

ಗೋಣಿಕೊಪ್ಪ: ನಮ್ಮ ದೇಶದ ಶ್ರೇಷ್ಠ ಸಂವಿಧಾನದಿಂದಾಗಿ ದಮನಿತರು, ಶೋಷಿತರು, ಹಿಂದುಳಿದ ವರ್ಗದವರು, ಬಡವರು ಸೇರಿದಂತೆ ತಳ ಸಮುದಾಯಗಳ ಮೇಲೆ ನಾಗರಿಕತೆಯ ಬೆಳಕು ಬೀಳುವಂತಾಯಿತು ಎಂದು ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆಎಂಎ) ಅಧ್ಯಕ್ಷ ದುದ್ದಿಯಂಡ ಎಚ್. ಸೂಫಿ ಹಾಜಿ ಅಭಿಪ್ರಾಯಪಟ್ಟರು.
ಸಂವಿಧಾನ ದಿನಾಚರಣೆ ಅಂಗವಾಗಿ ವಿರಾಜಪೇಟೆಯಲ್ಲಿರುವ ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ಪ್ರಧಾನ ಕಚೇರಿ ಸಭಾಂಗಣದಲ್ಲಿ ಸಂವಿಧಾನದ ಪೀಠಿಕೆ ಫಲಕವನ್ನು ಸೋಮವಾರ ಅನಾವರಣಗೊಳಿಸಿ ಬಳಿಕ ನಡೆದ ಸಮಾರಂಭದಲ್ಲಿ ಮಾತನಾಡಿದರು.
ಧ್ವನಿ ಇಲ್ಲದವರ ಧ್ವನಿಯಾಗಿರುವ ನಮ್ಮ ಸಂವಿಧಾನ ತಳ ಸಮುದಾಯಗಳಿಗೆ ಸಾಮಾಜಿಕ ಭದ್ರತೆ ಒದಗಿಸುವ ಪ್ರಮುಖ ಆಧಾರ ಸ್ತಂಭವಾಗಿದೆ ಎಂದು ಹೇಳಿದರು.
ನಾಗರಿಕರ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳನ್ನು ವ್ಯಾಖ್ಯಾನಿಸಿರುವ ನಮ್ಮ ಸಂವಿಧಾನ ಜಾತ್ಯತೀತತೆ ಮತ್ತು ಸಮಾನತೆಯನ್ನು ಪ್ರತಿಪಾದಿಸಿದೆ. ತಮ್ಮ ಶ್ರೇಷ್ಠ ಚಿಂತನೆ ಮೂಲಕ ತಳ ಸಮುದಾಯಗಳ ಉನ್ನತಿಗಾಗಿ ನೂರಾರು ವರ್ಷಗಳ ದೂರದೃಷ್ಟಿತ್ವದ ಸಂವಿಧಾನ ರೂಪಿಸಿದ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅವರು ಇಂದಿಗೂ ಜನಮಾನಸದಲ್ಲಿ ಸ್ಥಾನ ಪಡೆದಿರುವುದು ಈ ಕಾರಣಕ್ಕಾಗಿಯೇ ಎಂದು ಒತ್ತಿ ಹೇಳಿದರು.
ಸ್ಥೆಯ ಉಪಾಧ್ಯಕ್ಷ ಅಕ್ಕಳತಂಡ ಎಸ್ ಮೊಯ್ದು, ಹಿರಿಯ ನಿರ್ದೇಶಕ ಚಿಮ್ಮಿಚ್ಚಿರ ಕೆ. ಇಬ್ರಾಹಿಂ (ಉಮ್ಮಣಿ), ಪದಾಧಿಕಾರಿಗಳಾದ ಮಂಡೇಂಡ ಎ.ಮೊಯ್ದು, ದುದ್ದಿಯಂಡ ಎಚ್. ಮೊಯ್ದು, ಕೋಳುಮಂಡ ರಫೀಕ್, ಆಲೀರ ಎಚ್. ಅಬ್ದುಲ್ ಲತೀಪ್, ಮಂದಮಾಡ ಮುನೀರ್ ಭಾಗವಹಿಸಿದ್ದರು.