಸಚಿವ ಡಾ.ಸುಬ್ರಮಣಿಯನ್ ಸ್ವಾಮಿ ಘೋಷಿಸಿದರು.
ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‌ಸಿ) ಆಶ್ರಯದಲ್ಲಿ ಕ್ಯಾಪಿಟಲ್ ವಿಲೇಜ್‌ನಲ್ಲಿ ಶನಿವಾರ ಆಯೋಜಿಸಿದ್ದ ೩೨ನೇ ವರ್ಷದ ಕೊಡವ ನ್ಯಾಷನಲ್ ಡೇಯಲ್ಲಿ ಮುಖ್ಯಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ಜನವರಿಯಲ್ಲಿ ತಮ್ಮ ತಂಡದ ವಕೀಲರು ಸುಪ್ರೀಂಕೋರ್ಟ್ ನಲ್ಲಿ ದಾವೆ ಹೂಡಲಿದ್ದಾರೆ. ನಾನೇ ಖುದ್ದು ವಾದಿಸುವುದರ ಮೂಲಕ ಕೊಡವ ಲ್ಯಾಂಡ್ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದರು.
ಕೊಡವರಿಗೆ ಸ್ವಾಯತ್ತ ನಾಡು ಕೇಳಲು ಸಂವಿಧಾನಾತ್ಮಕವಾಗಿ ಎಲ್ಲಾ ಹಕ್ಕಿದೆ. ಬಿ.ಎಸ್.ಯಡಿಯೂರಪ್ಪ ೨ ವರ್ಷದಲ್ಲಿ ಕೊಡವ ಸ್ವಾಯತ್ತ ನಾಡಿನ ಬೇಡಿಕೆ ಈಡೇರಿಸುವುದಾಗಿ ಹೇಳಿದ್ದರು. ಆದರೆ, ಅವರು ಅಧಿಕಾರದಿಂದ ನಿರ್ಗಮಿಸಿದ್ದಾರೆ. ಹಾಲಿ ಸಿಎಂ ಬಸವರಾಜು ಬೊಮ್ಮಾಯಿ ಅವರಿಗೆ ಸಿಎನ್‌ಸಿ ಬೇಡಿಕೆ ಬಗ್ಗೆ ತಿಳುವಳಿಕೆ ಇದ್ದಂತೆ ಕಾಣುತ್ತಿಲ್ಲ. ಹೀಗಾಗಿ ಸುಪ್ರೀಂಕೋರ್ಟ್‌ನಲ್ಲಿ ತಾನೇ ಕೊಡವರ ಬೇಡಿಕೆ ಪರ ದಾವೆ ಹೂಡುವುದಾಗಿ ಹೇಳಿದರು.
ಗೋವಾ, ತೆಲಂಗಾಣ, ಉತ್ತರಖಂಡ್ ನಿರಂತರ ಹೋರಾಟದ ಫಲವಾಗಿ ಪ್ರತ್ಯೇಕ ರಾಜ್ಯಗಳಾಗಿವೆ. ಕೊಡವರು ಎಂದೆಂದಿಗೂ ಈ ದೇಶದ ಅಂಗವಾಗಿಯೇ ಉಳಿಯಲಿದ್ದಾರೆ. ತಮ್ಮ ಹಕ್ಕು ಉಳಿಸಿಕೊಳ್ಳುವುದಕ್ಕಾಗಿ ಪ್ರತ್ಯೇಕ ಹೋಂ ಲ್ಯಾಂಡ್ ಕೇಳುತ್ತಿದ್ದಾರೆ. ಇದಕ್ಕೆ ನನ್ನ ಸಂಪೂರ್ಣ ಸಹಕಾರ ಮತ್ತು ಬೆಂಬಲವಿದೆ. ಮುಂದಿನ ವರ್ಷ ಪ್ರತ್ಯೇಕ ಕೊಡವ ಹೋಂ ಲ್ಯಾಂಡ್ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸೋಣ. ಇಡೀ ಭಾರತೀಯರು ಕೊಡವರ ಪರವಾಗಿ ಇದ್ದಾರೆಂದು ಡಾ.ಸ್ವಾಮಿ ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿಎನ್‌ಸಿ ಅಧ್ಯಕ್ಷ ನಂದಿನೆರವಂಡ ನಾಚಪ್ಪ ಕೊಡವ, ಸಂವಿಧಾನದ ಆಶಯದಂತೆ ತಮ್ಮ ಬೇಡಿಕೆ ಈಡೇರಿಕೆ ಗಾಗಿ ಕಾರ್ಯನಿರ್ವಹಿಸುತ್ತಿದ್ದೇವೆ. ಸಂವಿಧಾನ ಸಂಪೂರ್ಣವಾಗಿ ಅರಿತುಕೊಂಡಾಗ ಮಾತ್ರ ಕೊಡವರ ನ್ಯಾಯುತ ಹಕ್ಕುಗಳನ್ನು ಪಡೆಯ ಲು ಸಾಧ್ಯ ಎಂದರು.
