

ಮಡಿಕೇರಿ: ಇನ್ಮುಂದೆ ಕೊಡವ ವಿವಾಹ ಪದ್ಧತಿಯಲ್ಲಿ ಚಾಣ ನೀರ್ ಕೈಪೊ ಬೇಕಾಬಿಟ್ಟಿಯಾಗಿ ಮಾಡುವಂತಿಲ್ಲ. ಗಂಟೆಗಟ್ಟಲೆ ವಧುವನ್ನು ನಿಲ್ಲಿಸಿಕೊಂಡು, ಮದ್ಯದ ಮತ್ತಿನಲ್ಲಿ ಕುಣಿದಾಡುವಂತಿಲ್ಲ. ತಿರಿಬೊಳ್ಚ ಕೊಡವ ಸಂಘ ಅಧ್ಯಕ್ಷೆ ಉಳ್ಳಿಯಡ ಡಾಟಿ ಪೂವಯ್ಯ ಅಧ್ಯಕ್ಷತೆಯಲ್ಲಿ ಮಂಗಳವಾರ ಮಡಿಕೇರಿ ಕೊಡವ ಸಮಾಜ ಸಭಾಂಗಣದಲ್ಲಿ ಆಯೋಜಿಸಿದ್ದ ಕೊಡವ ಸಮುದಾಯದ ಗಣ್ಯರ ಸಭೆಯಲ್ಲಿ ಚರ್ಚಿಸಿ ಮಹತ್ವದ ನಿರ್ಣಯ ತೆಗೆದುಕೊಳ್ಳಲಾಗಿದೆ.
ಕೊಡವರಲ್ಲಿ ವಿವಾಹ ಪದ್ಧತಿಗೆ ವಿಶೇಷತೆ ಇದೆ. ಹಲವು ವೈಶಿಷ್ಯದಿಂದ ಕೊಡವ ವಿವಾಹ ಪದ್ಧತಿ ಗಮನ ಸೆಳೆದಿದೆ. ಇತ್ತೀಚಿನ ವರ್ಷದಲ್ಲಿ ಚಾಣ ನೀರ್ ಕೈಪೊ ಪದ್ಧತಿಯಲ್ಲಿನ ಲೋಪದೋಷದಿಂದ ಪದ್ಧತಿಗೆ ಕಳಂಕ ಬರುವಂತಾಗಿದೆ. ಅದಕ್ಕಾಗಿ ಮೂಲ ಪದ್ಧತಿಗೆ ತಕ್ಕಂತೆ ಚಾಣ ನೀರ್ ಕೈಪೊ ಪದ್ಧತಿ ಮಾಡುವಂತೆ ತೀರ್ಮಾನಿಸಲಾಗಿದೆ.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಡಾ.ಅಮ್ಮಾಟಂಡ ಪಾರ್ವತಿ ಅಪ್ಪಯ್ಯ, ಕೊಡವ ಸಮಾಜಗಳ ಒಕ್ಕೂಟ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ, ವಿವಿಧ ಕೊಡವ ಸಮಾಜ ಅಧ್ಯಕ್ಷರಾದ ಕೊಂಗಂಡ ಎಸ್. ದೇವಯ್ಯ (ಮಡಿಕೇರಿ), ಮೂಕೊಂಡ ಬೋಸ್ ದೇವಯ್ಯ (ಅಮ್ಮತ್ತಿ), ಚೊಟ್ಟೆಕ್ಮಾಡ ರಾಜೀವ್ ಬೋಪಯ್ಯ (ಪೊನ್ನಂಪೇಟೆ), ನಾಪಂಡ ರವಿ ಕಾಳಪ್ಪ (ಮಕ್ಕಂದೂರು), ಯುಕೊ ಸಂಚಾಲಕ ಕೊಕ್ಕಲೇಮಾಡ ಮಂಜು ಚಿಣ್ಣಪ್ಪ ಸೇರಿದ್ದಂತೆ ಗಣ್ಯರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.
ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳನ್ನು ಕೊಡವ ಸಮಾಜ, ಸಂಘ, ಸಂಸ್ಥೆ, ಕಲ್ಯಾಣ ಮಂಟಪಗಳಿಗೆ ಕಳುಹಿಸುವುದರ ಮೂಲಕ ಪದ್ಧತಿಗೆ ಚ್ಯುತಿ ಬರದಂತೆ ನೋಡಿಕೊಳ್ಳುವಂತೆ ಮನವಿ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.