

ಗೋಣಿಕೊಪ್ಪ: ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆಎಂಎ) ವತಿಯಿಂದ ಸೋಮವಾರ ರಾತ್ರಿ ಐಮಂಗಲದಲ್ಲಿ (ಕೊಮ್ಮೆತೊಡು) ಹುತ್ತರಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
ರಾತ್ರಿ 8.30ರಲ್ಲಿ ಐಮಂಗಲ ಗ್ರಾಮದ ಕೋಳುಮಂಡ ಕುಟುಂಬಸ್ಥರ ಜಮ್ಮ ಗದ್ದೆಯಲ್ಲಿ ಸಾಂಪ್ರದಾಯಿಕವಾಗಿ ಕದಿರು ತೆಗೆಯುವ ಮೂಲಕ ಹುತ್ತರಿ ಹಬ್ಬ ಆಚರಿಸಲಾಯಿತು. ಕೆಎಂಎ ಅಧ್ಯಕ್ಷ ದುದ್ದಿಯಂಡ ಎಚ್. ಸೂಫಿ ಹಾಜಿ ಕಾರ್ಯಕ್ರಮ ನೇತೃತ್ವ ವಹಿಸಿದ್ದರು.
ಕದಿರು ತೆಗೆದ ಬಳಿಕ ಕೋಳುಮಂಡ ರಫೀಕ್ ಎಂಬುವರ ಮನೆಯಲ್ಲಿ ಸಾಂಪ್ರದಾಯಿಕ ತಂಬಿಟ್ಟು- ಪುತ್ತರಿ ಗೆಣಸು ಉಪಾಹಾರ ಮತ್ತು ಊಟೋಪಚಾರದ ವ್ಯವಸ್ಥೆ ಮಾಡಲಾಯಿತು. ಗದ್ದೆಯಿಂದ ತರಲಾದ ಕದಿರನ್ನು ಊಟದ ನಂತರ ಮನೆಗಳಿಗೆ ಕೊಂಡೊಯ್ಯಲಾಯಿತು.
ಕೆಎಂಎ ಉಪಾಧ್ಯಕ್ಷ ಅಕ್ಕಳತಂಡ ಎಸ್. ಮೊಯ್ದು, ಪ್ರಧಾನ ಕಾರ್ಯದರ್ಶಿ ಈತಲತಂಡ ರಫೀಕ್ ತೂಚಮಕೇರಿ, ಕೋಶಾಧಿಕಾರಿ ಹರಿಶ್ಚಂದ್ರ ಎ.ಹಂಸ, ಜಂಟಿ ಕಾರ್ಯದರ್ಶಿ ಕರತೋರೆರ ಕೆ.ಮುಸ್ತಫ, ಸಂಘಟನಾ ಕಾರ್ಯದರ್ಶಿ ಮೀತಲತಂಡ ಎಂ.ಇಸ್ಮಾಯಿಲ್, ಹಿರಿಯ ನಿರ್ದೇಶಕ ಚಿಮ್ಮಿಚಿರ ಕೆ.ಇಬ್ರಾಹಿಂ(ಉಮ್ಮಣಿ), ನಿರ್ದೇಶಕರಾದ ಕುಪ್ಪಂದಿರ ಕೆ.ಯೂಸಫ್ ಹಾಜಿ, ನಿರ್ದೇಶಕ ಆಲೀರ ಎಂ. ರಶೀದ್, ಸದಸ್ಯ ಕೂತಂಬಟ್ಟೀರ ಹುಸೇನ್ ಇತರರಿದ್ದರು. ಕೊಟ್ಟಮುಡಿ, ಚೆರಿಯಪರಂಬು, ಕುಂಜಿಲ, ಕೊಳಕೇರಿ, ಕೊಂಡಂಗೇರಿ, ಚಾಮಿಯಾಲ, ಗುಂಡಿಕೆರೆ, ನಲ್ವತ್ತೋಕ್ಲು, ಅಂಬಟ್ಟಿ ಕಂಡಂಗಾಲ, ಕಾಟ್ರಕೊಲ್ಲಿ, ಹಳ್ಳಿಗಟ್ಟು, ಬೇಗೂರು, ಐಮಂಗಲ ಗ್ರಾಮಸ್ಥರು ಪಾಲ್ಗೊಂಡಿದ್ದರು.