ಕೊಡಗು, ಕರ್ನಾಟಕ ರಾಜ್ಯದೊಂದಿಗೆ ಲೀನವಾಗುವ ಮೊದಲು ರಾಮರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಅಗಸ್ತ್ಯ ಮುನಿಗಳು ತಪಸ್ಸು ಮಾಡಿದ ಮತ್ತು ಕಾವೇರಿ ನದಿ ಉದ್ಭಸಿದ ಪತ್ರ ಭೂಮಿ ಇಂದು ಭೂ ಮಾಫಿಯಾಗಳ ತಾಣವಾಗಿದೆ. ೧೯೫೬ರಲ್ಲಿ ಜನರ ಒಪ್ಪಿಗೆಗೆ ವಿರುದ್ಧವಾಗಿ ಲೀನ ಮಾಡಲಾಗಿದೆ ಎಂದು ಟೀಕಿಸಿದರು.
ಡಾ.ಸುಬ್ರಮಣ್ಯನ್ ಸ್ವಾಮಿ ಭೂಮಿ ತೂಕದ ಮನುಷ್ಯ. ರಾಜಕರಣದಲ್ಲಿ ಎಷ್ಟು ದಿನ ಅಧಿಕಾರಿದಲ್ಲಿ ಇದ್ದೆ ಎನ್ನುವುದಕ್ಕಿಂತ ಇರುವಷ್ಟು ದಿನ ಜನರಿಗಾಗಿ ಏನು ಮಾಡಿದ್ದೇನೆ ಎನ್ನುವುದು ಮುಖ್ಯವಾಗುತ್ತದೆ. ಇದನ್ನು ಸುಬ್ರಮಣ್ಯನ್ ಸ್ವಾು ಅವರು ಮಾಡಿ ತೋರಿಸಿದ್ದಾರೆ ಎಂದು ಶ್ಲಾಘಿಸಿದರು.
ಸುಪ್ರೀಂಕೋರ್ಟ್ ವಕೀಲ ಸತ್ಯ ಸಬರವಾಲ್ ಮಾತನಾಡಿ, ಸದ್ಯದಲ್ಲೇ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿ ಸ್ವಾಯತ್ತ ಕೊಡವ ಲ್ಯಾಂಡ್‌ಗಾಗಿ ಮಂಡಿಸುವುದಾಗಿ ತಿಳಿಸಿದರು. ಕೊಡವ ಲ್ಯಾಂಡ್‌ಗೆ ರಾಜಕೀಯ ಸ್ವಾಯತ್ತತೆ ನೀಡುವ ವಿಚಾರದಲ್ಲಿ ಜಯ ತಂದುಕೊಡುವುದಾಗಿ ಭರವಸೆ ನೀಡಿದರು.
ಸಿಎನ್‌ಸಿ ಪ್ರಮುಖರು ಗಾಳಿಯಲ್ಲಿ ಗುಂಡು ಹಾರಿಸಿ ಕೊಡವರ ಕೋವಿ ಹಕ್ಕನ್ನು ಪ್ರತಿಪಾದಿಸಿದರು. ಸಿಎನ್‌ಸಿ ಅಧ್ಯಕ್ಷ ನಾಚಪ್ಪ ಪ್ರತಿಜ್ಞಾ ವಿಧಿ ಬೋಧಿಸಿದರು. ವೇದಿಕೆಯಲ್ಲಿ ಸಿಎನ್‌ಸಿ ಪ್ರಮುಖರಾದ ಕಲಿಯಂಡ ಪ್ರಕಾಶ್ ಕೊಡವ ಇದ್ದರು.
