ಕೊಡವ ಮಕ್ಕಡ ಕೂಟದ ೬೦ನೇ ಕೃತಿ ಮನಸ್ಸು ಲೋಕಾರ್ಪಣೆ

7mdkn5 - Copy
Published on

ವಿಜಯವಾಣಿ ಸುದ್ದಿಜಾಲ ಮಡಿಕೇರಿ
ಕೊಡವ ಮಕ್ಕಡ ಕೂಟ ಪ್ರಕಟಿತ ೬೦ನೇ ಕೃತಿಯಾಗಿ ಬರಹಗಾರ್ತಿ ಮಾಳೇಟಿರ ಸೀತಮ್ಮ ವಿವೇಕ್ ರಚಿತ ಮನಸ್ಸು ಕೃತಿ ಸೋಮವಾರ ಪತ್ರಿಕಾ ಭವನದಲ್ಲಿ ಲೋಕಾರ್ಪಣೆಗೊಂಡಿತು.

ಮುಖ್ಯಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಹಿರಿಯ ಸಾಹಿತಿ ಕಸ್ತೂರಿ ಗೋಂದಮ್ಮಯ್ಯ, ಬರಹಗಾರರು ಹಾಗೂ ಪ್ರಕಟಿಸಿದವರ ಶ್ರಮ ಫಲಿಸಬೇಕಾದರೆ ಪ್ರತಿಯೊಬ್ಬರು ಪುಸ್ತಕ ಖರೀದಿಸಿ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕೆಂದರು. ಇಂದು ಪುಸ್ತಕ ಖರೀದಿಸುವ ಮತ್ತು ಓದುವ ಹವ್ಯಾಸ ಕಡಿಮೆಯಾಗಿದೆ. ಮಕ್ಕಳಾದಿಯಾಗಿ ಎಲ್ಲರೂ ಮೊಬೈಲ್‌ನೊಂದಿಗೇ ಇರುತ್ತಾರೆ. ಮಕ್ಕಳ ಕೈಗೆ ಮೊಬೈಲ್ ಬದಲು ಪುಸ್ತಕ ನೀಡುವ ಮೂಲಕ ಓದುವ ಅಭಿರುಚಿ ಬೆಳೆಸಬೇಕೆಂದು ಕರೆ ನೀಡಿದರು.

ಸಾಹಿತಿಗಳಿಗೆ ಓದುಗರ ಪ್ರೋತ್ಸಾಹಬೇಕು. ಕೇವಲ ಪುಸ್ತಕ ಕೊಂಡುಕೊಂಡರೆ ಸಾಲದು. ಓದುವ ಪ್ರವೃತ್ತಿ ರೂಢಿಸಿಕೊಳ್ಳಬೇಕು. ಮನಸ್ಸು ಕೃತಿಯಲ್ಲಿ ಮನಸ್ಸಿನ ವೈವಿಧ್ಯತೆ ವಿವರಿಸಲಾಗಿದೆ. ತನುವಿಗೂ ಮನಸ್ಸಿಗೂ ಇರುವ ಸೂಕ್ಷ್ಮ ಸಂಬಂಧಗಳನ್ನು ಅಚ್ಚುಕಟ್ಟಾಗಿ ನಿರೂಪಿಸಲಾಗಿದೆ ಎಂದು ಕಸ್ತೂರಿ ಗೋವಿಂದಮ್ಮಯ್ಯ ಮೆಚ್ಚುಗೆ ವ್ಯಕ್ತ ಪಡಿಸಿದರು.

ಮನಸ್ಸು ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಮೂರ್ನಾಡು ವಿದ್ಯಾಸಂಸ್ಥೆ ಗೌರವ ಕಾರ್ಯದರ್ಶಿ ಪೆಮ್ಮಡಿಯಂಡ ವೇಣು ಅಪ್ಪಣ್ಣ, ಕ್ರೀಡಾ ಸಾಧಕರ ಜಿಲ್ಲೆಯಲ್ಲಿ ಸಾಹಿತ್ಯ ಕೃಷಿ ಕೂಡ ನಡೆಯುತ್ತಿರುವುದು ಶ್ಲಾಘನೀಯವೆಂದರು. ಉತ್ತಮ ಸಮಾಜ ನಿರ್ಮಾಣಕ್ಕೆ ಪುಸ್ತಕಗಳು ಹೆಚ್ಚು ಸಹಕಾರಿಯಾಗಿದೆ. ಅಗೋಚರ ಇಂದ್ರಿಯ ಮನಸ್ಸು ಕುರಿತು ಪುಸ್ತಕ ರಚನೆಯಾಗಿದ್ದು, ಇದರಲ್ಲಿ ಭಾಷಾ ಪಾಂಡಿತ್ಯ ಮೇಳೈಸಿದೆ ಎಂದರು.