ಹಕ್ಕೊತ್ತಾಯ ಮಂಡನೆ
ಕೊಡವ ಮೂಲ ವಂಶಸ್ಥ ಬುಡಕಟ್ಟು ಸಮುದಾಯಕ್ಕೆ ಎಸ್‌ಟಿ ಪಟ್ಟಿಯಲ್ಲಿ ಮಾನ್ಯತೆ ನೀಡಬೇಕು, ಕೊಡವರ ಧಾರ್ಮಿಕ ಸಂಸ್ಕಾರ ಕೋವಿಗೆ ಸಂವಿಧಾನದ ೨೫, ೨೬ ನೇ ವಿಧಿಯಲ್ಲಿ ವಿಶೇಷ ಭದ್ರತೆ ಒದಗಿಸಬೇಕು, ಕೊಡವ ತಕ್‌ಗೆ ೮ನೇ ಶೆಡ್ಯೂಲ್ ಸ್ಥಾನಮಾನ ನೀಡಬೇಕು, ಅರಮನೆ ಪಿತೂರಿ ಮತ್ತು ದೇವಟ್‌ಪರಂಬು ನರಮೇಧದಲ್ಲಿ ಜೀವ ಕಳೆದುಕೊಂಡ ಕೊಡವರ ಸ್ಮರಣೆಗಾಗಿ ಸ್ಮಾರಕ ನಿರ್ಮಾಣ ಮಾಡ ಬೇಕು, ಕೊಡವರ ಭೂಮಿ, ಸಂಸ್ಕೃತಿ, ಜನಪದ, ಪರಂಪರೆ, ಆರ್ಥಿಕ ಮತ್ತು ರಾಜಕೀಯ ಸ್ವಾತಂತ್ರ್ಯಕ್ಕಾಗಿ ಈಶಾನ್ಯ ರಾಜ್ಯದ ಮಾದರಿ ೩೭೧ (ಕೆ) ವಿಧಿಯಂತೆ ರಾಜ್ಯಾಂಗದ ವಿಶೇಷ ಖಾತ್ರಿಗೆ ಸಂಬಂಧಿಸಿದ ನಿರ್ಣಯ ಸೇರಿದಂತೆ ಕೊಡವರ ತಾಸಕ್ತಿ ಕಾಪಾಡುವ ಪ್ರಮುಖ ಹಕ್ಕೊತ್ತಾಯ ಮಂಡಿಸಿ ಅಂಗೀಕರಿಸಲಾಯಿತು.
ವಿರಾಟ್ ಹಿಂದೂಸ್ಥಾನ್ ಸಂಗಂ ಬೆಂಬಲ
ಕೊಡವರು ಶಾಂತಿಯುತವಾಗಿ ತಮ್ಮ ಹಕ್ಕು ಕೇಳುತ್ತಿದ್ದಾರೆ. ಸ್ವಾಯತ್ತ ಕೊಡವ ಲ್ಯಾಂಡ್ ಕೇಳುತ್ತಿರುವುದು ದೇಶ ವಿರೋಧಿ ಕೃತ್ಯವಲ್ಲ ಎಂದು ವಿರಾಟ್ ಹಿಂದೂಸ್ತಾನ್ ಸಂಗಂ ರಾಷ್ಟ್ರೀಯ ಕಾರ್ಯದರ್ಶಿ ಜಗದೀಶ್ ಶೆಟ್ಟಿ ಹೇಳಿದರು. ಸಂವಿಧಾನಾತ್ಮಕವಾಗಿ ಸಿಎನ್‌ಸಿ ಕೇಳುತ್ತಿರುವ ಬೇಡಿಕೆ ಈಡೇರಿಕೆಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಘೋಷಿಸಿದರು.
ಚಿದಂಬರಂ, ರಾಹುಲ್ ಜೈಲಿಗೆ
ಕೊಡಗಿನಲ್ಲಿ ಕಾಫಿ ತೋಟ ಹೊಂದಿರುವ ಪಿ.ಚಿದಂಬರಂ ಶೀಘ್ರ ಜೈಲಿಗೆ ಹೋಗುತ್ತಾರೆ. ರಾಹುಲ್ ಗಾಂಧಿ ಕೂಡ ಯಂಗ್ ಇಂಡಿಯಾ ಪ್ರಕರಣದಲ್ಲಿ ಜೈಲಿಗೆ ಹೋಗುತ್ತಾರೆಂದು ಡಾ.ಸುಬ್ರಮಣಿಯನ್ ಸ್ವಾಮಿ ಹೇಳಿದರು.
ರಾಹುಲ್ ಗಾಂಧಿ ಕೊಡಗಿನಲ್ಲಿ ಜಾಗ ಖರೀದಿಸಿರುವ ಸಾಧ್ಯತೆ ಇದ್ದು, ಅದನ್ನು ಪರಿಶೀಲಿಸುತ್ತಿದ್ದೇನೆ. ರಾಜೀವ್ ಗಾಂಧಿ ನನ್ನ ಆಪ್ತರಾಗಿ ದ್ದರು. ಆದರೆ, ಅವರ ಪತ್ನಿ ಎಂದಿಗೂ ನನಗೆ ಹಿಡಿಸಲಿಲ್ಲ ಎಂದು ವ್ಯಂಗ್ಯವಾಗಿ ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಚೀನಾದ ವಿರುದ್ಧ ಹೋರಾಡುವ ಎದೆಗಾರಿಕೆ ಹೊಂದಿಲ್ಲ ಎಂದು ಟೀಕಿಸಿದರು.
ಮೋತಿ ಆರ್ಥಿಕ ನೀತಿ ಸರಿ ಇಲ್ಲ. ಇದನ್ನು ಹಲವು ಬಾರಿ ಬಹಿರಂಗವಾಗಿ ಟೀಕಿಸಿದ್ದೇನೆ. ಹೀಗಿದ್ದರೂ, ಒಮ್ಮೆಯೂ ಈ ಟೀಕೆಗೆ ಪ್ರತಿಕ್ರಿಯೆ ನೀಡುವ ಗೋಜಿಗೆ ಹೋಗಿಲ್ಲ. ಪ್ರಧಾನಿ ಆಕಾಶದಿಂದ ಬಿದ್ದವರಲ್ಲ ಮತ್ತು ಪ್ರಶ್ನಾತೀತರಲ್ಲ. ಜನರಿಂದ ಪ್ರಧಾನಿ ಹುದ್ದೆಗೆ ಆಯ್ಕೆಯಾಗಿದ್ದು, ಜನರ ಪ್ರಶ್ನೆಗೆ ಉತ್ತರಿಸಬೇಕೆಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
ಗೆಜ್ಜೆತಂಡ್ ಉಡುಗೊರೆ
ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‌ಸಿ) ಶನಿವಾರ ಕ್ಯಾಪಿಟಲ್ ವಿಲೇಜ್‌ನಲ್ಲಿ ಆಯೋಜಿಸಿದ್ದ ೩೨ನೇ ಕೊಡವ ನ್ಯಾಷನಲ್ ಡೇಯಲ್ಲಿ ಪಾಲ್ಗೊಂಡಿದ್ದ ಮಾಜಿ ಕೇಂದ್ರ ಕಾನೂನು ಸಚಿವ ಡಾ.ಸುಬ್ರಮಣಿಯನ್ ಸ್ವಾಮಿ ಅವರಿಗೆ ಸಿಎನ್‌ಸಿ ಅಧ್ಯಕ್ಷ ಪವಿತ್ರವಾದ ಗೆಜ್ಜೆತಂಡ್ ಉಡುಗೊರೆಯಾಗಿ ನೀಡಿದರು. ಐದು ವರ್ಷ ಹಿಂದೆ ಕೊಡವ ನ್ಯಾಷನಲ್ ಡೇಗೆ ಆಗಮಿಸಿದ್ದ ಡಾ.ಸ್ವಾಮಿಗೆ ನೀಡಿದ್ದ ಪೀಚೆಕತ್ತಿಯಲ್ಲಿ ಮನೆಯಲ್ಲಿ ಜೋಪಾನವಾಗಿ ಇಟ್ಟುಕೊಂಡಿದ್ದಾರೆ. ಕೊಡವರ ಬೇಡಿಕೆ ಈಡೇರಿಕೆಗೆ ಹೆಚ್ಚಿನ ಮುತುವರ್ಜಿ ವಹಿಸಿರುವುದರಿಂದ ಪವಿತ್ರವಾದ ಗೆಜ್ಜೆತಂಡ್ ಉಡುಗೊರೆಯಾಗಿ ನೀಡುತ್ತಿರುವುದಾಗಿ ನಾಚಪ್ಪ ಕೊಡವ ಹೇಳಿದರು. ವಿರಾಟ್ ಹಿಂದೂಸ್ತಾನ್ ಸಂಗಂ ರಾಷ್ಟ್ರೀಯ ಕಾರ್ಯದರ್ಶಿ ಜಗದೀಶ್ ಶೆಟ್ಟಿ ಅವರಿಗೂ ಗೆಜ್ಜೆತಂಡ್ ಉಡುಗೊರೆಯಾಗಿ ನೀಡಲಾಯಿತು.