ಬರಹಗಾರ್ತಿ ಮಾಳೇಟಿರ ಸೀತಮ್ಮ ವಿವೇಕ್ ಮಾತನಾಡಿ, ಶಾರೀರಿಕವಾಗಿ ಹೆಣ್ಣು, ಗಂಡು ಎಂಬ ಬೇಧವಿದೆ. ಆದರೆ, ಮನಸ್ಸಿಗೆ ಯಾವುದೇ ಬೇಧಭಾವವಿಲ್ಲ. ಲೋಕಚಿತ್ತ ಸ್ಮತಿಸ್ತರ ಆಧ್ಯಾತ್ಮದಿಂದ ಪ್ರೇರಣೆಗೊಳ್ಳುವ ಮನಸ್ಸು ಅವಶ್ಯಕ ಇಂದ್ರಿಯವಾಗಿದೆ. ಉಸಿರಿನ ಮೂಲಕ ಪ್ರಕೃತಿಯೊಂದಿಗೆ ಸಂಪರ್ಕ ಸಾಧಿಸುವ ಮನಸ್ಸಿನ ಕುರಿತು ವಿವಿಧ ಧರ್ಮಗುರುಗಳಿಂದ ಮಾಹಿತಿ ಕಲೆ ಹಾಕಿ ಪುಸ್ತಕ ರಚಿಸಲಾಗಿದೆ. ಇದೊಂದು ಅಧ್ಯಯನ ಗ್ರಂಥವಾಗಿಉಳಿದುಕೊಳ್ಳುವ ಸಾಧ್ಯತೆ ಇದೆ ಎಂದರು.

ತಮ್ಮ ಪುತ್ರಿ ಸೀತಮ್ಮ ಅವರಿಗೆ ಇರುವ ಕ್ರೀಡಾ ಆಸಕ್ತಿ ಬಗ್ಗೆ ತಂದೆ ಕಂಬೀರಂಡ ಕಿಟ್ಟು ಕಾಳಪ್ಪ ಮಾತನಾಡಿದರು. ಕೊಡವ ಮಕ್ಕಡ ಕೂಟ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಮಾತನಾಡಿ, ಸಾಮಾಜಿಕ ಕಳಕಳಿ, ಕೊಡಗಿನ ಅಭ್ಯುದಯದ ಕಾಳಜಿ, ಸಂಸ್ಕೃತಿ, ಸಾಹಿತ್ಯ ಬೆಳೆವಣಿಗೆಯ ಆಸಕ್ತಿಯೊಂದಿಗೆ ಕೂಟ ನಿರಂತರ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ ಎಂದರು.

ಕೊಡವ, ಕನ್ನಡ, ಇಂಗ್ಲೀಷ್, ಹಿಂದಿ ಸೇರಿದಂತೆ ಒಟ್ಟು ೫೯ ಪುಸ್ತಕ ಹೊರ ತಂದು ಸಾತ್ಯಾಸಕ್ತರಿಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ. ಇದು ಕೊಡವ ಮಕ್ಕಡ ಕೂಟ ಹೊರ ತರುತ್ತಿರುವ ೬೦ನೇ ಪುಸ್ತಕವಾಗಿದೆ. ಕೊಡವ ಮಕ್ಕಡ ಕೂಟ ಪ್ರಕಟಿಸಿರುವ ೫೯ ಪುಸ್ತಕಗಳಲ್ಲಿ ೫ ಪುಸ್ತಕಕ್ಕೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಪುಸ್ತಕ ಪ್ರಶಸ್ತಿ ಲಭಿಸಿದೆ. ೩ ಕೃತಿ ಆಧರಿಸಿ ಕೊಡವ ಚಲನಚಿತ್ರ ನಿರ್ಮಿಸಲಾಗಿದೆ. ಹಲವು ದಾಖಲೀಕರಣ ಪುಸ್ತಕ, ಸಾಧಕರ ವಿವರದ ಪುಸ್ತಕ ಕೊಡಗಿನ ಹಾಗೂ ಕೊಡವ ಆಚಾರ, ವಿಚಾರ ಸಂಬಂಧಪಟ್ಟಂತ ಪುಸ್ತಕ, ಕೊಡಗಿನ ಮಹಾವೀರ ಚಕ್ರ ಪುರಸ್ಕೃತ ವೀರ ಯೋಧರ ಪುಸ್ತಕ ಲೋಕಾರ್ಪಣೆಗೊಳಿಸಲಾಗಿದೆ ಎಂದು ತಿಳಿಸಿದರು. ಸೀತಮ್ಮ ಅವರ ತಾಯಿ ಕಂಬೀರಂಡ ಮುತ್ತಮ್ಮ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net